ಹೊಸ ಡಿಸೈನು, ಹ್ಯಾಗಿದೆ ನೋಡಿದ್ರಾ?

  • ಅನಿತಾ ನರೇಶ್ ಮಂಚಿ
  • ಅಂಕಣ: ಅನಿಕತೆ

Bantwal News


ಬೆಳಿಗ್ಗೆ ಎದ್ದು ಅಚಾನಕ್ಕಾಗಿ ಎದುರಿದ್ದ ಕನ್ನಡಿ ನೋಡಿದರೆ ಕೊಂಚ ಹೊಟ್ಟೆ ಉಬ್ಬಿದಂತಿದೆ ಅನ್ನಿಸಿ, ಇನ್ನು ವಾಕಿಂಗ್ ಸುರು ಮಾಡಲೇ ಬೇಕು ಎಂದು ನಿಶ್ಚಯಿಸಿ ವೇಗವಾಗಿ ನಡೆಯುತ್ತಾ ಹೊರಟಿದ್ದೆ. ನಾನು ಹೋಗುತ್ತಿದ್ದ ದಾರಿಯ ಪಕ್ಕದಲ್ಲೇ ತಿರುವೇಲು ತನ್ನ ಅಂಗಡಿಯ ತುಕ್ಕು ಹಿಡಿದ ಬೋರ್ಡಿನ ಅಕ್ಷರಗಳಿಗೆ ಹೊಸ ಪೈಂಟ್ ಮೆತ್ತುತ್ತಿದ್ದ.

ಅವನನ್ನು ಹಾಗೇಯೇ ಸರಿಸಿ ಹೋಗಲಾದೀತೇ..? ಹೆಜ್ಜೆ ನಿಧಾನಿಸಿ ಪರಿಚಿತ ನಗು ನಕ್ಕೆ. ಅವನೂ ನನ್ನನ್ನು ನೋಡಿ ಮಾಡುತ್ತಿದ್ದ ಕೆಲಸ ನಿಲ್ಲಿಸಿ ಬೀಡಾದಿಂದ ರಾಗರಂಜಿತವಾದ ತನ್ನ ಕೆಂಪು ಹಲ್ಲುಗಳನ್ನು ಅಗಲವಾಗಿ ತೋರಿಸುತ್ತಾ ’ ವಣಕ್ಕಂ ಶಾರ್.. ವಾಂಗೋ ಎಂದು ಹಾರ್ದಿಕ ನಗೆ ಬೀರಿದ.

ಮೊದಲೆಲ್ಲಾ ತಲೆಯ ಮೇಲೆ ದೊಡ್ಡ ಬಟ್ಟೆ ಗಂಟನ್ನು ಹೊತ್ತು ಊರಿಂದೂರಿಗೆ ಸುತ್ತುತ್ತಾ ಬಟ್ಟೆ ವ್ಯಾಪಾರ ಮಾಡುತ್ತಿದ್ದ ತಿರುವೇಲು ಈಗ ಇಳಿವಯಸ್ಸಿನ ಕಾರಣದಿಂದ ಮನೆಯಲ್ಲೇ ಬಟ್ಟೆ ವ್ಯಾಪಾರ ಶುರು ಮಾಡಿದ್ದ. ಇದ್ದೊಬ್ಬ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರಿಂದ ಗಂಡ ಹೆಂಡತಿ ಬರುವ ಆದಾಯದಲ್ಲೇ ಸುಖವಾಗಿದ್ದರು.

ಹೆಂಡತಿ ಕರ್ಪಗಂ ಕೂಡಾ ಮನೆಗೆಲಸ ಮುಗಿಸಿ ಬಟ್ಟೆ ಅಂಗಡಿಯಲ್ಲಿ ಗಂಡನಿಗೆ ಸಹಾಯ ಮಾಡುತ್ತಿದ್ದುದು ತಿರುವೇಲುಗೆ ಇನ್ನೂ ಅನುಕೂಲವೇ ಆಗಿತ್ತು. ಹೊರಗೆ ಅತ್ತಿತ್ತ ಹೋಗಿ ಬರುವವರನ್ನು ಕರೆದು ಮಾತಾನಾಡಿಸಿ ಹೊಸ ಬಟ್ಟೆ ಬಂದಿದೆ ಎಂದು ತೋರಿಸಿ ಮಾರಾಟ ಮಾಡುವ ಕಲೆ ಅವನಿಗೆ ಚೆನ್ನಾಗಿ ರಕ್ತಗತವಾಗಿತ್ತು.

ಸ್ವಲ್ಪ ದೂರ ನಡೆದೇ ಏದುಸಿರು ಬಿಡುತ್ತಿದ್ದ ನನಗೆ ಇವತ್ತಿನ ಅವನ ಸ್ವಾಗತ ಕುಷಿ ನೀಡಿತು. ಹಳೆಯದಾದ ಅವನ ಬೋರ್ಡು ಯಾವ ಇಸುವಿಯಲ್ಲಿ ಬರೆಸಿದ್ದು ಎಂದು ನೆನಪಿಸಿಕೊಳ್ಳಲು ಪೇಚಾಡುತ್ತಿದ್ದ ನನಗೆ ಕೂರಲು ಕುರ್ಚಿ ನೀಡಿದ. ಹಾಗೆಯೇ ಮನೆಯ ಒಳ ನಡೆದು ಹೊರ ಬಂದವನ ಕೈಯ ತುಂಬಾ ಮಡಚಿಟ್ಟ ಹೊಸ ಷರಟುಗಳ ರಾಶಿಯಿತ್ತು. ಹೊಸ ದಿಸೈನ್ ಷರ್ಟ್ ಬಂದಿದೆ ಶಾರ್.. ಇದೆಲ್ಲ ನಿಮ್ಮಂತವರಿಗಾಗಿಯೇ ನೋಡಿ ಶಾರ್ ಎಂದು ನನ್ನೆದುರಿದ್ದ ಮೇಜಿನ ಮೇಲೆ ಹರವಿದ.

ಮೊನ್ನೆಯಷ್ಟೇ ಹಬ್ಬಕ್ಕೆಂದು ಮನೆ ಮಂದಿಗೆಲ್ಲಾ ಬಟ್ಟೆ ತೆಗೆದು ಪರ್ಸ್ ಹಗುರಾಗಿತ್ತು. ಆದರೂ ನೋಡುವ ಚಪಲಕ್ಕೇನು ದುಡ್ಡು ಕೊಡಬೇಕೇ.. ಆಮೇಲೆ ಬೇಡ ಅಂದರಾಯಿತು ಎಂದು ಅದರ ರೇಟಿನ ಕಡೆಗೆ ಕಣ್ಣಾಡಿಸತೊಡಗಿದೆ.

ಎಲ್ಲಾ ಕೈಗೆಟುಕುವ ಬೆಲೆಯದ್ದೇ ಆದರೂ ಕೆಲವು ಬಣ್ಣ ಇಷ್ಟ ಆಗದಿದ್ದರೆ ಇನ್ನು ಕೆಲವು ಬಟ್ಟೆಯ ಕ್ವಾಲಿಟಿ ಚೆನ್ನಾಗಿಲ್ಲ ಅನ್ನಿಸಿತು.ಆದರೆ ಪಕ್ಕನೆ ಕಣ್ಣಿಗೆ ಬಿದ್ದ ಕಪ್ಪು ಬಿಳುಪಿನ ಬಣ್ಣದ ಶರ್ಟೊಂಡು ಆಸೆ ಹುಟ್ಟಿಸಿಯೇ ಬಿಟ್ಟಿತು. ಅದರ ನುಣುಪನ್ನು ಸ್ಪರ್ಷಿಸುತ್ತಾ ಅದರ ಬಟನ್ನುಗಳ ಕಡೆ ನೋಡಿದೆ. ಎಲ್ಲಾ ಹೊಸ ಡಿಸೈನಿನ ಬಟನ್ನುಗಳಂತೆ ತೋರಿತು. ಆದರ್ ಅದರ ಬಟನ್ ಗಳು ಷರ್‍ಟಿನ ಬಲ ಭಾಗದಲ್ಲಿರದೇ ಏಡ ಭಾಗದಲ್ಲಿದ್ದವು. ಅದು ಹುಡುಗಿಯರು ಧರಿಸುವ ಶರ್ಟ್ ಇರಬಹುದೇನೋ ಎಂಬ ಸಣ್ಣ ಸಂಶಯ ತಲೆದೋರಿತು.

ತಿರುವೇಲುವನ್ನು ಕೇಳಿದೆ. ಅವನು ಅದನ್ನು ಒಮ್ಮೆ ಹುಡುಗರ ಶರ್ಟು ಎಂದರೆ ಮತ್ತೊಮ್ಮೆ ಹುಡುಗಿರದ್ದು ಇದ್ರೂ ಇರಬಹುದು ಶಾರ್.. ಎನ್ನುತ್ತಾ ತಲೆ ಕೆರೆದು ಕೊಳ್ಳ ತೊಡಗಿದ.

ನನಗ್ಯಾಕೋ ಆ ಶರ್ಟನ್ನು ಅಲ್ಲಿಯೇ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಹಾಗೆಂದು ಅದು ಹುಡುಗಿಯರು ಧರಿಸುವ ಶರ್ಟ್ ಆಗಿದ್ದರೆ ನಾನು ಹಾಕಿಕೊಂಡು ಹೋಗಿ ನಗೆಗೀಡಾಗಬಹುದೆಂಬ ಭಯ ಬೇರೆ. ಬೇಡ ಎಂದು ಕುಳಿತಲ್ಲಿಂದ ಎದ್ದೆ.

ಬೆಳಿಗ್ಗೆ ಬೆಳಿಗ್ಗೆಯೇ ಆಗುವ ವ್ಯಾಪಾರವನ್ನು ತಪ್ಪಿಸಲು ತಿರುವೇಲುವಿಗೂ ಮನಸ್ಸಿರಲಿಲ್ಲ. ನಿಲ್ಲಿ ಶಾರ್ ನನ್ನ ಮಗಳು ಬಂದಿದ್ದಾಳೆ ರಾಜಂ.. ಅವಳಿಗೆ ಇದೆಲ್ಲ ಗೊತ್ತಿರುತ್ತೆ ಕೇಳ್ತೀನಿ ಇರಿ ಎಂದು ಮಗಳನ್ನು ಕರೆದ.

ಅಷ್ಟು ಹೊತ್ತಿಗೆ ನನ್ನನ್ನು ಕಂಡ ಅವನ ಹೆಂಡತಿ ಕರ್ಪಗಂ ಹೋ ಶಾರ್.. ನೀವಾ.. ಕೂತ್ಕೊಳ್ಳಿ ಶಾರ್.. ಒರು ಗ್ಲಾಸ್ ಟೀ ಎಡ್ತಿಟ್ ವರೆ.. ಅಂತ ಒಳ ನಡೆದಳು.
ಅಷ್ಟರಲ್ಲಿ ಹೊರಗೆ ಬಂದ ಅವನ ಮಗಳು ರಾಜಂ ನನ್ನನ್ನು ಕಂಡು ಪರಿಚಿತ ನಗೆ ಬೀರಿದಳು. ತಿರುವೇಲು ಈಗ ಕುಷಿಯಿಂದ ಅಲ್ಲಿದ್ದ ಶರ್ಟನ್ನು ಎತ್ತಿ ಅವಳಿಗೆ ತೋರಿಸಿ ನೋಡಮ್ಮಾ ನಮಗಿಬ್ಬರಿಗೂ ಒಂದು ಸಂದೇಹ ಇದು ಲೆಡೀಸ್ ಶರ್ಟೋ, ಜಂಟ್ಸ್ ಶರ್ಟೋ.. ಇದರಲ್ಲಿರುವ ಬಟನ್ನು ಸ್ವಲ್ಪ ಬೇರೆ ತರ ಡಿಸೈನ್ ಇದೆ ನೋಡು. ಅದರಿಂದಾಗಿ ಗೊತ್ತಾಗ್ತಿಲ್ಲ ಅಂದ.

ಅವಳು ಶರ್ಟನ್ನೆತ್ತಿ ತಿರುವಿ ಮುರುವಿ ನಂತರ ಮೂಗಿಗೆ ಹಿಡಿದು ಮೂಸಿ ನೋಡಿದಳು. ಇವಳದ್ಯಾವೂರ ಪರೀಕ್ಷೆಯಪ್ಪಾ ಇದು ಎಂದು ನಗು ಬಂತು.
ಆದರೆ ಅವಳು ಗಂಭೀರವಾಗಿ ತಿರುವೇಲುವಿನೆಡೆಗೆ ತಿರುಗಿ, ಅಪ್ಪಾ,,ಏನಪ್ಪಾ ನೀನು ಕೈಗೆ ಸಿಕ್ಕಿದ್ದೆಲ್ಲಾ ಮಾರೋದೇನಾ.. ಅಂತ ನುಡಿದು, ಅಮ್ಮಾ ಇದು ನಾನು ನಿನ್ನೆ ಇಸ್ತ್ರಿ ಮಾಡಿಟ್ಟಿದ್ದ ಆರ್ಮುಗಂ ಶರ್ಟು.. ಇದಿಲ್ಲಿಗೆ ಹೇಗೆ ಬಂತು..? ಎಂದು ಜೋರಾಗಿ ಕೇಳುತ್ತಾ ಶರ್ಟು ಎತ್ತಿಕೊಂಡು ಒಳ ನಡೆದಳು.
ನಾನು ಕರ್ಪಗಂ ಕೊಟ್ಟ ಟೀ ಹೀರುತ್ತಾ ನಾಳೆಯಿಂದ ಬೇರೆ ರಸ್ತೆಯಲ್ಲಿ ವಾಕಿಂಗ್ ಹೋಗಬೇಕೆಂದು ನಿಶ್ಚಯಿಸಿದೆ.

******

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಹೊಸ ಡಿಸೈನು, ಹ್ಯಾಗಿದೆ ನೋಡಿದ್ರಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*