ರಮಾನಾಥ ರೈಅವರ ವಿರುದ್ಧ ಕಲ್ಲಡ್ಕ, ಪುಣಚ ಶಾಲೆಯ ಮಕ್ಕಳ ಅನ್ನ ಕಸಿದಿದ್ದಾರೆ ಎಂದು ಆರೋಪಿಸುವ ಬಿಜೆಪಿ ಮತ್ತು ಸಂಘಪರಿವಾರ, ಸರಕಾರ ನೀಡುವ ಅನ್ನದಾಸೋಹ ಯೋಜನೆ ಯಾಕೆ ನಿರಾಕರಿಸುತ್ತಿವೆ, ಸರಕಾರದ್ದೇ ಕ್ಷೀರಭಾಗ್ಯ ಯೋಜನೆಯನ್ನು ಹೇಗೆ ಒಪ್ಪಿಕೊಂಡಿವೆ ಎಂದು ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಪ್ರಶ್ನಿಸಿದ್ದಾರೆ.
ಭಾನುವಾರ ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ಪತ್ರಗಳನ್ನು ಬಿಡುಗಡೆ ಮಾಡಿ, ಈ ಎರಡೂ ಶಾಲೆಗಳು ಬಿಸಿಯೂಟವನ್ನು ನಿರಾಕರಿಸಿದ್ದು, ಮಕ್ಕಳ ಮೂಲಕ ರಾಜಕೀಯ ಉದ್ದೇಶಗಳಿಗೋಸ್ಕರ ರಮಾನಾಥ ರೈ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ದೂರಿದರು.
ಕೇವಲ ಎರಡು ಶಾಲೆಗಳಿಗೆ ದೇವಸ್ಥಾನದಿಂದ ಕೊಡುವ ಅನುದಾನದ ಬದಲು, ಸರಕಾರವೇ ಒದಗಿಸುವ ಅಕ್ಷರ ದಾಸೋಹ ಬಿಸಿಯೂಟದ ಸೌಲಭ್ಯ ಶಾಲೆಗಿತ್ತು. ಬಿಸಿಯೂಟ ನೀಡುತ್ತೇವೆ ಎಂದರೂ ಈ ಎರಡೂ ಶಾಲೆಗಳು ತಿರಸ್ಕರಿಸಿವೆ. ಸರಕಾರದ ಸೌಲಭ್ಯವೆಲ್ಲವೂ ಬೇಡ ಎನ್ನುವ ಈ ಶಾಲೆಗಳು ಕ್ಷೀರಭಾಗ್ಯ, ಸೈಕಲ್, ಸರಕಾರದ ಪಠ್ಯಪುಸ್ತಕಗಳನ್ನು ಪಡೆಯುತ್ತಿವೆ. ಒಂದೆಡೆ ಸರಕಾರದ ಅನ್ನದಾಸೋಹ ತಿರಸ್ಕರಿಸುತ್ತಾ, ಇನ್ನೊಂದೆಡೆ ಉಳಿದ ಸೌಲಭ್ಯಗಳನ್ನು ಪಡೆಯುವ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಪ್ರಮುಖರಾದ ಮಧುಸೂಧನ ಶೆಣೈ, ಜನಾರ್ದನ ಚಂಡ್ತಿಮಾರ್, ಪರಮೇಶ್ವರ ಮೂಲ್ಯ, ವೆಂಕಪ್ಪ ಪೂಜಾರಿ, ಸುಧಾಕರ್, ಲೋಕೇಶ ಸುವರ್ಣ ಉಪಸ್ಥಿತರಿದ್ದರು.
Be the first to comment on "ಕ್ಷೀರಭಾಗ್ಯಕ್ಕೆ ಪುರಸ್ಕಾರ, ಅನ್ನಭಾಗ್ಯಕ್ಕೆ ಯಾಕೆ ತಿರಸ್ಕಾರ: ಕಲ್ಲಡ್ಕ, ಪುಣಚ ಶಾಲೆಗಳಿಗೆ ಚಂದ್ರಪ್ರಕಾಶ್ ಶೆಟ್ಟಿ ಪ್ರಶ್ನೆ"