ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ನ.11ರಂದು ಶನಿವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದೆ. ಗ್ರಾಮ ಗ್ರಾಮಗಳಲ್ಲಿ ಈ ಬಗ್ಗೆ ತಯಾರಿ ನಡೆಯುತ್ತಿವೆ. ಬಂಟ್ವಾಳದಲ್ಲಿರುವ 240 ಮತಗಟ್ಟೆಗಳಿಂದಲೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಾರ್ವಜನಿಕ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ
ಈ ವಿಷಯವನ್ನು ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ಪುಂಜಾಲಕಟ್ಟೆಯಲ್ಲಿ ಯಾತ್ರೆಯನ್ನು ಪಕ್ಷದ ಪ್ರಮುಖರು ಸ್ವಾಗತಿಸಲಿದ್ದಾರೆ. ಬಳಿಕ ವಾಹನಗಳ ಮೂಲಕ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನಕ್ಕೆ ಆಗಮಿಸಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖರ ಮತ್ತು ಕಾರ್ಯಕರ್ತರ ವಿವಿಧ ಸಮಿತಿಗಳನ್ನು ರಚಿಸಿ, ಕೆಲಸ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ ವಿಶಾಲವಾದ ಮೈದಾನದಲ್ಲಿ ಚಪ್ಪರ ವೇದಿಕೆಯ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಎಂದು ಅವರು ಹೇಳಿದರು.
ಸಾರ್ವಜನಿಕ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಸಹಿತ ಪ್ರಮುಖರು ಉಪಸ್ಥಿತರಿರುವರು. ನಾನಾ ಪಕ್ಷಗಳ ಹಲವು ಮುಖಂಡರು ಈ ಸಂದರ್ಭ ಪಕ್ಷ ಸೇರಲಿದ್ದಾರೆ ಎಂದು ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಹಿರಿಯ ನಾಯಕ ಜಿ.ಆನಂದ, ಪ್ರಮುಖರಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ ಉಪಸ್ಥಿತರಿದ್ದರು.
Be the first to comment on "ಗ್ರಾಮ ಗ್ರಾಮಗಳಲ್ಲಿ ಪರಿವರ್ತನಾ ಯಾತ್ರೆ ತಯಾರಿ: ದೇವದಾಸ ಶೆಟ್ಟಿ"