ಹಿಂದು ಧರ್ಮಪರಿಪಾಲನೆಯನ್ನು ಮನೆಯಿಂದಲೇ ಆರಂಭಿಸಬೇಕು. ಸತ್ಕಾರ್ಯ, ಸತ್ ಚಿಂತನೆ, ಸದಾಚಾರದ ಮೂಲಕ ರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ಕಣಿಯೂರಿನಲ್ಲಿರುವ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರಿ ಮಹಾಬಲ ಸ್ವಾಮೀಜಿ ನುಡಿದರು.
ಬುಧವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಹಿಂದು ಜಾಗರಣಾ ವೇದಿಕೆಯ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅಯೋಧ್ಯೆ ಶ್ರೀ ರಾಮಜನ್ಮಸ್ಥಾನ ಮುಕ್ತಿ ಆಂದೋಲನದ ವಿಜಯೋತ್ಸವ ಅಂಗವಾಗಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮನೆಗಳಲ್ಲಿ ಇಂದು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವುದು ವಿರಳವಾಗುತ್ತಿದೆ. ಹಿಂದು ಧರ್ಮದಲ್ಲಿರುವ ವೈವಿಧ್ಯತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಾತ್ವಿಕರಾಗಿ ಬಾಳಿರಿ ಎಂದು ಸ್ವಾಮೀಜಿ ಕರೆ ನೀಡಿದರು.
ಮುಖ್ಯ ಭಾಷಣ ಮಾಡಿದ ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಶ್ರೀರಾಮಚಂದ್ರನ ಕನಸಾಗಿತ್ತು. ಅದನ್ನು ನನಸಾಗಿಸಬೇಕಾದರೆ ಸಮಸ್ತ ಹಿಂದು ಬಾಂಧವರು ತಮ್ಮಲ್ಲಿರುವ ಭಿನ್ನತೆಗಳನ್ನು ಮರೆತು ಒಗ್ಗಟ್ಟಾಗಿ ದುಡಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ವಿಠಲ ಅಲ್ಲಿಪಾದೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕಲಾಯಿ, ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ, ಮುಖಂಡ ರವಿರಾಜ್, ಪ್ರಮುಖರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಜಿ.ಆನಂದ, ಕೆ.ಪದ್ಮನಾಭ ಕೊಟ್ಟಾರಿ, ರವೀಂದ್ರ ಕಂಬಳಿ ಸಹಿತ ಪ್ರಮುಖರು ಭಾಗವಹಿಸಿದ್ದರು. ಕಿರಣ್ ಮೂರ್ಜೆ ಸ್ವಾಗತಿಸಿದರು.
Be the first to comment on "ಶ್ರೀರಾಮದ ಆದರ್ಶ ಪಾಲನೆ ಅಗತ್ಯ: ಕಣಿಯೂರು ಸ್ವಾಮೀಜಿ"