ಭಾರತೀಯ ದಂತವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ, ರಾಜ್ಯ ಶಾಖೆಯ ಮಾಜಿ ಅಧ್ಯಕ್ಷರೂ ಆಗಿದ್ದ ಬಂಟ್ವಾಳ ತಾಲೂಕು ಮಿತ್ತೂರು ಮನೆತನದ ಕರ್ಗಲ್ಲು ನಿವಾಸಿ ಡಾ. ಎಂ.ಗೋಪಾಲಕೃಷ್ಣ ಭಟ್ (66) ಅಕ್ಟೋಬರ್ 8ರಂದು ಬೆಳಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಪತ್ನಿ ಶಂಕರಿ, ಪುತ್ರ ಡಾ.ಅಶೋಕ್, ಪುತ್ರಿ ಡಾ. ಆಶಾ ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ. ಬಿ.ಸಿ.ರೋಡಿನಲ್ಲಿ 1974 ರಿಂದ ದಂತವೈದ್ಯರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಂತವೈದ್ಯರ ಸಂಘ ಸ್ಥಾಪನೆ, ಏಳಿಗೆಗಾಗಿ ಶ್ರಮಿಸಿದ್ದರು. ಪುತ್ತೂರಿನ ಐಡಿಎ ಶಾಖೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಬಂಟ್ವಾಳದಲ್ಲಿ ಎರಡು ಬಾರಿ ರಾಜ್ಯಮಟ್ಟದ ದಂತವೈದ್ಯರ ಸಮಾವೇಶವನ್ನು ನಡೆಸಿದ್ದರು. ತಂಬಾಕು ವಿರುದ್ಧ ಆಂದೋಲನದಲ್ಲೂ ಡಾ.ಎಂ.ಜಿ.ಭಟ್ ಮುಂಚೂಣಿಯಲ್ಲಿದ್ದರು.
ಭಟ್ ನಿಧನಕ್ಕೆ ಐಡಿಎ ಪದಾಧಿಕಾರಿಗಳಾದ ಡಾ.ರಾಜೇಂದ್ರಪ್ರಸಾದ್, ಡಾ.ಮುರಳೀ ಮೋಹನ ಚೂಂತಾರು, ಡಾ.ಕೃಷ್ಣಪ್ರಸಾದ್, ಡಾ.ರಾಘವೇಂದ್ರ ಪಿದಮಲೆ, ಡಾ. ಚರಣ್ ಕಜೆ ಸಹಿತ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ಅಕ್ಕಪಕ್ಕದಲ್ಲಿದ್ದ ವೈದ್ಯರು:
ಡಾ. ಎಂ.ಜಿ. ಭಟ್ ಅವರ ದಂತವೈದ್ಯ ಚಿಕಿತ್ಸಾಲಯ ಬಿ.ಸಿ.ರೋಡಿನ ಹೃದಯಭಾಗದಲ್ಲಿ (ಈಗ ಫ್ಲೈಓವರ್ ಅಲ್ಲಿದೆ) ಇತ್ತು. ಪಕ್ಕದಲ್ಲೇ ಡಾ. ಪಿ.ಜಿ.ಭಟ್ ಅವರ ಚಿಕಿತ್ಸಾಲಯ ಇತ್ತು. ವೈದ್ಯರ ಸಂಖ್ಯೆ ವಿರಳವಾಗಿದ್ದ ಕಾಲದಲ್ಲಿ ದೂರದೂರುಗಳಿಂದ ಎರಡೂ ವೈದ್ಯರ ಬಳಿ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಬ್ಬರೂ ಸ್ನೇಹಿತರು ಮತ್ತು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಸೆ.24ರಂದು ಭಾನುವಾರ ಬಿ.ಸಿ.ರೋಡಿನ ವೈದ್ಯರಾದ ಡಾ. ಪಿ.ಜಿ.ಭಟ್ ನಿಧನ ಹೊಂದಿದ್ದರು. ಇದೀಗ ಡಾ. ಎಂ.ಜಿ.ಭಟ್ ಅವರ ನಿಧನದೊಂದಿಗೆ ಬಿ.ಸಿ.ರೋಡಿನ ಹಳೇ ತಲೆಮಾರು ಸಂಪರ್ಕದಲ್ಲಿದ್ದ ಇಬ್ಬರು ಜನಾನುರಾಗಿ ವೈದ್ಯರನ್ನು ಕಳೆದುಕೊಂಡಂತಾಗಿದೆ.
ಇದನ್ನೂ ಓದಿರಿ:
Be the first to comment on "ದಂತವೈದ್ಯ ಡಾ.ಎಂ.ಜಿ.ಭಟ್ ನಿಧನ"