ಶಿಶು ಅಭಿವೃದ್ದಿ ಯೋಜನೆಯಲ್ಲಿನ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ೨೦೧೮ನೇ ಮಾರ್ಚ್ ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಸಕರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ. ಆದ್ದರಿಂದ ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಎಚ್ಚರಿಸಿದೆ.
ಈ ಹಿಂದೆ ೪-೫ ತಿಂಗಳಿನ ವೇತನ ಪಾವತಿಯಾಗದೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತೀವ್ರ ತೊಂದರೆ ಉಂಟಾಗಿತು. ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ವೇತನ ಪಾವತಿಸಲಾಗಿತ್ತು ಎಂದು ಸಂಘದ ಅಧ್ಯಕ್ಷೆ ಉಮಾವತಿ ಹಾಗೂ ನಿರ್ದೇಶಕಿ ಉಷಾ ಎ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ವಿವಿಧ ಪಕ್ಷಗಳಿಂದ ಬೆಂಬಲಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಒತ್ತಡಗಳು ಬರುತ್ತಿದ್ದು ತಾಲೂಕಿನಲ್ಲಿರುವ ಸಾವಿರಾರು ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಸುಮಾರು ೧೫ ಸಾವಿರಷ್ಟಿರುವ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಒಗ್ಗಟ್ಟಾಗಿ ಸಂಘಟನಾತ್ಮಕ ನಿಲುವನ್ನು ಕೈಗೊಂಡಲ್ಲಿ ನಿರ್ಣಾಯಕ ಶಕ್ತಿಯಾಗಲಿದ್ದಾರೆ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಮಹಿಳೆಯರ ಕುರಿತು ಪ್ರಮಾಣಿಕ ಕಾಳಜಿ ಇರುವವರನ್ನು ಗುರುತಿಸಿವುದರೊಂದಿಗೆ ಪಕ್ಷಗಳ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ನೀತಿ, ನಡವಳಿಕೆಗಳನ್ನು ಅಧ್ಯಯನ ನಡೆಸಿ ಸೂಕ್ತ ಬೆಂಬಲ ವ್ಯಕ್ತ ಪಡಿಸಲು ಸಂಘ ನಿರ್ಣಯಿಸಿದೆ. ಶೀಘ್ರ ಎಲ್ಲಾ ಗ್ರಾಮ ವಲಯಗಳಲ್ಲಿಯೂ ಸಭೆಗಳನ್ನು ನಡೆಸಿ ಅಭಿಪ್ರಾಯ ಕ್ರೋಡಿಕರಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಂಘದ ಪರವಾಗಿ ಅವರು ತಿಳಿಸಿದ್ದಾರೆ.
Be the first to comment on "ಪಾವತಿಯಾಗದ ಗೌರವಧನ: ಹೋರಾಟಕ್ಕೆ ಅಂಗನವಾಡಿ ಕಾರ್ಯಕರ್ತೆಯರ ನಿರ್ಧಾರ"