ಸುಳ್ಳು ಜ್ವಾಲಾಮುಖಿಯಾಗಿ ಎಷ್ಟೇ ಹರಡಿದರೂ, ಕೊನೆಯಲ್ಲಿ ಸತ್ಯವೇ ಗೆಲ್ಲಲಿದೆ. ಅಪಪ್ರಚಾರದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಹೇಳದಿದ್ದರೆ, ಇನ್ನಷ್ಟು ಅಪಪ್ರಚಾರದಲ್ಲಿ ಬಿಜೆಪಿ ತೊಡಗಿಸಿಕೊಳ್ಳಬಹುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಾನುವಾರ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರ ಸಭೆ ಹಾಗೂ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ರಮಾನಾಥ ರೈ ಹೇಳಿದ್ದಿಷ್ಟು.
- ನಾನು ಅಪ್ರಾಮಾಣಿಕನೆಂದು ಸಾಬೀತುಪಡಿಸಿದರೆ, ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ
- ಕ್ಷೇತ್ರದ ಜನರ ಅಭಿವೃದ್ಧಿಗಾಗಿ ತಾನು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ತನಗೆ ತೃಪ್ತಿಯೂ ಇದೆ ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ತನಗೆ ಸೋಲಾಯಿತು.
- ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಕೃತಜ್ಞತೆಗಳು. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಿದ ನಿಮ್ಮ ಜೊತೆ ಯಾವತ್ತೂ ಇರುತ್ತೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ನಾನೆಂದು ಸುಮ್ಮನೆ ಕೂರುವುದಿಲ್ಲ ಜನರ ಜೊತೆಗೆ ಇರುತ್ತೇನೆ. ನಿಮ್ಮ ಪ್ರೀತಿಯ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ
- ಚುನಾವಣೆಯ ಸಂದರ್ಭದಲ್ಲಿ ನನ್ನ ಸಹೋದರ ಸ್ವರ್ಗಸ್ಥರಾದ ಸಂದರ್ಭವೂ ದು:ಖ, ಅಪಪ್ರಚಾರದ ಕಿರುಕುಳ ಎದುರಿಸಬೇಕಾಗಿತ್ತು. ಬಿಳಿಯಾಗಿರುವುದೆಲ್ಲಾ ಹಾಲಲ್ಲ, ಅಲ್ಲೆ ವಿಷವೂ ಇರಬಹುದು ಎಂಬ ತಿಳುವಳಿಕೆಯಿಂದ ಕೆಲಸ ಮಾಡಬೇಕು ಎಂಬ ಎಚ್ಚರ ನಮ್ಮಲ್ಲಿರಬೇಕು
- ನಾನು ಸಚಿವನಾಗಿ ಹಲವಾರು ಇಲಾಖೆಯಲ್ಲಿ ದುಡಿದಿದ್ದೇನೆ. ಆದರೆ ಆಮಿಷಗಳಿಗೆ ಬಲಿಯಾಗಿಲ್ಲ.
- ಪಕ್ಷ ಎಂಟು ಸಲ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಮೂರು ಅವಧಿಯಲ್ಲಿ ಸಚಿವನಾಗಿದ್ದೇನೆ. ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ, ಅಗೌರವ ಆಗದಂತೆ ಕೆಲಸ ಮಾಡಿದ್ದೇನೆ. ಹಗಲಿರುಳು ದುಡಿದಿದ್ದೇನೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸುಳ್ಳು ಜ್ವಾಲಾಮುಖಿಯಾದರೂ ಸತ್ಯಕ್ಕೇ ಜಯ: ರಮಾನಾಥ ರೈ"