ದ.ಕ.ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿ, ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಿ ಮತ್ತು ಕುದ್ರೋಳಿ ಗೋಕರ್ಣನಾಥ ಸನ್ನಿಧಿ ಹಾಗೂ ಗರೋಡಿಗಳಲ್ಲಿ ನಾನು ಪ್ರಮಾಣಕ್ಕೆ ಸಿದ್ಧನಿದ್ದೇನೆ. ಎಲ್ಲಿಯೂ ನಾನು ಹಿಂದುಗಳ ಮತ ಬೇಡ ಎಂದು ಹೇಳಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಿದ್ದರೆ ಬಿಜೆಪಿಯವರು ಸಾಕ್ಷಿ ಕೊಡಲಿ, ಅವರು ಪ್ರಮಾಣಕ್ಕೆ ಸಿದ್ಧರಿದ್ದಾರಾ ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಸವಾಲೆಸೆದಿದ್ದಾರೆ.
ಬಂಟ್ವಾಳ ಕಾಂಗ್ರೆಸ್ ಪ್ರಚಾರ ಸಮಿತಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನೆಂದೂ ಹಿಂದುಗಳ ಓಟು ಬೇಡ ಎಂದು ಹೇಳಿಲ್ಲ. ಹಾಗಿದ್ದರೆ, ಅದಕ್ಕೆ ಸಾಕ್ಷಿ ಕೊಡಲಿ ಎಂದು ಹೇಳಿದರು.
ಕೊಲ್ಲೂರು ದೇವಳವೆಲ್ಲಿ, 150 ಕಿ.ಮೀ. ದೂರದ ಶಾಲೆಗಳೆಲ್ಲಿ ಎಂದು ಪ್ರಶ್ನಿಸಿದ ರೈ, ಎ ಗ್ರೇಡ್ ದೇವಸ್ಥಾನದ ದುಡ್ಡನ್ನು ಸಿ ಗ್ರೇಡ್ ದೇವಸ್ಥಾನಕ್ಕೆ ಕೊಡಬೇಕು. ದುಡ್ಡಿನ ರೂಪದಲ್ಲಿ ಊಟದ ಅನುದಾನವನ್ನು ನೀಡುವ ಕ್ರಮವಿಲ್ಲ ಎಂದು ಕಲ್ಲಡ್ಕ, ಪುಣಚ ಶಾಲೆಗಳಿಗೆ ಬಿಸಿಯೂಟ ರದ್ದು ವಿಚಾರವನ್ನು ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ ಬಿಸಿಯೂಟಕ್ಕೆ ನೀಡುತ್ತಿದ್ದ ದೇವಸ್ಥಾನದ ಅನುದಾನವನ್ನು ರದ್ದುಗೊಳಿಸಿ, ಅಕ್ಷರ ದಾಸೋಹ ಮೂಲಕ ಬಿಸಿಯೂಟಕ್ಕೆ ಅವಕಾಶ ಒದಗಿಸಲಾಗಿತ್ತು. ಬಿಜೆಪಿಯವರು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿಯೇ ದೇವಸ್ಥಾನದ ದುಡ್ಡನ್ನು ಅನ್ಯಕಾರ್ಯಕ್ಕೆ ಬಳಸಬಾರದು ಎಂದಿದೆ. ನಾವು ಅದನ್ನು ಆಗಲೇ ಪಾಲಿಸಿದ್ದೇವೆ, ಬಿಜೆಪಿಯವರು ಈಗ ಏನು ಹೇಳ್ತಾರೆ, ಅದಕ್ಕೆ ಉತ್ರರ ನೀಡಲಿ ಎಂದು ರೈ ತಿರುಗೇಟು ನೀಡಿದರು.
ನಾನು ಕೆಲಸ ಮಾಡಿದ್ದೇನೆ. ಕೆಲಸ ಕಾರ್ಯಗಳಲ್ಲಿ ಉದಾಸೀನ ಮಾಡಿಲ್ಲ. ಸೈದ್ಧಾಂತಿಕ ವಿಚಾರದಲ್ಲಿ ರಾಜಿ ಮಾಡಿಲ್ಲ. ಕ್ರಿಯಾಶೀಲನಾಗಿದ್ದೇನೆ. ನಾನು ಮಾಡಿದ ಕೆಲಸ ನೋಡಿ ಮತ ನೀಡಿ ಎಂದು ರೈ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ಪ್ರಮುಖರಾದ ಬೇಬಿ ಕುಂದರ್, ಬಿ.ಎಚ್. ಖಾದರ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಬಾಲಕೃಷ್ಣ ಆಳ್ವ, ಜಗದೀಶ್ ಕೊಯಿಲ, ಜನಾರ್ದನ ಚಂಡ್ತಿಮಾರ್ ಉಪಸ್ಥಿತರಿದ್ದರು.
Be the first to comment on "ಪೊಳಲಿ, ಧರ್ಮಸ್ಥಳ, ಕುದ್ರೋಳಿಯಲ್ಲಿ ಪ್ರಮಾಣಕ್ಕೆ ಸಿದ್ಧ: ರಮಾನಾಥ ರೈ"