www.bantwalnews.com – ಸಂಪಾದಕ: ಹರೀಶ ಮಾಂಬಾಡಿ
15 ದಿನಗಳಲ್ಲ, ನಾಳೆಯೇ ಸಂಜೆ 4 ಗಂಟೆಗೆ ಸದನದಲ್ಲಿ ನಿಮ್ಮ ಬಹುಮತ ಸಾಬೀತುಪಡಿಸಿ. ವಿಶ್ವಾಸಮತ ಯಾಚನೆ ಮಾಡಿ. ಯಾರಿಗೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ.
ಹೀಗೆಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಗುರುವಾರ ಬೆಳಗ್ಗೆ ಎರಡೂ ಕೈಬೆರಳುಗಳಲ್ಲಿ ವಿಕ್ಟರಿ ಸಿಂಬಲ್ ತೋರಿಸುತ್ತಾ ಹಸಿರು ಶಾಲು ಹೊದ್ದು, ಆತ್ಮವಿಶ್ವಾಸದಿಂದಲೇ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿ ಪಟ್ಟ ಏರಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಳೆಯೇ ಬಹುಮತ ಸಾಬೀತುಪಡಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹದಿನೈದು ದಿನಗಳ ಕಾಲ ರಾಜ್ಯಪಾಲರು ಸಮಯ ನೀಡಿದ್ದರೂ ಸುಪ್ರೀಂ ಕೋರ್ಟ್ ಶನಿವಾರ ಸಂಜೆ 4 ಗಂಟೆಗೇ ಬಹುಮತ ಸಾಬೀತುಪಡಿಸಬೇಕು ಎಂಬ ಸೂಚನೆ ನೀಡಿದೆ.
ಈ ಬಗ್ಗೆ ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ಕಾಲಾವಕಾಶ ನೀಡಲು ಸಾಧ್ಯವಿಲ್ಲ. ನಾಳೆಯೇ ವಿಶ್ವಾಸಮತ ಯಾಚನೆಯಾಗಲಿ ಎಂದು ಆದೇಶ ನೀಡಿದೆ.
ಇದೊಂದು ನಂಬರ್ ಗೇಮ್.. ಅತೀ ಹೆಚ್ಚು ಸಂಖ್ಯೆಯ ಅಥವಾ ಬಹುಮತ ಪಡೆದ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವುದು ಸರಿಯಾದ ಕ್ರಮ. ಆದರೆ ವಿಶ್ವಾಸಮತ ಯಾಚನೆ ಸೂಕ್ತ ನಿರ್ಧಾರವಾಗುತ್ತದೆ. ಹೀಗಾಗಿ ನಾಳೆ ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದ್ದು, ಅದಕ್ಕಿಂತ ಮೊದಲೇ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಬೇಕು. ಶಾಸಕರಿಗೆ ಬೇಕಾದ ಸೂಕ್ತ ವ್ಯವಸ್ಥೆ ಮತ್ತು ಭದ್ರತೆಯನ್ನು ಡಿಜಿಪಿ ನೋಡಿಕೊಳ್ಳಬೇಕು. ಅಲ್ಲದೆ ವಿಶ್ವಾಸಮತ ಯಾಚನೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನೂ ಡಿಜಿ ಮತ್ತು ಐಜಿಪಿ ನೋಡಿಕೊಳ್ಳಬೇಕು. ವಿಶ್ವಾಸಮತ ಯಾಚನೆಗೂ ಮೊದಲು ಶಾಸಕರು ಕಡ್ಡಾಯವಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ.
ವಿಧಾನಸಭೆಗೆ ಸ್ಪೀಕರ್ ಆಯ್ಕೆ ಆಗಿರಬೇಕಿರುವುದರಿಂದ ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಲಾಗಿದ್ದು, ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬ ನಿರ್ಧಾರ ಸಂಪೂರ್ಣವಾಗಿ ಹಂಗಾಮಿ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು. ವಿಶ್ವಾಸಮತ ಯಾಚನೆವರೆಗೂ ಸಿಎಂ ಯಡಿಯೂರಪ್ಪ ಅವರ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳದಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇದಲ್ಲದೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ರಾಜ್ಯಪಾಲರ ವಿವೇಚನಾಧಿಕಾರ ಸರಿಯೋ ತಪ್ಪೇ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರ ಮನವಿಗೆ ಸ್ಪಂಧಿಸಿದ ಸುಪ್ರೀಂ ಕೋರ್ಟ್, ವಿಶ್ವಾಸಮತ ಯಾಚನೆಗೂ ಮೊದಲು ಆಂಗ್ಲೋ ಇಂಡಿಯನ್ ನಾಮ ನಿರ್ದೇಶನ ಅಥವಾ ನೇಮಕ ಬೇಡ ಎಂದು ತ್ರಿಸದಸ್ಯ ಪೀಠ ಆದೇಶಿಸಿದೆ.
ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಇದು ಐತಿಹಾಸಿಕ ಆದೇಶ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಶನಿವಾರ ಸದನದಲ್ಲಿ ಬಹುಮತ ಸಾಬೀತು ಪಡಿಸುವ ವೇಳೆ ಸೂಕ್ತ ಭದ್ರತೆ ಒದಗಿಸುವಂತೆ ಡಿಜಿಪಿಗೆ ಆದೇಶಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟಿನ ಆದೇಶದ ಬಳಿಕ ಕ್ಷಿಪ್ರಗತಿಯಲ್ಲಿ ಕರ್ನಾಟಕದ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯಗಳಲ್ಲಿ ಸರಕಾರ ರಚನೆಯ ಆಕಾಂಕ್ಷೆಗಳು ಮತ್ತೆ ಗರಿಗೆದರಿವೆ. ಬಹುಮತ ಸಾಬೀತುಪಡಿಸುವ ಆತ್ಮವಿಶ್ವಾಸವನ್ನು ಬಿಜೆಪಿ ಹೇಳುತ್ತಿದ್ದರೆ, ಯಾವ ರೀತಿ ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ. ಅದಕ್ಕೂ ಮುನ್ನ ನಾಳೆ ಸಂಜೆ 4 ಗಂಟೆವರೆಗೆ ಒಂದೊಂದು ನಿಮಿಷವೂ ಕುತೂಹಲಕಾರಿ ವಿದ್ಯಮಾನಗಳನ್ನು ರಾಜ್ಯದ ಜನತೆ ನೋಡಬೇಕಾಗಬಹುದು!!!
Be the first to comment on "ಸಮಯ: 4 ಗಂಟೆ, ಶನಿವಾರ – ಯಡಿಯೂರಪ್ಪ ಭವಿಷ್ಯ ನಿರ್ಧಾರ"