ವರದಿ : ರಜನಿ ಭಟ್ , ಅಬುಧಾಬಿ
ನವೆಂಬರ್ ತಿಂಗಳು ಬಂತೆಂದರೆ ಸಾಕು ತಿಂಗಳಿಡೀ ಯು.ಏ.ಈ ಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಹಬ್ಬ. ಕನ್ನಡದ ಹಬ್ಬ. ತಾಯಿ ಭುವನೇಶ್ವರಿಯ ನೆನೆಯುವ ಹಬ್ಬ. ಕನ್ನಡ ಕಲರವದ ಝೇಂಕಾರ. ಹೌದು ಇದಕ್ಕೆ ಸಾಕ್ಷಿಯಾದದ್ದು ನವೆಂಬರ್ 17ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ 62 ನೆಯ ರಾಜ್ಯೋತ್ಸವ ಕಾರ್ಯಕ್ರಮ ಹಾಗು ೧೫ನೆಯ ವಾರ್ಷಿಕೋತ್ಸವ ಸಮಾರಂಭ.
ಶುಕ್ರವಾರ ಸಂಜೆ ೪ ರಿಂದ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಭವ್ಯ ಸಭಾಂಗಣದಲ್ಲಿ ಕನ್ನಡಿಗರ ಚಿಲಿಪಿಲಿಯೊಂದಿಗೆ ಕರ್ನಾಟಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗು ಸದಸ್ಯರೊಂದಿಗೆ ಮಹಾ ಪೋಷಕರಾದ ಮಾರ್ಕ್ ಡೆನಿಸ್ ಡಿಸೋಜಾ ಇವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. ಎಂ ಈ ಮೂಳೂರು ಇವರು ಶುಭಾಶಯಗಳನ್ನು ಕೋರಿದರು. ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ಊರಿನಿಂದ ಬಂದ ಗಾಯಕಿಯರು ಅನಿವಾಸಿ ಕನ್ನಡಿಗ ಗಾಯಕ ಗಾಯಕಿಯರು ತಮ್ಮ ಸುಶ್ರಾವ್ಯ ಕಂಠದಿಂದ ಅಧ್ಭುತ ವಾಗಿ ಹಾಡಿ ಸಭಿಕರನ್ನು ರಂಜಿಸಿದರು . ನಂತರ ನಡೆದ ನೃತ್ಯ ಸ್ಪರ್ಧೆಯು ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ಧ್ಯೇಯ ವಾಕ್ಯಕ್ಕೆ ಸ್ಪೂರ್ತಿಯಾಗಿತ್ತು. ಅತ್ಯುತ್ತಮ ಸ್ಪರ್ಧೆ ನೀಡಿದ್ದ ಎಲ್ಲ ತಂಡಗಳು ಪ್ರೇಕ್ಷಕರನ್ನು ಮುಖ ವಿಸ್ಮಿತರನ್ನಾಗಿ ಮಾಡಿದ್ದು ಮಾತ್ರವಲ್ಲ ನಿರ್ಣಾಯಕರನ್ನು ಪೇಚಿಗೆ ಸಿಲುಕಿಸಿದ್ದರು.
ಸಂಘದ ಅಧ್ಯಕ್ಷರಾದ ಸುಗಂಧರಾಜ ಬೇಕಲ್ ಇವರು ಭವ್ಯ ಮೆರವಣಿಗೆಯಲ್ಲಿ ಗಣ್ಯರನ್ನು ಬರಮಾಡಿಕೊಂಡು ವೇದಿಕೆಗೆ ಸ್ವಾಗತಿಸಿ ಸಭಾ ಕಾರ್ಯಕ್ರಮಕ್ಕೆ ಮುನ್ನುಡಿ ಇಟ್ಟರು. ಯು ಏ.ಈ ಯಲ್ಲಿ ಕನ್ನಡ ಭಾಷೆಗೆ ಗಣನೀಯ ಸೇವೆ ಸಲ್ಲಿಸಿರುವವರಿಗಾಗಿ ಪ್ರತಿ ವರುಷ ಈ ಸಂಘ ನೀಡುವ “ಮಯೂರ ಪ್ರಶಸ್ತಿ”ಯನ್ನು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಇವರಿಗೆ ಈ ಸಂಧರ್ಭದಲ್ಲಿ ಊರಿನಿಂದ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ಸಚಿವರಾದ ಯು ಟಿ ಖಾದರ್ ಇವರು ಹಾಗು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿದ್ದ ಖ್ಯಾತ ಉದ್ಯಮಿ ಡಾ. ಬಿ. ಆರ್ ಶೆಟ್ಟಿ ಇವರು ಪ್ರದಾನ ಮಾಡಿದರು.
ಸಭಾಕಾರ್ಯಕ್ರಮದಲ್ಲಿ ಪೂರ್ವ ಮಯೂರ ಪ್ರಶಸ್ತಿ ಪುರಸ್ಕೃತರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು ಹಾಗು ಅವರ ಸೇವೆಯನ್ನು ನೆನೆಯಲಾಯಿತು.ಖ್ಯಾತ ಯಕ್ಷಗಾನ ಕಲಾವಿದರಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರಿಗೆ “ಯಕ್ಷ ಮಯೂರ” ಬಿರುದನ್ನಿತ್ತು ಸನ್ಮಾನಿಸಲಾಯಿತು. ಈ ತಿಂಗಳು ಇವರಿಗೆ ಲಭಿಸುವ ಎರಡನೆಯ ಪ್ರಶಸ್ತಿಯು ಇದಾಗಿದೆ. ಈ ಮೊದಲು ನವೆಂಬರ್ ೩ರಂದು ಅಬುಧಾಬಿ ಕರ್ನಾಟಕ ಸಂಘ ನೀಡುವ ಪ್ರತಿಷ್ಠಿತ “ದ.ರಾ,ಬೆಂದ್ರೆ “ ಪ್ರಶಸ್ತಿ ಇತ್ತು ಗೌರವಿಸಿತ್ತು. ಮಳಲುಗಾಡಿನಲ್ಲಿ ಇವರು ಯಕ್ಷಗಾನ ಸೇವೆಗೆ ಸಲ್ಲಿಸುವ ನಿಸ್ವಾರ್ಥ ಸೇವೆಗೆ ಲಭಿಸಿದ ಪ್ರಶಸ್ತಿಗಳಿವು. ಇದೇ ಹೊತ್ತಿನಲ್ಲಿ ಈ ಕಾರ್ಯಕ್ರಮಕ್ಕೆ ನಿಂತ ಮಹಾಪೋಷಕರನ್ನು, ಪ್ರಾಯೋಜಕರನ್ನು,ಬೆಂಬಲವಾಗಿ ನಿಂತ ಮಹನೀಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ದುಬೈಯಲ್ಲಿ ನೆಲೆಸಿರುವ ಕವಿ ಇರ್ಷಾದ್ ಮೂಡಬಿದಿರೆ ಇವರ ಚುಟುಕುಗಳನ್ನು ಓದಿ ವಾಚಿಸಿ ಗಣೇಶ್ ರೈ ಇವರು ಕಾರ್ಯಕ್ರಮವನ್ನು ಅಚ್ಚುಕ ಟ್ಟಾಗಿ ನಡೆಸಿಕೊಟ್ಟರು.
ತದನಂತರ ಬಹುನಿರೀಕ್ಷೆಯ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರ ನಿರ್ದೇಶನದಲ್ಲಿ ಯಕ್ಷಮಿತ್ರರು ದುಬಾಯಿ ಇದರ ಬಾಲ ಕಲಾವಿದರು ನಡೆಸಿಕೊಟ್ಟ “ದಾಶರಥಿ ದರ್ಶನ” ಯಕ್ಷಗಾನ ಅತ್ಯದ್ಭುತವಾಗಿ ಪ್ರದರ್ಶಿಸಲ್ಪಟ್ಟಿತು. ಊರಿನಿಂದ ಏಳು ಕಡಲಾಚೆ ಇದ್ದರೂ ನಾವು ಸಹ ಯಕ್ಷಗಾನದಲ್ಲಿ ಕಡಿಮೆ ಏನಲ್ಲ ಎಂದು ಈ ಬಾಲಕಲಾವಿದರು ರಂಗದಲ್ಲಿ ತೋರಿಸಿಕೊಟ್ಟರು.
ಕಾರ್ಯಕ್ರಮದ ಕೊನೆಯ ಹಂತದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಿ.ಆರ್ ಶೆಟ್ಟಿ ಹಾಗು ಯು. ಟಿ ಖಾದರ್ ಇವರನ್ನು ನೆನಪಿನ ಕಾಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಕನ್ನಡ ಕಲಾವಿದರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.ತದನಂತರ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಆರತಿ ಅಡಿಗ ಹಾಗು ಊರಿನಿಂದ ಆಗಮಿಸಿದ್ದ ಯೋಗಿ ಮಿರ್ಜಾನ್ ಇವರು ಅಚ್ಚ ಕನ್ನಡದಲ್ಲಿ ಸುಲಲಿತ ಸುಂದರ ಪಂಕ್ತಿಗಳ ಕನ್ನಡ ಭಾಷೆಯ ಸ್ಪಷ್ಟ ಉಚ್ಛಾರದಲ್ಲಿ ನಿರೂಪಿಸಿದರು.
Be the first to comment on "ಶಾರ್ಜಾದಲ್ಲಿ ಕನ್ನಡ ರಾಜ್ಯೋತ್ಸವ, ವೈವಿಧ್ಯಮಯ ಕಾರ್ಯಕ್ರಮ"