ಸನಾತನ ಹಿಂದೂ ಧರ್ಮದ ರಕ್ಷಣೆ ಜೊತೆಗೆ ಶ್ರದ್ಧಾ ಭಕ್ತಿಯೊಂದಿಗೆ ಕೈಗೊಳ್ಳುವ ಪ್ರತಿಯೊಂದು ಧಾರ್ಮಿಕ ಸೇವೆಯಿಂದಲೂ ಭಕ್ತರಿಗೆ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದಾಗಿ ನಾವು ಅಹಂಕಾರ ಮತ್ತು ದರ್ಪಕ್ಕೆ ಬದಲಾಗಿ ವಿನೀತ ಭಾವನೆಯಿಂದ ದೇವರ ಆರಾದನೆ ಮತ್ತು ಸೇವಾ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಕೈಗೊಂಡಾಗ ದೇವರಿಗೆ ಮತ್ತಷ್ಟು ಹತ್ತಿರವಾಗುತ್ತೇವೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಹೇಳಿದ್ದಾರೆ.
ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಇದರ ಬೆಳ್ಳಿಹಬ್ಬ ಸಂಭ್ರಮ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ಕಟೀಲು ಮೇಳದ ’ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸ್ಥಳದಾನಿ ನಿರುಪಮಾ ಎಸ್.ಭಂಡಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಕೆ.ಮೋನಪ್ಪ ಆಚಾರ್ಯ, ಯುವ ಯಕ್ಷಗಾನ ಕಲಾವಿದ ಪ್ರೇಮ್‌ರಾಜ್ ಕೊಯಿಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್, ಅರಳ ಶ್ರೀ ಗರುಡ ಮಹಾಕಾಳಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ ಮತ್ತಿತರರು ಇದ್ದರು.
ಸಮಿತಿ ಸದಸ್ಯ ಮೋಹನ್ ಕೆ.ಶ್ರೀಯಾನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ರಶ್ಮಿತ್ ಶೆಟ್ಟಿ ಕೈತ್ರೋಡಿ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಮತ್ತಿತರ ಗಣ್ಯರು ಭೇಟಿ ನೀಡಿದರು.
Be the first to comment on "ಕೈತ್ರೋಡಿ: ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ’ಬೆಳ್ಳಿಹಬ್ಬ ಸಂಭ್ರಮ’"