- ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣಕ್ಕಿದ್ದ ತಡೆ ತೆರವು, ಶೀಘ್ರ ಕಾಮಗಾರಿ ಆರಂಭ
ವಗ್ಗ ಸಮೀಪ ಆಲಂಪುರಿ ಎಂಬಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿಶಾಲವಾದ ಜಾಗದಲ್ಲಿ ಚಿಣ್ಣರ ಪಾರ್ಕ್ ನಿರ್ಮಿಸಲಾಗುವುದು. ಇದರಲ್ಲಿ ಗ್ರಾಮೀಣ ಬದುಕು, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ನಡೆಯಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ನಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎರಡನೇ ಮಹಡಿಯ ತೆರೆದ ಸಭಾಂಗಣ ಸಮೃದ್ಧಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಣ್ಣರ ಪಾರ್ಕ್ ಪ್ರವಾಸೋದ್ಯಮ ಹಿನ್ನೆಲೆಯಲ್ಲೂ ಹಾಗೂ ಪರಂಪರೆಯನ್ನು ಅರಿಯುವ ದೃಷ್ಟಿಯಿಂದಲೂ ಉಪಯುಕ್ತವಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿರುವ ಪಾರ್ಕ್ ಮಾದರಿಯಲ್ಲಿ ಮಾಡಲಾಗುವುದು. ಇದಕ್ಕಾಗಿ ಆಸುಪಾಸಿನ ಪ್ರದೇಶಗಳ ಅಭಿವೃದ್ಧಿ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಚಿಣ್ಣರ ಪಾರ್ಕ್ ಗಾಗಿ 30ರಿಂದ 40 ಎಕ್ರೆ ಸ್ಥಳ ವನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದ್ದು, ಅರಣ್ಯ ಇಲಾಖೆ ಇದನ್ನು ನಿರ್ವಹಿಸಲಿದೆ ಎಂದರು.
ಬಸ್ ನಿಲ್ದಾಣಕ್ಕಿಲ್ಲ ತಡೆ:
ಖಾಸಗಿ ಬಸ್ ನಿಲ್ದಾಣಕ್ಕೆ ಜಿಪಂನಿಂದ ಇರುವ ತಡೆಯನ್ನು ಸರಿಪಡಿಸುವ ಮೂಲಕ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಮಾಡಲಾಗುವುದು. ಇದಕ್ಕಾಗಿ ತಾಪಂನ 1.17 ಎಕರೆ ಜಾಗ ಗುರುತಿಸಲಾಗಿದೆ. ಇದು ಕರ್ಮರ್ಷಿಯಲ್ ಕಾಂಪ್ಲೆಕ್ಸ್ ಕೂಡ ಆಗಿರುವ ಕಾರಣ ತಾಪಂಗೆ ಹೆಚ್ಚಿನ ಆದಾಯವೂ ಲಭಿಸಲಿದೆ ಎಂದು ರೈ ಹೇಳಿದರು.
ಪುರಸಭೆಗೆ ಒಳಚರಂಡಿ ಯೋಜನೆ ಹಾಗೂ ತಾಲೂಕಿಗೆ ಕ್ರೀಡಾಂಗಣ ಮಂಜೂರಾಗಿದ್ದು, ಬಹುತೇಕ ಅಭಿವೃದ್ಧಿ ಕಾರ್ಯಗಳು ಸಂಪೂರ್ಣಗೊಂಡಿವೆ ಹಾಗೂ ಪ್ರಗತಿಯ ಹಂತದಲ್ಲಿವೆ ಎಂದು ರೈ ಹೇಳಿದರು.
ಕಟ್ಟಡ ವಿಸ್ತರಣೆ:
ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ, ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿ ಇರುವ ಪುರಸಭಾ ಕಟ್ಟಡದ ಮಹಡಿ ನಿರ್ಮಾಣ ಕಾಮಗಾರಿಗೆ ಜನವರಿ ಮೊದಲ ವಾರದಲ್ಲಿ ಚಾಲನೆ ದೊರಕಲಿದೆ. 25 ಲಕ್ಷ ರೂಗಳ ವೆಚ್ಚದ ಕಟ್ಟಡ ವಿಸ್ತರಣಾ ಕಾಮಗಾರಿ ಇದಾಗಲಿದೆ. ಇನ್ನಷ್ಟು ಪ್ರಗತಿ ಕಾರ್ಯಗಳಿಗೆ ಇದು ಪೂರಕವಾಗಲಿದೆ ಎಂದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ಎಂ.ಆರ್.ಹೈದರ್, ಮಲ್ಲಿಕಾ ಶೆಟ್ಟಿ, ಪ್ರಭಾಕರ ಪ್ರಭು, ಆದಂ, ತಹಶೀಲ್ದಾರ್ ಪುರಂದರ ಹೆಗ್ಡೆ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮೊದಲಾದವರು ಉಪಸ್ಥಿತರಿದ್ದರು.
ತಾಪಂ ಇಒ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿದರು. ಎಇಇ ನರೇಂದ್ರಬಾಬು ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಗ್ಗ ಸಮೀಪ ವಿಶಾಲವಾದ ಚಿಣ್ಣರ ಪಾರ್ಕ್: ರೈ"