- ಮಹಮ್ಮದ್ ಅಲಿ ವಿಟ್ಲ
www.bantwalnews.com COVER STORY
ಆತ್ಮರಕ್ಷಣೆ ವಿದ್ಯೆ, ತುಳುನಾಡ ಹೆಮ್ಮೆಯ ತಾಲೀಮು ಮರೆಯಾಗುತ್ತಿದೆ ಎಂಬ ಆತಂಕವಿರುವ ಈ ಹೊತ್ತಿನಲ್ಲಿ ವಿಟ್ಲ ಸಮೀಪ ಚಂದಳಿಕೆಯ ದೇಜಪ್ಪ ಪೂಜಾರಿ ಮಕ್ಕಳಿಗೆ ಉಚಿತವಾಗಿ ತಾಲೀಮು ಕಸರತ್ತು ಹೇಳಿಕೊಡುವ ಮೂಲಕ ಗಮನ ಸೆಳೆಯುತ್ತಾರೆ.
For VIDEO REPORT CLick:
Report:
ಚಂದಳಿಕೆ ಎಂಬಲ್ಲಿ ಕಳೆದ 9 ವರ್ಷಗಳಿಂದ ತಾನು ಕಲಿತ ತಾಲೀಮು ಕಸರತ್ತುಗಳನ್ನು ಗಂಡು ಮಕ್ಕಳಿಗೆ, ಹೆಣ್ಮಕ್ಕಳಿಗೆ ಉಚಿತವಾಗಿ ಕಲಿಸುತ್ತಿರುವ ದೇಜಪ್ಪ ಪೂಜಾರಿಯವರ ದೂರದೃಷ್ಟಿಯ ಚಿಂತನೆ ಸಾಮಾಜಿಕ ಸೇವೆಯಂತೆ ನಡೆಯುತ್ತಿದೆ.
ಹಿಂದೆ ಅತಿರಥ ಮಹಾರಥ ರಾಜರುಗಳನ್ನು ಸಣ್ಣ ರಾಜ್ಯದ ರಾಜರ ಸೈನ್ಯ ಸಮರದಲ್ಲಿ ಸೋಲಿಸಿದ ಐತಿಹಾಸಿಕ ಘಟನೆಗಳನ್ನು ಅವಲೋಕಿಸಿದಾಗ ಈ ತಾಲೀಮು ವಿದ್ಯೆಯ ಮಹತ್ವ ಅರಿವಾಗುತ್ತದೆ. ಕುಸ್ತಿ, ಬಾಕ್ಸಿಂಗ್, ಜುಡೋ, ಕುಂಗ್ಫೂ, ಕರಾಟೆ ಇನ್ನಿತರ ಆತ್ಮರಕ್ಷಣಾ ಕ್ರೀಡೆಗಳ ಭರಾಟೆಯ ಮಧ್ಯೆ ತಾಲೀಮು ವ್ಯಾಯಮ, ಮಲ್ಲ ವಿದ್ಯೆ, ಕೇರಳದ ಕಲರಿ ವಿದ್ಯೆಗಳೆಲ್ಲ ಮಂಕಾಗುತ್ತಿವೆ.
ದೇಜಪ್ಪ ಪೂಜಾರಿ ಅವರು ಬೀಡಿ ಬ್ರೀಂಚ್ ಉದ್ಯೋಗ ನಡೆಸುತ್ತಿದ್ದು, ಅದರ ನಡುವೆಯೂ ತಾಲೀಮು ಕಡೆಗೆ ಒಲವು ತೋರಿಸುತ್ತಿದ್ದಾರೆ. 5 ವರ್ಷದಿಂದ ಹಿಡಿದು ಯುವಕ, ಯುವತಿಯರು, ನಡು ವಯಸ್ಕರೂ ಸಹ ಈ ವ್ಯಾಯಮ ಗರಡಿ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯೆ ಕಲಿಯುವ ಹಂಬಲದ ಯಾರೇ ಬಂದರೂ ಸಹ ಸಂಜೆಯ ಹೊತ್ತು ಬಿಡುವು ಮಾಡಿಕೊಂಡು ತಾವು ಕಲಿತ ಎಲ್ಲಾ ಕಸರತ್ತು, ಸಾಹಸ ಪಟ್ಟುಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಸದ್ಯ 74 ವಿದ್ಯಾರ್ಥಿಗಳು ಅವರು ನಡೆಸುವ ಶ್ರೀವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ಕಸರತ್ತುಗಳೊಂದಿಗೆ ಪಳಗುತ್ತಿದ್ದಾರೆ.
ಈ ವಿದ್ಯೆ ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ನಿಟ್ಟಿನಲ್ಲಿ ಬೇಕಾದ ಸಾಧನ ಸಲಕರಣೆ ಸಹಿತವಾಗಿ ವಿದ್ಯೆಯನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಎರಡು ವರ್ಷಗಳಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಬೆಂಗಳೂರಿನ ಕುಷ್ಠಗಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎನ್ನುತ್ತಾರೆ ತಾಲೀಮ್ ಮಾಸ್ಟರ್ ದೇಜಪ್ಪ ಪೂಜಾರಿ ನಿಡ್ಯ
ಕತ್ತಿ, ಚೂರಿ, ಪೈಟಿಂಗ್ ಶೋರ್ಡ್, ಬಾಣ, ಬರಾಟೆ, ಭರ್ಚಿ, ಪಟ್ಟೆ, ಮಾಡ, ಬಿಜಿಲೆ, ರಿಂಗ್ ಇತ್ಯಾದಿ ಸಾಧನ ಸಲಕರಣೆಗಳನ್ನು ತರಬೇತಿ ನೀಡಿದ ಬಳಿಕ ಪ್ರದರ್ಶನದ ಸಮಯದಲ್ಲಿ ಬಳಸಲಾಗುತ್ತದೆ. ಬಾಯಿಯಿಂದ ಬೆಂಕಿ ಉಗುಳುವುದು, ಬೆಂಕಿ ರಿಂಗ್ನೊಳಗಿನಿಂದ ಜಂಪ್ ಮಾಡುವುದು, ಬೆಂಕಿ ಚೆಂಡು ಆಟ, ಹೊಟ್ಟೆಯಲ್ಲಿ ಮುಳ್ಳು ಸೌತೆ ಇಟ್ಟು ಬಳಿಕ ಕತ್ತಿಯಿಂದ ಕತ್ತರಿಸುವುದು. ತಲವಾರು ಕಾಳಗ ಮೊದಲಾದವುಗಳು ಇಲ್ಲಿನ ತಾಲೀಮುನ ವಿಶೇಷತೆಗಳು.
ವಿಟ್ಲದಲ್ಲಿ ಪ್ರತಿವರ್ಷ ನಡೆಯುವ ಶಾರದಾ ಹಾಗೂ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಈ ತಾಲೀಮು ತಂಡ ತನ್ನ ಪ್ರತಿಭೆಯನ್ನು ತೋರಿಸುತ್ತಿದೆ. ಅದಲ್ಲದೇ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಎಂಬಾಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.
ವಿದ್ಯಾರ್ಥಿಗಳು ಶಾಲೆಯ ಶಿಕ್ಷಣದೊಂದಿಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢವಂತರಾಗಲು, ಜೀವನದಲ್ಲಿ ಎದುರಾಗುವ ನಾನಾ ಅಪಾಯದ ಕ್ಷಣಗಳನ್ನು, ಸವಾಲುಗಳನ್ನು ಮೆಟ್ಟಿ ನಿಲ್ಲಲು ಇಂತಹ ತಾಲೀಮು ಕಸರತ್ತು ಅತ್ಯಂತ ಪೂರಕವಾಗಿದೆ ಎಂದು ತಿಳಿಸುವ ದೇಜಪ್ಪ ಮಾಸ್ಟರ್ ತನ್ನ ವಿದ್ಯಾರ್ಥಿಗಳನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಸ ಮಾಡಿಕೊಟ್ಟಿದ್ದಾರೆ. ಇವರ ತಂಡಾ ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಎರಡು ಬಾರಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿರುವುದು ಅವರ ತಾಲೀಮು ವಿದ್ಯೆಯ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯುವಶಕ್ತಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ಗಳಿಗೆ ಮಾರುಹೋಗುವ ಸನ್ನೀವೇಶದಲ್ಲಿ ಎಳೆಯ ವಿದ್ಯಾರ್ಥಿಗಳು ವ್ಯಾಯಾಮಗಳತ್ತ ಮುಖ ಮಾಡಿರುವುದು ಮಾತ್ರ ಶ್ಲಾಘನೀಯವಾಗಿದೆ. ಸರ್ಕಾರವು ಇಂತಹ ವ್ಯಾಯಾಮ ಶಾಲೆಗಳನ್ನು ಗುರುತಿಸಿ ಸಹಕಾರ ನೀಡಿದರೆ ಉತ್ತಮ ಎಂಬುದು ತಾಲೀಮು ಪ್ರಿಯರ ಆಶಯವಾಗಿದೆ.
Be the first to comment on "ವಿಟ್ಲ ಚಂದಳಿಕೆಯಲ್ಲೊಬ್ಬ ತಾಲೀಮು ಮಾಸ್ಟರ್"