www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ರಸ್ತೆಯಲ್ಲಿ ಬೈಕಿನಲ್ಲೋ, ಕಾರಿನಲ್ಲೋ ಹೋಗುವಾಗ ಹೊಂಡ ಕಂಡುಬಂದ ಕೂಡಲೇ ಮೊಬೈಲ್ ತೆಗೆದು ಹ್ಯಾಷ್ ಟ್ಯಾಗ್ ಒತ್ತಿ ದೂರು ನೀಡಿ ಆಗುತ್ತದೆ. ಬೆಂಗಳೂರು ಸೇಫ್ ಹೌದಾ, ಅಲ್ಲವಾ, ಇಲ್ಲಿ ನೀರು ಬರುತ್ತದಾ, ಇಲ್ಲವಾ, ಕಸ ಎತ್ತಲಾಗಿದೆಯಾ, ಇಲ್ಲವಾ ಎಂಬುದನ್ನೆಲ್ಲ ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗುತ್ತದೆ. ವೀಕೆಂಡ್ ನಲ್ಲಿ ಎಲ್ಲ ಮಾಲ್ ಗಳು ಹೌಸ್ ಫುಲ್ ಇರುತ್ತವೆ. ವಿದ್ಯಾವಂತರ ಸಂಖ್ಯೆ ಎಲ್ಲರಿಗಿಂದ ಜಾಸ್ತಿ. ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಅಪೇಕ್ಷಿಸುವ ಬೆಂಗಳೂರಿಗರು ಮತದಾನ ಮಾಡಲು ಹಿಂದೇಟು ಹಾಕುತ್ತಾರೆ. ಸಮಸ್ಯೆ ಕುರಿತು ದೂರುತ್ತಾರೆ, ಮತಕೇಂದ್ರಕ್ಕೆ ಬರಲು ಮರೀತಾರೆ ಎಂಬುದು ಬೆಂಗಳೂರು ಮತದಾರರ ಮೇಲಿರುವ ದೂರು. ಇದು ಹಳ್ಳಿಯಲ್ಲಿ ಕುಳಿತು, ಉಚಿತ ಸೌಲಭ್ಯಗಳನ್ನು ಪಡೆದು ಸಣ್ಣಪುಟ್ಟ ಆಡಳಿತಾತ್ಮಕ ಸಮಸ್ಯೆಗಳಿಗೆ ಗೊಣಗಿ ನಾನು ಓಟು ಹಾಕೋದೇ ಇಲ್ಲ ಎಂದು ಹೇಳುವ ಬುದ್ಧಿವಂತರಿಗೂ ಅನ್ವಯಿಸುತ್ತದೆ.
ಸಂಜೆ 5 ಗಂಟೆ ವೇಳೆ ರಾಜ್ಯದ ಮತದಾನ ಪ್ರಮಾಣ ಶೇ.64 ಇದ್ದರೆ, ಬೆಂಗಳೂರಿನಲ್ಲಿ ಶೇ.40ರಷ್ಟೇ ಮತ ಚಲಾವಣೆ ಆಗಿತ್ತು. ಬಾಗಲಕೋಟೆಯಲ್ಲಿ ಶೇ. 62, ತುಮಕೂರಿನಲ್ಲಿ ಶೇ.72.66, ಚಿಕ್ಕಮಗಳೂರಿನಲ್ಲಿ 74.12, ಉತ್ತರ ಕನ್ನಡ ಶೇ. 69, ಬೆಂಗಳೂರಿನಲ್ಲಿ ಶೇ.40, ಹಾವೇರಿಯಲ್ಲಿ ಶೇ.69, ದಕ್ಷಿಣ ಕನ್ನಡದಲ್ಲಿ ಶೇ.72, ಹುಬ್ಬಳ್ಳಿ–ಧಾರವಾಡದಲ್ಲಿ ಶೇ.50, ಬೆಳವಾಗಿಯಲ್ಲಿ ಶೇ.52ರಷ್ಟು ಹಾಗೂ ಮೈಸೂರಿನಲ್ಲಿ ಶೇ.45ರಷ್ಟು ಮತದಾನವಾಗಿದೆ. (ಇದು ಸಂಜೆ 5ರ ಮಾಹಿತಿ)
ದಕ್ಷಿಣ ಕನ್ನಡ ಜಿಲ್ಲೆಯ ಮಾಹಿತಿ ಹೀಗಿದೆ:
ಒಟ್ಟು 72.05 ಶೇ. ಅದರಲ್ಲಿ ಬಂಟ್ವಾಳ ಗರಿಷ್ಠ – 79.07, ಪುತ್ತೂರು 78.47, ಬೆಳ್ತಂಗಡಿ 78, ಸುಳ್ಯ, 75.30, ಮಂಗಳೂರು 71.51, ಮಂಗಳೂರು ಉತ್ತರ 71.29, ದಕ್ಷಿಣ 64.93 ಮತ್ತು ಮೂಡುಬಿದಿರೆ 65 ಶೇ. ಮತದಾನ.. ಇದು 5 ಗಂಟೆಗೆ ದೊರಕಿದ ಮಾಹಿತಿ.
ರಾಜ್ಯವ್ಯಾಪಿ ಮತದಾನವನ್ನು ಗಮನಿಸಿದರೆ, ಗ್ರಾಮಾಂತರ ಭಾಗದಲ್ಲಿ ಮತದಾನ ಜಾಸ್ತಿಯಾಗಿದೆ. ನಗರ ಪ್ರದೇಶಗಳಲ್ಲಿ ಮತಕೇಂದ್ರಕ್ಕೆ ಹೋಗುವವರು ಕಡಿಮೆಯಾಗಿದ್ದಾರೆ ಎಂಬುದು ಬೆಂಗಳೂರು ನಗರದ ಸ್ಪಂದನೆಯನ್ನು ನೋಡಿದಾಗ ಗೊತ್ತಾಗುತ್ತದೆ.
ಯಾವ್ಯಾವ ವಿಧದಲ್ಲಿ ಮತದಾನ ಜಾಗೃತಿ ಮಾಡಿದರೂ ಇದು ನಮಗಲ್ಲ ಎಂದು ಹೇಳುವವರಿಂದಾಗಿ ರಾಜ್ಯವಾರು ಮತದಾನದಲ್ಲೂ ಶೇ. 30 ಮಂದಿ ಮತ ಚಲಾವಣೆ ಮಾಡಿಲ್ಲ. ಮೊಬೈಲ್ ಸಿಮ್ ಉಚಿತ ಸಿಗುತ್ತದೆ ಎಂದು ಕ್ಯೂ ನಿಲ್ಲುವ ಜನರು ಮತದಾನ ಕೇಂದ್ರದಲ್ಲಿ ಕ್ಯೂ ನಿಲ್ಲಲು ಇಷ್ಟಪಡುವುದಿಲ್ಲವೇಕೆ ಹಾಗೂ ಮತದಾನ ಮಾಡುವುದಕ್ಕೆ ಅಷ್ಟೊಂದು ನಿರಾಸಕ್ತಿ ಏಕೆ ಎಂಬುದೂ ಚಿಂತನಾರ್ಹ ವಿಚಾರ. ಯಾವುದಾದರೂ ಯೋಜನೆಗಳು ಬಂದರೆ ಶತಾಯಗತಾಯ ಬ್ರೋಕರುಗಳ ಮೂಲಕವಾದರೂ ಪಡೆಯುವ ಫಲಾನುಭವಿಗಳು, ಸಮಸ್ಯೆ ಬಂದಾಗ ಆಡಳಿತವನ್ನು ದೂರುವವರು, ಕರೆಂಟು ಹೋದಾಗ, ರಸ್ತೆ ಸರಿ ಇಲ್ಲದಾಗ ಸರಕಾರವನ್ನು ಶಪಿಸುವವರು ಓಟು ಹಾಕಲು ಹೋಗಿದ್ದರೆ ಇಂದು ಕನಿಷ್ಠ ಓವರ್ ಆಲ್ ಮತದಾನ ಶೇ.95 ಆಗಬೇಕಿತ್ತು.!!
5.30ರ ವೇಳೆ ಚುನಾವಣಾ ಆಯೋಗ ಪ್ರಕಟಿಸಿದ ಮತದಾನ ವಿವರ ಇಲ್ಲಿದೆ.
Be the first to comment on "ಸಮಸ್ಯೆ ಕುರಿತು ದೂರುತ್ತಾರೆ, ಮತದಾನ ಕೇಂದ್ರಕ್ಕೆ ಹೋಗಲು ಮರೀತಾರೆ!"