www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಒಂದೇ ದೇಶ ಒಂದೇ ಶಿಕ್ಷಣ ಧ್ಯೇಯವಾಕ್ಯದಡಿ ಬಡ ಮಕ್ಕಳಿಗಾಗಿ ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸುಧಾರಣ ಆಂದೋಲನ ನಡೆಸುತ್ತಿರುವ ಬಂಟ್ವಾಳ ತಾಲೂಕಿನ ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ನಡೆಸಿದೆ.
ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಕಡಲತಡಿಯಿಂದ ರಾಜ್ಯರಾಜಧಾನಿಗೆ ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಶಿಕ್ಷಣ ಪ್ರೇಮಿಗಳು ಹಾಗೂ ದುರ್ಗಾಫ್ರೆಂಡ್ಸ್ ಕ್ಲಬ್ ನ ಸದಸ್ಯರು ಬೆಂಗಳೂರು ಚಲೋ ಚಳುವಳಿ ನಡೆಸಿ ತಮ್ಮ ಹೋರಾಟವನ್ನು ರಾಜಧಾನಿಗೂ ವಿಸ್ತರಿಸಿಕೊಂಡರು.
ದುರ್ಗಾಫ್ರೆಂಡ್ಸ್ ಕ್ಲಬ್ ನ ಈ ಹೋರಾಟಕ್ಕೆ ಕರ್ನಾಟಕ ರಕ್ಷಣ ವೇದಿಕೆ, ಜಯಕರ್ನಾಟಕ, ಹಿಂದೂ ಯುವಶಕ್ತಿ ಆಲಡ್ಕ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದ್ದು ಧರಣಿ ಸತ್ಯಾಗ್ರಹಕ್ಕೆ ಸಾಥ್ ನೀಡಿತು.
ದೇಶಾದ್ಯಂತ ಸಮಾನ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು, ಆರ್.ಟಿ. ಇ ಕಾಯ್ದೆಯನ್ನು ರದ್ದು ಮಾಡಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು, ಪಾಠ ಪೂರಕ ಚಟುವಟಿಕೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ಒದಗಿಸಬೇಕು, ಶಿಕ್ಷಕರು ಸಹಿತ ಎಲ್ಲಾ ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಆದೇಶ ನೀಡಬೇಕು ಎನ್ನುವ 9 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಸರಕಾರಿ ಶಾಲೆಗಳ ಉಳಿವಿಗಾಗಿ ದುರ್ಗಾಫ್ರೆಂಡ್ಸ್ ಕ್ಲಬ್ ಹಲವು ಹೋರಾಟಗಳನ್ನು ನಡೆಸಿ ಅನಿವಾರ್ಯವಾಗಿ ಬೆಂಗಳೂರು ಚಲೋ ನಡೆಸಿ ಇಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುವಂವಂತಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಲು ಕ್ಲಬ್ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ನಾವು ಎಲ್ಲಾ ರಾಜ್ಯಗಳಿಗೆ ತೆರಳಿ ಶಿಕ್ಷಣ ಸ್ಥಿತಿಗತಿಯನ್ನು ಅಧ್ಯಯನ ಮಾಡಿಕೊಂಡು ಬಂದು ಇಲ್ಲಿ ಧರಣಿ ಕುಳಿತಿದ್ದೇವೆ. ಸರಕಾರ ತಕ್ಷಣ ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮ್ಮದ್, ಜಯಕರ್ನಾಟಕ ರಾಜಾಧ್ಯಕ್ಷ ದೀಪಕ್, ಹೋರಾಟಗಾರ ಅನಿಲ್ ಶೆಟ್ಟಿ, ರವಿನಾರಾಯಣ ಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ನವೀನ್ ಸೇಸಗುರಿ, ವಿನೋದ್ ಕರೆಂಕಿ, ರಾಮಚಂದ್ರ ಪೂಜಾರಿ, ಆನಂದ ಪೂಜಾರಿ, ಕರುಣೇಂದ್ರ ಪೂಜಾರಿ, ಭುವನೇಶ್ ಪಚ್ಚಿನಡ್ಕ, ಗಣೇಶ್ ಸುವರ್ಣ, ಲೋಕೇಶ್ ಸುವರ್ಣ, ಯತೀಶ್ ಕರ್ಕೆರಾ, ಹರೀಶ್ ಸಾಲ್ಯಾನ್ , ಪುರುಷೋತ್ತಮ ಅಂಚನ್, ಸಂತೋಷ್ ಕಟ್ಟೆ, ಪೂವಪ್ಪ ಮೆಂಡನ್, ಲಕ್ಷ್ಮೀನಾರಾಯಣ ಗೌಡ ಹಾಜರಿದ್ದರು.
ತನ್ವೀರ್ ಸೇಠ್ ಸ್ಪಂದನೆ:
ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಭೇಟಿ ನೀಡಿ ಪ್ರತಿಭಟನಕಾರರ ಬೇಡಿಕೆಗಳಿಗೆ ಸ್ಪಂದನೆ ನೀಡಿದರು. ಬಂಟ್ವಾಳ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಲು ಆದೇಶ ನೀಡುವುದಾಗಿ ಭರವಸೆ ನೀಡಿದರು. ರಾಜ್ಯದ್ಯಂತ ಹೆಚ್ಚುವರಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದರು. ಸರಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಗೊಳಿಸುವ ನಿಯಮಾವಳಿ ರೂಪಿಸುವುದಾಗಿ ತಿಳಿಸಿದ ಅವರು ದುರ್ಗಾ ಫ್ರೆಂಡ್ಸ್ ಕ್ಲಬ್ ನ ಈ ಗಮನ ಸೆಳೆಯುವ ಪ್ರಯತ್ನ ಅಭಿನಂದನೀಯ ಎಂದರು. ವಿಧಾನಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್ ಹಾಗೂ ತಾರಾ ಹಾಜರಿದ್ದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ದುರ್ಗಾ ಫ್ರೆಂಡ್ಸ್ ಕ್ಲಬ್ ನ ಬೇಡಿಕೆಗಳನ್ನು ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದರು
Be the first to comment on "ಶೈಕ್ಷಣಿಕ ಸುಧಾರಣ ಆಂದೋಲನ: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ"