
ಕೃಪೆ: ಪಿಟಿಐ
ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಕರಾವಳಿ ಜನರನ್ನು ಭೀತಿಗೊಳಪಡಿಸಿದ್ದ ಓಖೀ ಚಂಡಮಾರುತ ಗುಜರಾತ್ ನತ್ತ ಮುಖ ಮಾಡಿದೆ. ಆದರೂ ಮುಂಬಯಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಕೆಲ ದಿನಗಳಿಂದ ದಕ್ಷಿಣ ಭಾರತದಲ್ಲಿ ತಳವೂರಿ ಹಾನಿಗೀಡು ಮಾಡಿದ್ದ ಓಖೀ ಚಂಡಮಾರುತಕ್ಕೆ 39 ಮಂದಿ ಬಲಿಯಾಗಿದ್ದು, 167 ಮೀನುಗಾರರು ನಾಪತ್ತೆಯಾಗಿದ್ದಾರೆ. ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಓಖೀ ಚಂಡಮಾರುತ ಭಾರೀ ತೊಂದರೆ ಉಂಟುಮಾಡಿತ್ತು. ಈ ವಿಷಯವನ್ನು ಕೇಂದ್ರ ಗೃಹ ಖಾತೆ ಪತ್ರಿಕಾ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಆದರೆ ಈಗ ಚಂಡಮಾರುತ ಅಷ್ಟೊಂದು ತೀವ್ರವಾಗಿ ಬೀಸುತ್ತಿಲ್ಲ, ಗಾಬರಿಗೊಳಗಾಗಬೇಕಾದ ಅವಶ್ಯಕತೆ ಇಲ್ಲ ಎಂದು ಗೃಹಖಾತೆಯ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ಹೇಳಿದ್ದಾರೆ.
ಆದಾಗ್ಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ಮೂರು ದಿನಗಳ ಕಾಲ ಕಡಲಿಗಿಳಿಯದಂತೆ ಸೂಚಿಸಿದೆ.
ಶಾಲಾ ಕಾಲೇಜು ಬಂದ್:

ಮುಂಬಯಿ ಮೆರೈನ್ ಡ್ರೈವ್ ಮಂಗಳವಾರ ಹೀಗಿತ್ತು.. ಕೃಪೆ: ರಾಯಿಟರ್ಸ್
ಚಂಡಮಾರುತದ ಪರಿಣಾಮ ಮುಂಬೈ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ನಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮುಂಬೈ ನಲ್ಲಿ ಮತ್ತಷ್ಟು ಮಳೇಯಾಗಲಿದ್ದು ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Be the first to comment on "ದ.ಭಾರತದಲ್ಲಿ 39 ಬಲಿ ಪಡೆದ ಓಖೀ ಮುಂಬೈ, ಗುಜರಾತ್ ನತ್ತ"