ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಲು ದುಡ್ಡಿಲ್ಲ, ಕೊಲೆ, ಸುಲಿಗೆ, ದರೋಡೆಗಳು ರಾಜಾರೋಷವಾಗಿ ನಡೆಯುತ್ತಿವೆ. ಜನೋಪಯೋಗಿ ಕೆಲಸಗಳು ನಡೆಯುತ್ತಿಲ್ಲ. ಮನೆಯಿಂದ ಹೊರ ಹೋದಾತ ಮರಳಿ ಬರುತ್ತಾನೆ ಎಂಬ ಗ್ಯಾರೆಂಟಿ ಇಲ್ಲ.
ಹೀಗಿರುವಾಗ ರಾಜ್ಯ ಸರಕಾರ ಜೀವಂತವಾಗಿದೆಯೇ?
ಮಾಜಿ ಸಚಿವ, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಹೀಗೆ.
ವೀರಕಂಭ ಸಮೀಪ ಕೆಲಿಂಜದಲ್ಲಿ ಬಿಜೆಪಿ ವತಿಯಿಂದ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು. ಈ ಸಂದರ್ಭ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ರಾಗದ್ವೇಷಗಳಿಲ್ಲದೆ ಕೆಲಸ ಮಾಡುತ್ತೇನೆ ಎಂದು ಪ್ರತಿಜ್ಞೆ ವಿಧಿ ಸ್ವೀಕರಿಸಿದ ಬಳಿಕ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಶಾಲೆಯ ಮಕ್ಕಳ ಅನ್ನ ಕಸಿಯುವ ಕೆಲಸ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಆರ್ ಎಸ್ ಎಸ್, ವಿಹಿಂಪ, ಬಜರಂಗದಳ ಎಂದರೆ ಏನು ಎಂದೇ ಗೊತ್ತಿಲ್ಲ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆರ್.ಎಸ್.ಎಸ್. ಮುಖ್ಯಸ್ಥರನ್ನು ಸಮಾಲೋಚನೆಗೆ ಕರೆಯುತ್ತಿದ್ದರು. ಆದರೆ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್.ಎಸ್.ಎಸ್. ನಿಷೇಧ ಕುರಿತು ಮಾತನಾಡುತ್ತಿದ್ದಾರೆ. ಇಂಥ ಒಂದು ಬೇಜವಾಬ್ದಾರಿ ಸರಕಾರವನ್ನು ತನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ ಎಂದು ಕೋಟ ಹೇಳಿದರು.
೯೪ಸಿ ಕಾನೂನು ತಂದದ್ದು ನಮ್ಮ ಸರಕಾರ. ಉಚಿತವಾಗಿ ಬಡವರಿಗೆ ನಿವೇಶನ ಹಕ್ಕುಪತ್ರಗಳನ್ನು ಒದಗಿಸುವ ಯೋಜನೆ ಅದಾಗಿತ್ತು. ಆದರೆ ಈಗ ಕ್ರಯಕ್ಕೆ ಹಕ್ಕುಪತ್ರ ಕೊಡಲಾಗುತ್ತಿದೆ ಎಂದು ಹೇಳಿದ ಶ್ರೀನಿವಾಸ ಪೂಜಾರಿ, ಬಂಟ್ವಾಳದಲ್ಲಿರುವ ಹಿಂದುತ್ವವಾದಿಗಳು ಕಾಶ್ಮೀರಿ ಪಂಡಿತರ ಬದುಕಿನ ಅನುಭವ ಹೊಂದುತ್ತಿದ್ದಾರೆ ಎಂದರು.
ಬಂಟ್ವಾಳ ಕ್ಷೇತ್ರಕ್ಕೆ ಶಾಪಮುಕ್ತಿಯಾಗಬೇಕಿದೆ. ಕಾಂಗ್ರೆಸ್ ಮುಕ್ತ ಬಂಟ್ವಾಳಕ್ಕಾಗಿ ಪಾರ್ಟಿಯನ್ನು ಕಟ್ಟಿ ಮುನ್ನಡೆಸಿದ ಕೀರ್ತಿ ರಾಜೇಶ್ ನಾಯಕ್ ಉಳಿಪ್ಪಾಡಿ ಅವರಿಗೆ ಸಲ್ಲುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪುತ್ತೂರಿನ ವೈದ್ಯ ಡಾ. ಎಂ.ಕೆ.ಪ್ರಸಾದ್ ಭಂಡಾರಿ, ಇಂದು ತೋರಿಕೆಯ ರಾಜಕಾರಣಿಗಳು ನಮಗೆ ಬೇಡ, ರಾಜೇಶ್ ನಾಯಕ್ ಅವರಂಥ ಸಜ್ಜನರು ಬೇಕು ಎಂದರು. ರಾಜೇಶ್ ನಾಯಕ್ ಮೃದು ಸ್ವಭಾವದವರು. ಜನರಿಗೆ ಸ್ಪಂದಿಸುವ ಗುಣ ಉಳ್ಳವರು. ಇಂದು ಪರ್ಸಂಟೇಜ್ ತೆಗೆದುಕೊಳ್ಳುವ ರಾಜಕಾರಣಿಗಳಿಗಿಂತ ಅವರು ಭಿನ್ನ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ರಮಾನಾಥ ರೈಗಳು ತೆಂಗಿನಕಾಯಿ ಒಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಸರಕಾರಕ್ಕೆ ಗುತ್ತಿಗೆದಾರರಿಗೆ ಹಣ ನೀಡಲೂ ದುಡ್ಡಿಲ್ಲ. ಹೀಗಿರುವಾಗ ಅಭಿವೃದ್ಧಿ ಎನ್ನುವುದು ಕೇವಲ ಮರೀಚಿಕೆ ಎಂದರು.
ರಾಜೇಶ್ ನಾಯಕ್ ಮಾತನಾಡಿ, ವಿರೋಧಿಗಳನ್ನು ದ್ವೇಷಿಸುವ ಬದಲು ತನ್ನ ಕೆಲಸದಲ್ಲಿ ನಂಬಿಕೆಯನ್ನು ಹೊಂದಬೇಕು. ರಾಜ್ಯ ಸರಕಾರವಿಂದು ಸಂಸ್ಕೃತಿ, ಸಂಸ್ಕಾರದ ಮೇಲೆ ಸವಾರಿ ಮಾಡುತ್ತಿದೆ. ಅಭಿವೃದ್ಧಿ ರಹಿತ ಕ್ಷೇತ್ರವಾಗಿ ಬಂಟ್ವಾಳ ಮಾರ್ಪಟ್ಟಿದೆ ಎಂದು ಹೇಳಿದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಗೀತಾ ಚಂದ್ರಶೇಖರ್, ಗಣೇಶ್ ರೈ, ಸೀಮಾ ಮಾಧವ, ಜಯಂತ ವೀರಕಂಭ, ವಜ್ರನಾಥ ಕಲ್ಲಡ್ಕ, ಚೆನ್ನಪ್ಪ ಕೋಟ್ಯಾನ್, ರೊನಾಲ್ಡ್ ಡಿಸೋಜ, ನಾರಾಯಣ ಶೆಟ್ಟಿ, ಪುಷ್ಪರಾಜ ಚೌಟ, ಹರೀಶ್ ನೆಟ್ಲಮುಡ್ನೂರು, ಕೊರಗಪ್ಪ ಗೌಡ, ಸನತ್ ಕುಮಾರ್ ರೈ, ಮಮತಾ ಶೆಟ್ಟಿ, ಜಯರಾಮ ರೈ, ಆನಂದ, ಬಾಲಕೃಷ್ಣ, ಅಭಿಷೇಕ್ ರೈ, ರಾಧಾಕೃಷ್ಣ ಅಡ್ಯಂತಾಯ, ಬೊಳ್ಳುಕಲ್ಲು ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅಡ್ವೇಯಿ ವಿಷ್ಣು ಭಟ್ ಸ್ವಾಗತಿಸಿದರು. ಕೇಶವ ಕಮ್ಮಟೆ ವಂದಿಸಿದರು. ಉದಯ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಕೇಶವ ಕಿಮ್ಮಟೆ ಅವರ ಸಹೋದರನ ಮನೆಯಲ್ಲಿ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ವಾಸ್ತವ್ಯ ಹೂಡಿದರು.
Be the first to comment on "ರಾಜ್ಯ ಸರಕಾರ ಜೀವಂತವಾಗಿದೆಯೇ? ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ"