ಸುಮಾರು 2 ಸಾವಿರ ವರ್ಷ ಇತಿಹಾಸವಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಬಿಲ್ಲವ ಸಮಾಜದ ಸೇವಾ ರೂಪವಾಗಿ ನೂತನ ದ್ವಜಸ್ತಂಭ ಸಮರ್ಪಣಾ ಸಮಾರಂಭ ನ.19 ರಂದು ನಡೆಯಲಿದೆ ಎಂದು ಧ್ವಜಸ್ತಂಭ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷ ಎನ್.ಸಾಲಿಯಾನ್ ನೆತ್ರರಕೆರೆ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30 ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಧ್ವಜಸ್ತಂಭವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ಪೊಳಲಿ ಕ್ಷೇತ್ರಕ್ಕೆ ಕೊಂಡೊಯ್ಯಲಾಗುವುದು ಎಂದರು.
ವಿವಿಧ ವಾದ್ಯಗೋಷ್ಟಿ, ಗೊಂಬೆ ಕುಣಿತ, ಹುಲಿವೇಷ ಕುಣಿತ,ಭಜನೆ ಮೆರವಣಿಗೆಗೆ ವಿಶೇಷ ಮೆರಗು ನೀಡಲಿದೆ. ಸುಮಾರು ಹತ್ತು ಸಾವಿರ ಮಂದಿ ಈ ಸಂದರ್ಭ ಭಾಗವಹಿಸುವ ನಿರೀಕ್ಷೆ ಇದ್ದು,ಸಕಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ಸೇವಾರೂಪದಲ್ಲಿ ಧ್ವಜಸ್ತಂಭವನ್ನು ನೀಡಲಾಗುತ್ತಿದೆಯಾದರೂ ಸಮಸ್ತ ಹಿಂದೂ ಸಮಾಜ ಈ ಮಹತ್ಕಾರ್ಯದಲ್ಲಿ ಭಾಗವಹಿಸುವಂತೆ ಕೋರಿದ ಅವರು ತಾಲೂಕಿನ ಎಲ್ಲಾ ಸಂಘ, ಸಂಸ್ಥೆ, ಭಜನಾಮಂದಿರಗಳ, ಸ್ವಸಹಾಯ ಸಂಘಗಳಿಗೂ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಅಮಂತ್ರಣ ಪತ್ರ ನೀಡಲಾಗಿದೆ. ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ಸಾಮಾಜಿಕ,ಧಾರ್ಮಿಕ,ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಧ್ಜಜ ಸ್ತಂಭಕ್ಕೆ ಸುಳ್ಯ ತಾಲೂಕಿನ ಸಂಪಾಜೆಯ ರಕ್ಷಿತಾರಣ್ಯದಲ್ಲಿ ಸೂಕ್ತವಾದ ಮರವನ್ನು ಗುರುತಿಸಲಾಗಿದ್ದು,ಬುಧವಾರ ಮರಕ್ಕೆ ಮುಹೂರ್ತ ನಡೆಯಲಿದೆ ಅರಣ್ಯ ಇಲಾಖೆಯಿಂದ ಈ ಮರ ಕಡಿದು ಸಾಗಿಸಲು ಅನುಮತಿಯನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿ ೨೧,೦೧,೬೦೧ ಲಕ್ಷ ರೂ. ಶುಲ್ಕವನ್ನು ಡಿಡಿ ಮೂಲಕ ಈಗಾಗಲೇ ಸಮಿತಿಯಿಂದ ಪಾವತಿಸಲಾಗಿದೆ ಎಂದರು.
ಪೊಳಲಿ ದೇವಸ್ಥಾನದ ರಾಜಾಂಗಣದಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಧ್ವಜಸ್ತಂಭ ಶಿಥಿಲವಾದ ಹಿನ್ನಲೆಯಲ್ಲಿ ಅಂದಿನ ಸಾವಿರ ಸೀಮೆಯ ಬಿಲ್ಲವ ಸಮಾಜ ಭಾಂದವರು ಒಟ್ಟು ಸೇರಿ ದ್ವಜಸ್ತಂಭ ವನ್ನು ಪ್ರತಿಷ್ಠಾಪಿಸಿದ್ದರು. ಇದೀಗ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಬಿಲ್ಲವ ಸಮಾಜ ಸೇವಾರೂಪವಾಗಿ ಧ್ವಜಸ್ತಂಭವನ್ನು ಸಮರ್ಪಿಸುತ್ತದೆ ಎಂದರು.
ಸಮಿತಿ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್,ಅಧ್ಯಕ್ಷ ಸೇಸಪ್ಪ ಕೋಟ್ಯಾನ್,ಪದಾಧಿಕಾರಿಗಳಾದ ಬಳ್ಳಿ ಚಂದ್ರಶೇಖರ ಕೈಕಂಬ, ಗೋಪಾಲಕೃಷ್ಣ ಕೈಕಂಬ, ನಾರಾಯಣ ಎಂ.ಅಮ್ಮುಂಜೆ, ಯಶವಂತ ಪೊಳಲಿ, ಚಂದಪ್ಪ ಅಂಚನ್ ಮಜಿಲಗುತ್ತು, ಗಂಗಾಧರ ಜೆ.ಪೂಜಾರಿ ಕೊಪ್ಪಳ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
Be the first to comment on "19ರಂದು ಬಿಲ್ಲವ ಸಮಾಜದಿಂದ ಪೊಳಲಿ ಕ್ಷೇತ್ರಕ್ಕೆ ಧ್ವಜಸ್ತಂಭ ಸಮರ್ಪಣೆ"