www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಅವಧಿ ಮುಕ್ತಾಯಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಸೇರಿದಂತೆ ಹಾಸನ ಜಿಲ್ಲೆ ಸಕಲೇಶಪುರದ ವಣಗೂರು, ಉಚ್ಚಂಗಿ, ದಾವಣಗೆರೆಯ ಹರಪ್ಪನಹಳ್ಳಿಯ ಹಾರಕನಾಳು ಗ್ರಾಪಂ ಸೇರಿದಂತೆ ಒಟ್ಟು 7 ಗ್ರಾ.ಪಂ.ಗಳಿಗೆ ಫೆ.18ರಂದು ಮತದಾನ ನಡೆಯಲಿದೆ. ಫೆ.20ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
4989 ಮಹಿಳೆಯರು ಹಾಗೂ 5122 ಪುರುಷರು ಸೇರಿ ಒಟ್ಟು 10111 ಮತದಾರರು ಇರುವ ಪುದು ಗ್ರಾಮ ಪಂಚಾಯತ್‌ನ 10 ವಾರ್ಡ್‌ಗಳ 34 ಸದಸ್ಯ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು, ಚುನಾವಣಾ ಸಿಬ್ಬಂದಿ, ಅಧಿಕಾರಿಗಳು ಶನಿವಾರ ಮತಗಟ್ಟೆಗಳತ್ತ ಪಯಣ ಬೆಳೆಸಿದ್ದಾರೆ.
ಕುಂಪನಮಜಲು ಅಂಗನವಾಡಿ ಕೇಂದ್ರ, ಸ.ಹಿ.ಪ್ರಾ.ಶಾಲೆ ಅಮ್ಮೆಮಾರ್, ಪುದು ಗ್ರಾಮಪಂಚಾಯತ್, ಸ.ಹಿ.ಪ್ರಾ.ಶಾಲೆ ಮಾಪಿಲ-ಫರಂಗಿಪೇಟೆ, ಸುಜೀರು ಪ್ರೌಢ ಶಾಲೆಯಲ್ಲಿ 2 ಮತಗಟ್ಟೆಗಳು, ಸ.ಹಿ.ಪ್ರಾ.ಶಾಲೆ ಸುಜೀರು ಉತ್ತರಭಾಗ, ಸ.ಹಿ.ಪ್ರಾ.ಶಾಲೆ ದಕ್ಷಿಣಭಾಗ, ಕುಂಜತ್ಕಲ ಅಂಗನವಾಡಿ ಕೇಂದ್ರ, ಸ.ಹಿ.ಪ್ರಾ.ಶಾಲೆ ನೆತ್ತರಕೆರೆ ಹಾಗೂ ಸ.ಹಿ.ಪ್ರಾ.ಶಾಲೆ ಕುಮ್ಡೇಲು ಸೇರಿ 11 ಮತಗಟ್ಟೆಗಳಲ್ಲಿ ಈ ಚುನಾವಣೆ ನಡೆಯಲಿದೆ.
ಪ್ರತಿ ಮತಗಟ್ಟೆಗೂ ಐದು ಜನ ಸಿಬ್ಬಂದಿಯಂತೆ ಓರ್ವ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತಾಲೂಕಿನಿಂದ 100 ಕ್ಕೂ ಹೆಚ್ಚು ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ತೊಡಗಿದ್ದಾರೆ. ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಾಗಿ ತಾಲೂಕಾಡಳಿತವು ಸಂಪೂರ್ಣ ಸಜ್ಜಾಗಿದೆ. ಅಲ್ಲದೇ ಮತಗಟ್ಟೆಯ ಕ್ಷೇತ್ರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಹಿಂದಿನ ಆಡಳಿತಾವಧಿಯಲ್ಲಿ ಪುದು ಗ್ರಾಮ ಪಂಚಾಯತ್ 32 ಸ್ಥಾನಗಳನ್ನು ಹೊಂದಿದ್ದು, ಪ್ರಸ್ತುತ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು 34 ಸ್ಥಾನಗಳಿಗೆ ಏರಿಕೆಯಾಗಿದೆ. ಪುದು ಗ್ರಾಮ ಪಂಚಾಯತ್ ಈ ಹಿಂದೆ ನಗರ ಪಂಚಾಯತ್ ಆಗುವ ಅವಕಾಶವಿತ್ತಾದರೂ ಜನಸಂಖ್ಯೆಯ ಕೊರತೆಯಿಂದಾಗಿ ಈ ಪ್ರಸ್ತಾವ ನೆನಗುದಿಗೆ ಬಿದ್ದಿತ್ತು. ಸದ್ಯ ಪುದು ಪಂಚಾಯತ್ ಆಗಿಯೇ ಮುಂದುವರಿದಿದೆ. ಕಳೆದ ಬಾರಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದರೆ, 9 ಸ್ಥಾನಗಳಿಗಷ್ಟೆ ಬಿಜೆಪಿ ತೃಪ್ತಿಪಟ್ಟುಕೊಂಡಿತ್ತು.
Be the first to comment on "ಪುದು ಗ್ರಾಪಂ: ಮತಸಮರಕ್ಕೆ ಸಕಲ ಸಿದ್ಧತೆ, ಭಾನುವಾರ ಓಟು"