ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಹಿಳೆಯರ ಬಾಲ್‌ಬಾಡ್ಮಿಂಟನ್ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ತಂಡ ವಿನ್ನರ್ ಆಗಿ ಫೇಬಿಯನ್ ಬಿ. ಎನ್. ಕುಲಾಸೋ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ತಂಡ ರನ್ನರ್‍ಸ್ ಅಪ್‌ಗೆ ತೃಪ್ತಿ ಪಡೆದುಕೊಂಡಿತು. ಕಾರ್ಕಳ ಭುವನೇಂದ್ರ ಕಾಲೇಜು, ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ತಂಡ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿತು. ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಬೆಸ್ಟ್ ಹ್ಯಾಟಕರ್.ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಸ್. ಕೆ. ಬೆಸ್ಟ್ ಡಿಪೆಂಡರ್, ಆಳ್ವಾಸ್‌ನ ಜಯಲಕ್ಷ್ಮಿ ಜಿ. ಬೆಸ್ಟ್ ಅಲ್‌ರೌಂಡ್ ಪ್ರಶಸ್ತಿ ಪಡೆದುಕೊಂಡರು.
ಸಮಾರೋಪ
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯ ರಸಾಯನಶಾಸ್ತ್ರ ವಿಭಾಗ ವಿಶ್ರಾಂತ ಪ್ರಾಧ್ಯಾಪಕ ಡಾ. ಸುಂದರ ಮೊಯ್ಲಿ, ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಸ್ಪರ್ಧೆಯಲ್ಲಿ ಸೋತರೆ ಧೃತಿಗೆಡದೇ ಆಸಕ್ತಿ ವಹಿಸಿ ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದರೆ ಗೆಲುವು ಸಾಧಿಸಲು ಪ್ರೇರಣೆಯಾಗುತ್ತದೆ. ಗೆದ್ದವರು ಮುಂದಿನ ಗುರಿಗಳೊಂದಿಗೆ ಯೋಚನೆ ಯೋಜನೆ ಹಾಕಿಕೊಂಡು ಭವಿಷ್ಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಎಸ್.ವಿ.ಎಸ್. ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಪ್ರತಿ ಕ್ರೀಡಾಪಟುಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ನಿರಂತರವಾಗಿ ಆಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕ ರಮೇಶ್ ಎಚ್.ಎನ್. ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ನಾರಾಯಣ ಭಂಡಾರಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಚೇತನ್ ಎಂ. ಕಾರ್‍ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಲೆಪ್ಟಿನೆಂಟ್ ಸುಂದರ್ ವಂದಿಸಿದರು.
Be the first to comment on "ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಮೂಡುಬಿದಿರೆ ಆಳ್ವಾಸ್ ಕಾಲೇಜು ವಿನ್ನರ್"