- ಅನಿತಾ ನರೇಶ್ ಮಂಚಿ
ಎಫ್ ಬಿ ತೆರೆಯುತ್ತಿದ್ದಂತೆ ಬದಿಯಲಿ ಬಂದ ಫ್ರೆಂಡ್ ರಿಕ್ವೆಷ್ಟ್ ಗಳನ್ನು ನೋಡಿದ. ಅಲ್ಲಿ ಕಾಣಿಸಿದ ಸುಂದರಿಯೊಬ್ಬಳ ಭಾವಚಿತ್ರ ನೋಡಿ ದಂಗಾದ ಲಲಿತ್..
ಹೆಸರು ನಿವೇದಿತಾ.. ಕಾಲೇಜು ಕನ್ಯೆ.. ತುಂಟ ನಗುವಿನ ಆ ಮುಖ ತನ್ನ ಗಾಳಕ್ಕೆ ಬೀಳಬಹುದೇ… !!
ಅರೆಕ್ಷಣ ಚಿಂತಿಸಿ , ಕೂಡಲೆ ಕನ್‌ಫರ್ಮ್ ಮಾಡಿದ.
ಜೊತೆಗೆ ’ಬಿ ಮೈ ಫ್ರೆಂಡ್ ಫಾರ್ ಎವರ್’ ಎಂದು ಮೆಸೇಜ್ ಕಳುಹಿಸಿದ.
ಕೂಡಲೇ ಆ ಕಡೆಯಿಂದ ’ಇಟ್ ಈಸ್ ಮೈ ಪ್ಲೆಶರ್’ ಎಂಬ ಪ್ರತ್ಯುತ್ತರ.
ಕುಳಿತಲ್ಲೇ ನಸುನಗೆ ಬೀರಿದ. ಲಲಿತ್ ಅಗರ್ವಾಲ್ ಹೆಸರು ಯುವ ಪೀಳಿಗೆಗೆ ಪರಿಚಿತವೇ. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲೂ ರಾರಾಜಿಸುತ್ತಿದ್ದ ತನ್ನ ಮುಖ. ಅಪ್ಪನ ಉದ್ಯಮದ ಕೋಟಿಗಟ್ಟಲೆ ಹಣದ ಏಕೈಕ ವಾರಸುದಾರ, ಯುವತಿಯರ ನಿದ್ದೆ ಕದಿಯುವಂತಿರುವ ಸುಂದರ ಮೊಗ.. ಇಷ್ಟು ಸಾಲದೇ ನನ್ನನ್ನು ಗುರುತಿಸಲು.. ಹೆಮ್ಮೆಯಿಂದ ಬೀಗಿತ್ತು ಮನ.
ಲಲಿತ್ ಶೋಕಿಗೆ ಬಲಿ ಬೀಳದ ಹುಡುಗಿಯರೇ ಇಲ್ಲ ಎಂಬ ಮಾತು ಅವನ ಗೆಳೆಯರ ವಲಯದಲ್ಲಿ ಪ್ರಸಿದ್ಧ. ಹೊಸ ಹೊಸ ಚೆಲುವೆಯರ ಕೈ ಹಿಡಿದೋ. ಸೊಂಟ ಬಳಸಿಯೋ ವೀಕೆಂಡ್ ಕಳೆಯುವುದು ಅವನ ಖಯಾಲಿ. ಗೆಳೆಯರೆಲ್ಲ ಇವನ ಅದೃಷ್ಟಕ್ಕೆ ಕರುಬುವಂತಿತ್ತು ಆ ವೈಭವ.
ತಡ ಮಾಡದೇ ಅವಳ ಪ್ರೊಫೈಲನ್ನು ಪರೀಕ್ಷಿಸಿದ. ಅವಳ ಸುಂದರ ಫೊಟೊಗಳಿದ್ದ ಆಲ್ಬಮ್ಮನ್ನೇ ನೋಡುತ್ತಾ ಕುಳಿತ. ಅಪ್ರತಿಮ ಸುಂದರಿಯಾದರೂ, ಅವಳ ಉಡುಪುಗಳು ಅವಳನ್ನು ಮಧ್ಯಮ ವರ್ಗದಲ್ಲೇ ಗುರುತಿಸುವಂತಿತ್ತು. ಸುಲಭದಲ್ಲೇ ತನ್ನ ಗಾಳಕ್ಕೆ ಸಿಗುವ ಮೀನಿದು ಎಂದುಕೊಂಡ.
ಎಫ್. ಬಿ ಯ ಪರಿಚಯ ಬೆಳೆಯಲು ತಡವಾಗಲಿಲ್ಲ. ಇವನ ಮಾತುಗಳಿಗೆಲ್ಲ ಅವಳೀಯುತ್ತಿದ್ದ ಸೂಕ್ತ ಪ್ರತಿಕ್ರಿಯೆ ಅವಳ ಫೋನ್ ನಂಬರ್ ಬೇಗನೇ ಪಡೆಯುವಲ್ಲಿ ಯಶಸ್ವಿಯಾಗಿಸಿತು. ಈಗೆಲ್ಲ ಫೋನ್ ಮೂಲಕವೇ ಸಂಭಾಷಣೆ. ಸ್ನೇಹದ ಮಾತುಗಳು ಪ್ರೀತಿಯ ಕಡೆಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ತನ್ನ ಬಲೆಯನ್ನು ಇನ್ನಷ್ಟು ಅಗಲವಾಗಿ ಬೀಸಲು ಬಯಸಿದ ಲಲಿತ್. ಬೇಕೆಂದೇ ಒಂದೆರಡು ದಿನ ತನ್ನ ಮೊಬೈಲನ್ನು ಆಫ್ ಮಾಡಿಟ್ಟ. ಆ ಎರಡು ದಿನಗಳಲ್ಲಿ ಎಫ್ ಬಿ ಯಲ್ಲಿ ಅವಳ ಕಾತರದ ಮೆಸೇಜುಗಳು ತುಂಬಿ ತುಳುಕುತ್ತಿದ್ದವು.
ಈ ಬಿಸಿ ಆರುವ ಮೊದಲೇ ಅವಳನ್ನು ತನ್ನ ದಾರಿಗೆಳೆಯಲು ನಿರ್ಧರಿಸಿ ಅವಳಿಗೆ ಫೋನ್ ಮಾಡಿದ.
ಡಿಯರ್ . ನಿನ್ನ ಮರೀಬೇಕಂತಾನೆ ಎರಡು ದಿನ ನಿನ್ನ ಸಂಪರ್ಕದಿಂದ ದೂರ ಇದ್ದೆ. ಆದರೆ ನೀನಿಲ್ಲದೆ ನಂಗೆ ಬದುಕು ಸಾಧ್ಯವಿಲ್ಲ ಅನ್ನಿಸಿಬಿಟ್ಟಿದೆ. ನಂಗೆ ನಿನ್ನ ನೋಡ್ಬೇಕು.. ಈ ಸಂಡೆ ನಂಗೆ ಸಿಗ್ತೀಯಾ.. ಪ್ಲೀಸ್.. ಇದು ನನ್ನ ಸಾವು ಬದುಕಿನ ಪ್ರಶ್ನೆ.. ನೀನು ಬಾರದೆ ಇದ್ದರೆ ಈ ಜೀವ ಉಳಿಯಲ್ಲ.. ಯೋಚಿಸು ಅಂದ.
ಅತ್ತ ಕಡೆಯಿಂದ ಕ್ಷಣ ಮೌನದ ನಂತರ ಅವಳ ನಾಚಿಕೆ ಬೆರೆತ ಸ್ವರ ಕೇಳಿಸಿತು. ಭೇಟಿಯಾಗ್ಬೇಕಾ..?? ನಂಗ್ಯಾಕೋ ಭಯ ಆಗುತ್ತೆ. ನಮ್ಮ ಮನೆಯವರಿಗೆ ಗೊತ್ತಾದರೆ ನನ್ನ ಮನೆ ಒಳಗೆ ಸೇರಿಸಲ್ಲ.. ಏನ್ಮಾಡ್ಲಿ..’
ಈ ಮಿಡಲ್ ಕ್ಲಾಸ್ ಹಣೇಬರಹಾನೇ ಇಷ್ಟು.. ಥತ್.. ಅಂದುಕೊಂಡ ಮನದಲ್ಲಿ.. ಆದರೆ ಮಾತುಗಳಿಗೆ ಜೇನಿನ ಸವಿ ತುಂಬಿ ’ನಾನಿಲ್ವಾ.. ಅಷ್ಟ್ಯಾಕೆ ಭಯ.. ಈ ಸಂಡೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟಿಗೆ ಕಳೆಯೋಣಾ.. ಮತ್ತೆ ನಾನೇ ನಿಮ್ಮ ಮನೆಗೆ ಬಂದು ನಿನ್ನ ಅಪ್ಪ ಅಮ್ಮನ ಹತ್ರ ನಿಮ್ಮ ಮಗಳನ್ನು ಜೀವನಪೂರ್ತಿ ನಂಗೇ ಕೊಟ್ಬಿಡಿ ಅಂತ ಕೇಳ್ತೀನಿ.. ಸರೀನಾ.. ಈಗ್ಲಾದ್ರು ಒಪ್ಕೋ..
ಆ ಕಡೆಯಿಂದ ಅರೆ ಮನಸ್ಸಿನ ’ಹುಂ’ ಎಂಬ ಉತ್ತರ ಸಿಕ್ಕಿತು.
ಲಲಿತ್ ಕುಶಿಯಿಂದ ’ಐ ಲವ್ ಯೂ ಡಿಯರ್.. ಥ್ಯಾಂಕ್ಯೂ.. ಥ್ಯಾಂಕ್ಯೂ’ ಎಂದು ಕಿರುಚಿದ.
ತನ್ನ ಗೆಳೆಯರೆಲ್ಲರಿಗೂ ಇವಳ ಎಫ್ ಬಿ ಯ ಪ್ರೊಪೈಲನ್ನು ತೋರಿಸಿ ಈ ಸಂಡೆ ಇವಳ ಜೊತೆ ಎಂದು ಬೀಗಿದ. ಆಗಾಗ್ಗೆ ಬರುವ ಹಳೆ ಗೆಳತಿಯರ ಕರೆಗಳಿಂದ ತಪ್ಪಿಸಿಕೊಳ್ಳಲು ನಾಳೆ ಇಡೀ ದಿನ ನನ್ನ ಮೊಬೈಲ್ ಆಫ್ .. ಅವ್ಳು ಮತ್ತು ನಾನು ಇಬ್ಬರೇ.. ಹೆಮ್ಮೆಯಿಂದೆಂಬಂತೆ ನುಡಿದ.
ಒಳ್ಳೇ ಚಾನ್ಸ್ ಹೊಡೆದೆ ಬಿಡು ನೀನು.. ಲಕ್ಕಿ ಫೆಲೋ.. ಎಂಜಾಯ್ ಮಾಡು.. ಎಂದು ಬೆನ್ನು ತಟ್ಟಿ ಕೀಟಲೆಯ ನಗೆ ನಕ್ಕರು ಗೆಳೆಯರು…
ಸೋಮವಾರ ಎಲ್ಲ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಇವನ ಚಿತ್ರಗಳು ಪ್ರಕಟ ಗೊಳ್ಳುತ್ತಿದ್ದವು. ಕೆಳಗೆ ನಗರದ ಶೀಮಂತ ಉದ್ಯಮಿಯ ಪುತ್ರ ಲಲಿತ್ ಅಗರ್ವಾಲ್ ಅಪಹರಣ. ನಕ್ಸಲೈಟ್ ಗಳ ಕೈವಾಡ. ಒತ್ತೆ ಹಣಕ್ಕಾಗಿ ಬೇಡಿಕೆ.
ಬೆರಗಾದ ಲಲಿತ್ ನ ಗೆಳೆಯರು ಎಫ್ ಬಿ ಓಪನ್ ಮಾಡಿ ನಿವೇದಿತಾಳನ್ನು ಹುಡುಕಿದರು. ಆ ಹೆಸರಿನ ಅಕೌಂಟ್ ಡಿಲೀಟ್ ಆಗಿತ್ತು.. !!
Be the first to comment on "ಗಾಳ"