- ಮೌನೇಶ ವಿಶ್ವಕರ್ಮ
ಬಂಟ್ವಾಳ ನ್ಯೂಸ್ ನ ಎಲ್ಲಾ ಓದುಗರಿಗೂ ವಂದನೆಗಳು. ಈ ಮಾಧ್ಯಮದಲ್ಲಿ ಮಕ್ಕಳ ಮಾತು ಅಂಕಣ ಆರಂಭಿಸಿ, ಇಂದಿಗೆ (ನ.14) ಒಂದು ವರ್ಷ ಪೂರ್ತಿಯಾಯಿತು. ಈ ಹಿಂದೆ ನಮ್ಮ ಬಂಟ್ವಾಳ ಪತ್ರಿಕೆಯಲ್ಲಿ ಪ್ರಕಟವಾಗಿ, ಬಳಿಕ ಮಕ್ಕಳ ಮಾತು ಪುಸ್ತಕ ರೂಪದಲ್ಲಿ ಪ್ರಕಟವಾಗಿತ್ತಾದರೂ, ಅದನ್ನು ಮೀರಿ ಸಾವಿರಾರು ಓದುಗರಿಗೆ ಮಕ್ಕಳ ಮಾತನ್ನು ತಲುಪಿಸುವಲ್ಲಿ ಬಂಟ್ವಾಳ ನ್ಯೂಸ್ ಯಶಸ್ವಿಯಾಗಿದೆ. ಇದಕ್ಕಾಗಿ ಬಂಟ್ವಾಳ ನ್ಯೂಸ್ ನ ಸಂಪಾದಕ ಹರೀಶ್ ಮಾಂಬಾಡಿಯವರಿಗೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಅದೇ ರೀತಿ ಮಕ್ಕಳ ಮಾತು ಅಂಕಣವನ್ನು ಓದಿದ, ಓದಿ ಪ್ರತಿಕ್ರಿಯಸಿದ ಬಂಟ್ವಾಳ ನ್ಯೂಸ್ ನ ಎಲ್ಲಾ ಓದುಗರಿಗೂ ಶರಣು ಶರಣು..ಮಕ್ಕಳ ನಗು ಎಲ್ಲೆಡೆ ತುಂಬಿ ನಮ್ಮ ವಾತಾವರಣದ ಕಳೆ ಹೆಚ್ಚಲಿ.. ಮಕ್ಕಳ ದಿನಾಚಣೆಯ ಶುಭಾಶಯಗಳು..
ಅದೊಂದು ಮಧ್ಮಮವರ್ಗದ ಕುಟುಂಬ, ರಿಕ್ಷಾ ಚಾಲಕನಾಗಿರುವ ತಂದೆಯ ಬಳಿ ಮಗಳು ಆ ದಿನ ಹಠಾತ್ತನೆ ಒಂದು ಪ್ರಶ್ನೆ ಕೇಳಿದಳು, ಅಪ್ಪಾ, ನೀವ್ಯಾಕೆ ದೊಡ್ಡ ಜಾಬ್ ಗೆ ಸೇರಿಲ್ಲ..?
ಆ ಮಾತು ಕೇಳಿ ತಂದೆಗೆ ಒಮ್ಮೆ ಬರಸಿಡಿಲು ಬಡಿದಂತಾಯಿತು. ಆದರೂ ಸುಧಾರಿಸಿಕೊಂಡು ಹೇಳಿದರು. ಅಯ್ಯೋ.. ಪುಟ್ಟಾ ಇದೇನು ಸಣ್ಣ ಕೆಲಸವಾ.. ಇದು ಪುಣ್ಯದ ಕೆಲಸ. ದೊಡ್ಡ ಕೆಲಸ ಕ್ಕೆ ಸೇರಿಕೊಂಡರೆ ಹೆಚ್ಚು ಸಂಬಳ ಸಿಗಬಹುದು, ಆದರೆ ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ಸಿಗುದಿಲ್ಲ.
ತಲೆಬಿಸಿ ಹೆಚ್ಚು. ರಿಕ್ಷಾ ಡ್ರೈವರ್ ಅಂದ್ರೇನು ಕಡಿಮೆಯಾ..? ಒಂದು ದಿನ ನಾವಿಲ್ಲ ಅಂದ್ರೆ ಎಷ್ಟು ಕಷ್ಟ ಆಗ್ತದೆ ಗೊತ್ತುಂಟಾ..? ಎಲ್ಲರಿಗೂ ನಾವೇ ಬೇಕು. ಯಾವ್ದೇ ಕೆಲಸ ಇರಲಿ ಶ್ರದ್ದೆಯಿಂದ ಮಾಡಿದ್ರೆ ಅದೇ ದೊಡ್ಡ ಕೆಲಸ. ನೋಡು ನಾನೇನಾದ್ರೂ ಬೇರೆ ಕೆಲ್ಸದಲ್ಲಿದ್ರೆ, ಫಾರಿನ್ ಗೆ ಹೋದ್ರೆ ಅಮ್ಮನಿಗೆಷ್ಟು ಕಷ್ಟ.. ಮಾತ್ರವಲ್ಲ. ನಂಗೆ ನಿನ್ನ ಜೊತೆ ಇರ್‍ಲಿಕ್ಕೂ ಟೈಮ್ ಸಿಕ್ತಿರ್‍ಲಿಲ್ಲಾ.. ಈಗ ಅದೇನು ಪ್ರಾಬ್ಲಂ ಇಲ್ಲ.. ನನ್ನ ಮುದ್ದಿನ ಮಗಳ ಜೊತೆ ನಾನು… ಅವಳನ್ನು ನಾನೇ ಶಾಲೆಗೆ ಬಿಡೋದು ಅಲ್ವಾ.. ಹೊರಡು ಬೇಗ ಹೊರಡು.. ಎಂದು ಮಗಳನ್ನು ಹೊರಡಿಸಿ, ಶಾಲೆಗೆ ಕರೆದುಕೊಂಡು ಹೋದರು ಆ ತಂದೆ.
ಮೇಲಿನ ಘಟನೆಯಲ್ಲಿ ಮಗು ಕೇಳಿದ ಪ್ರಶ್ನೆಗೂ ಮಗುವಿನ ಮನಸ್ಸಿನ ತಳಮಳವೇ ಕಾರಣ. ಮನೆಮಂದಿ ಮಕ್ಕಳನ್ನು ಬೊಟ್ಟುಮಾಡಿ ನೀನು ಡಾಕ್ಟರ್ ಆಗು, ಇಂಜಿನಿಯರ್ ಆಗು ಎಂದೆಲ್ಲಾ ಹೇಳಿ ಅವರ ಮನಸ್ಸಿನಲ್ಲಿ ವಾಸ್ತವಕ್ಕೆ ದೂರದ ವಿಚಾರಗಳನ್ನೇ ತುಂಬುವುದು, ತಮ್ಮ ಸ್ನೇಹಿತರ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿದ್ದರೆ ಬಡಮಕ್ಕಳಿಗೆ ತಮ್ಮ ತಂದೆ ತಾಯಿಯ ಕೆಲಸದ ಬಗ್ಗೆ, ತಾಯಿಯ ಕೆಲಸದ ಬಗ್ಗೆ ಜಿಗೂಪ್ಸೆ ಉಂಟಾಗುವುದು,ತಮ್ಮ ಉದ್ಯೋಗದ ಬಗ್ಗೆ ಹೆತ್ತವರೇ ಮಕ್ಕಳ ಬಳಿ ಅಸಹನೆ ವ್ಯಕ್ತಪಡಿಸುವ ಕಾರಣಗಳಿವಿಚಲಿತರಾಗಿ ಇಂತಹಾ ಪ್ರಶ್ನೆಗಳನ್ನು ಮುಂದಿಡುತ್ತಾರೆ.
ಮಕ್ಕಳ ಕಡೆಯಿಂದ ಒಂದು ಒಳ್ಳೆಯ ಪ್ರಶ್ನೆ ಬಂದಾಗ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರಿಗೆ ಒಪ್ಪುವ ಸಕಾರಾತ್ಮಕ ಉತ್ತರ ಸಿಕ್ಕಿದರೆ ಮಕ್ಕಳಲ್ಲಿ ಧೈರ್ಯ ಬರುತ್ತದೆ, ತಂದೆ-ತಾಯಿಯ ಮೇಲೆ ಪ್ರೀತಿಯೂ ಹೆಚ್ಚುತ್ತದೆ.
ಮಕ್ಕಳ ಪ್ರಶ್ನೆಗಳಿಗೆ ನಮ್ಮ ಅಸಹನೆಯೇ ಉತ್ತರವಾದರೆ ಸಮಸ್ಯೆ ಬೆಟ್ಟವಾಗಿಬಿಡುತ್ತದೆ. ಹೀಗಾಗಿ ಮಕ್ಕಳ ಮನಸ್ಸಿನ ಎಲ್ಲಾ ಗೊಂದಲಗಳಿಗೆ ತಂದೆ ತಾಯಿ(ಮನೆಮಂದಿ) ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿಬೇಕು.
ಮೇಲಿನ ಘಟನೆಯಲ್ಲಿ ಆ ಮಗುವಿಗೆ ತಂದೆಯ ವೃತ್ತಿ ಬಗ್ಗೆ ಅಸಹನೆ, ನಾವು ಬಡವರು ಎನ್ನುವ ಭಾವನೆ, ಮಾನಸಿಕ ಕೀಳರಿಮೆ, ತಂದೆಯ ಬಗ್ಗೆಯೂ ಕೋಪ ಇಷ್ಟು ಗೊಂದಲಗಳನ್ನು ಕಾಣಬಹುದು. ಆದರೆ ಒಂದು ಪ್ರೀತಿಯ ಉತ್ತರ ಎಲ್ಲಾ ಗೊಂದಲಗಳನ್ನು ದೂರಮಾಡಿ, ತಂದೆ ಮಗಳನು ಮತ್ತಷ್ಟು ಹತ್ತಿರವಾಗಿಸಿದೆ.
ಸುಳ್ಳನ್ನು ಸತ್ಯ ಎಂದು ನಂಬಿಸದೆ, ವಾಸ್ತವ ಜಗತ್ತಿನಲ್ಲಿ ಮಕ್ಕಳು ಧೈರ್ಯದಿಂದ , ಖುಷಿಯಿಂದ, ನ್ಯಾಯದ ಬದುಕು ಸಾಗಿಸುವ ನಿಟ್ಟಿನಲ್ಲಿ ಮಕ್ಕಳನ್ನು ಪ್ರೇರೇಪಿಸಬೇಕಾಗಿರುವುದು ಇಂದಿನ ಅಗತ್ಯ.
Be the first to comment on "ಅಪ್ಪಾ, ನೀವ್ಯಾಕೆ ದೊಡ್ಡ ಜಾಬ್ ಗೆ ಸೇರಿಲ್ಲ..?"