ಬಿ.ಸಿ.ರೋಡಿನಲ್ಲಿ ನಡೆದ ಶಿಕ್ಷಣ ಸಂಸ್ಥೆ ಪ್ರತಿನಿಧಿಗಳ ಸಮಾಲೋಚನೆಯಲ್ಲಿ ಎಸ್ಪಿ ಸೂಚನೆ
ಡ್ರಗ್ಸ್, ಗಾಂಜಾ ಸೇವನೆ ಕಾಲೇಜು ಮೆಟ್ಟಿಲನ್ನೂ ತುಳಿದಿದೆ ಎಂಬ ಅನುಮಾನಗಳನ್ನು ನಿವಾರಿಸಬೇಕಾದರೆ, ಪ್ರತಿ ಕಾಲೇಜುಗಳಲ್ಲೂ ಕಂಪ್ಲೈಂಟ್ ಬಾಕ್ಸ್ ಇರಿಸಬೇಕು ಹಾಗೂ ಪೊಲೀಸರ ಜೊತೆ ಸಮನ್ವಯತೆಗಾಗಿ ತಂಡವೊಂದನ್ನು ರಚಿಸಬೇಕು. ಇದುಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳ ಜೊತೆ ಶನಿವಾರ ಸಂಜೆ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ಸೇವನೆ ಮತ್ತು ಅದರ ದುಷ್ಪರಿಣಾಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನೀಡಿದ ಸೂಚನೆ .
ದೂರು ಪೆಟ್ಟಿಗೆ ಅಳವಡಿಕೆ
ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಲಿಖಿತವಾಗಿ ನೀಡಲು ಅಥವಾ ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ಮಾಹಿತಿಗಳಿದ್ದಲ್ಲಿ ಪೊಲೀಸರಿಗೆ ತಿಳಿಸಲು ದೂರು ಪೆಟ್ಟಿಗೆಗಳನ್ನು ಅಳವಡಿಸುವುದಾಗಿ ಎಸ್ಪಿ ತಿಳಿಸಿದರು.ಅ. 25 ರೊಳಗಾಗಿ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ದೂರುಪೆಟ್ಟಿಗೆಯಲ್ಲಿ ಹಾಕಬಹುದು ಎಂದರು.
ಪೊಲೀಸ್ ವ್ಯವಸ್ಥೆಯಲ್ಲೂ ಈ ಕುರಿತು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯ ಜಾಲದ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುವ ಸಲುವಾಗಿ ಇಬ್ಬರು ಅಧಿಕಾರಿಗಳನ್ನು ನಾರ್ಕೋಟಿಕ್ ಪ್ರಕರಣಗಳಿಗೆಂದೇ ಮೀಸಲಿಟ್ಟು ನಿಯುಕ್ತಿಗೊಳಿಸಲಾಗಿದೆ. ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಅಧಿಕಾರಿಯಾಗಿ ಉಮೇಶ್ ಹಾಗೂ ಪುತ್ತೂರು ಮತ್ತು ಸುಳ್ಯ ತಾಲೂಕುಗಳಿಗೆ ತಾರಾನಾಥ್ ಅಧಿಕಾರಿಯಾಗಿ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರು ಸಂಪೂರ್ಣವಾಗಿ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲಿದ್ದಾರೆ ಎಂದು ಎಸ್ಪಿ ಹೇಳಿದರು.
ಕಾಲೇಜು ವಿದ್ಯಾಭ್ಯಾಸ ಅರ್ಧದಲ್ಲೇ ಬಿಟ್ಟವರು ಏನು ಮಾಡುತ್ತಿದ್ದಾರೆ ಎಂಬುದನ್ನೂ ಶಿಕ್ಷಣ ಸಂಸ್ಥೆಗಳವರು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಎಸ್ಪಿ, ದ.ಕ. ಜಿಲ್ಲೆಯಲ್ಲಿ ನಡೆದ ಕೊಲೆ ಸಹಿತ ಪ್ರಮುಖ ಅಪರಾಧ ಕೃತ್ಯಗಳಲ್ಲಿ ಶಾಲೆ, ಕಾಲೇಜು ವಿದ್ಯಾಭ್ಯಾಸ ಮೊಟಕುಗೊಳಿಸಿದ ಹಿನ್ನೆಲೆಯವರು ಕ್ರಿಮಿನಲ್ ಅಪರಾಧ ನಡೆಸಿರುವುದು ಕಂಡುಬಂದಿದೆ. ಅಂತೆಯೇ ಮಾದಕ ದ್ರವ್ಯ ಪೂರೈಕೆದಾರರ ಜಾಲದಲ್ಲೂ ಇಂಥ ಹಿನ್ನೆಲೆಯವರೂ ಇರುವ ಸಾಧ್ಯತೆಗಳು ಇರುವ ಕಾರಣ ಶಿಕ್ಷಣ ಸಂಸ್ಥೆಗಳವರು ನಿಗಾ ಇರಿಸಿಕೊಳ್ಳುವುದು ಹಾಗೂ ಪೊಲೀಸರೊಂದಿಗೆ ಸಂವಹನ ಇಟ್ಟುಕೊಳ್ಳುವುದು ಉತ್ತಮ ಎಂದರು.
ಗಾಂಜಾ ಸೇವನೆಯಂಥದ್ದು ಹಳ್ಳಿಗಳ ಶಿಕ್ಷಣ ಸಂಸ್ಥೆಗಳ ಪಕ್ಕದಲ್ಲೂ ಕಾಲಿಟ್ಟಿದೆ ಎಂದು ಹೇಳಿದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ತಮ್ಮ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಲ್ಲಾಗುವ ಬದಲಾವಣೆಗಳು ಹಾಗೂ ತಮ್ಮಲ್ಲಿರುವ ಅನುಮಾನಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಎಎಸ್ಪಿ ಡಾ. ಅರುಣ್, ಅದಿಕಾರಿಗಳಾದ ತಾರಾನಾಥ್, ನಾಗೇಶ್, ಯಲ್ಲಪ್ಪ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಮಾದಕ ದ್ರವ್ಯ ಪಿಡುಗು ತಡೆಗಟ್ಟಲು ಕಾಲೇಜುಗಳಲ್ಲೂ ತಂಡ"