ಹೊಸ ದಾರಿ ಹಿಡಿದ ಅಡಿಗರು

  • ಅಜಕ್ಕಳ ಗಿರೀಶ ಭಟ್

ಮೊಗೇರಿ ಗೋಪಾಲಕೃಷ್ಣ ಅಡಿಗರನ್ನು ಒಂದು ತಲೆಮಾರಿನ ಕಣ್ಣು ತೆರೆಸಿದ ಕವಿ ಎಂದು ಕರೆಯುತ್ತಾರೆ. ಹೀಗೆ ಕರೆಯಲು ಕಾರಣವಿದೆ. ಅಡಿಗರ ಕಾವ್ಯದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರಿಗಿಂತ ಪೂರ್ವದಲ್ಲಿ ಕನ್ನಡ ಕವಿಗಳು ಯಾವುದಕ್ಕೆ ಒತ್ತು ಕೊಟ್ಟಿದ್ದರು ಎನ್ನುವುದನ್ನು ನೋಡಬೇಕು. ಇಪ್ಪತ್ತನೇ ಶತಮಾನದ ಮೊದಲರ್ಧವನ್ನು ನಾವು ಕನ್ನಡ ಸಾಹಿತ್ಯದ ದೃಷ್ಟಿಯಲ್ಲಿ ನವೋದಯಯುಗ ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಈ ಕಾಲಘಟ್ಟದಲ್ಲಿ ಕನ್ನಡದಲ್ಲಿ ಅತ್ಯುತ್ತಮ ಕವಿಗಳು ಬಂದರು. ಪಂಜೆ, ಗೋವಿಂದ ಪೈ, ಬಿ.ಎಂ. ಶ್ರೀ, ಬೇಂದ್ರೆ,  ಕುವೆಂಪು, ಮಾಸ್ತಿ, ಪುತಿನ ಅಷ್ಟೇ ಅಲ್ಲದೆ ಇನ್ನೂ ಅನೆಕ ಮಹತ್ವದ ಕವಿಗಳು ಕವಿತೆಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಜಾಹೀರಾತು

ಇಂಗ್ಲಿಷಿನ ರೊಮ್ಯಾಂಟಿಕ್ ಕಾವ್ಯದ ಪ್ರಭಾವದಿಂದ ಆರಂಭದ ಹಂತದಲ್ಲಿ ಕನ್ನಡ ಕವಿತೆಗಳು ರಚಿತವಾದುದರಿಂದ ಆ ಕವಿತೆಗಳು ಭಾವಪ್ರಧಾನವಾಗಿದ್ದವು. ಪ್ರಕೃತಿ ಕುರಿತು, ಅದರ ಸೌಂದರ್ಯ, ವೈಭವ ಇತ್ಯಾದಿ ಬಗ್ಗೆ ಕವನಗಳು ಬಂದವು. ಅದು ಸ್ವಾತಂತ್ರ್ಯ ಹೋರಾಟದ ಕಾಲವಾಗಿದ್ದುದರಿಂದ ಮತ್ತು ಕನ್ನಡ ಏಕೀಕರಣ ಹೋರಾಟದ ಕಾಲವಾಗಿದ್ದುದರಿಂದ, ರಾಷ್ಟ್ರಭಕ್ತಿಯನ್ನು ಹೇಳುವ ಮತ್ತು ಕನ್ನಡ ನಾಡನ್ನು ಸ್ತುತಿಸುವ ಹಾಡುಗಳು ಹೆಚ್ಚು ಹೆಚ್ಚು ರಚನೆಯಾಗುತ್ತಿದ್ದವು. ಒಟ್ಟಿನಲ್ಲಿ ಕಷ್ಟ ಸುಖಗಳಿಂದ ಕೂಡಿದ ಬದುಕಿನ ವಾಸ್ತವದ ಬಗ್ಗೆ, ಮಾನವನ ಅಸ್ತಿತ್ವದ ವಿವಿಧ ಆಯಾಮಗಳ ಬಗ್ಗೆ ವಿಮರ್ಶಾತ್ಮಕ ದೃಷ್ಟಿಗೆ ವಿಶೇಷ ಮಹತ್ವ ಕಾವ್ಯದಲ್ಲಿ ಸಿಗಲಿಲ್ಲ.  ಗೇಯಪ್ರಧಾನವಾದ, ಅಂದರೆ ಹಾಡಲು ಅನುಕೂಲವಾಗುವ ರೀತಿಯ ರಚನೆಗಳಿಗೆ ಪ್ರಾಧಾನ್ಯವನ್ನು ಕವಿಗಳು ನೀಡುತ್ತಿದ್ದರು. ಹೀಗೆ ಭಾವಪ್ರಾಧಾನ್ಯ ಮತ್ತು ಗೇಯಪ್ರಾಧಾನ್ಯ ಆಗಿನ ಕಾವ್ಯದ ವೈಶಿಷ್ಟ್ಯವಾಗಿತ್ತು.

ಆರಂಭದ ಹಂತದಲ್ಲಿ ಅಡಿಗರು ಕೂಡ ಇದೇ ಬಗೆಯಲ್ಲಿ ಭಾವಪ್ರಧಾನ ಮತ್ತು ಗೇಯಪ್ರಧಾನ ಕವಿತೆಗಳನ್ನು ಬರೆದರು. ಭಾವ, ರಸ ,ಗೇಯತೆಯಿಂದ ಕೂಡಿದ ಛಂದೋಬದ್ಧ ಕವನಗಳನ್ನು ರಚಿಸುವುದು ಅಡಿಗರಿಗೆ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಅವರ ಯಾವ ಮೋಹನ ಮುರಲಿ ಕರೆಯಿತೊ ದೂರ ತೀರಕೆ ನಿನ್ನನು ಎಂಬ ಕವನ ಪಡೆದ ಜನಪ್ರಿಯತೆ ಬಗ್ಗೆ ಬೇರೆ ಹೇಳಬೇಕಿಲ್ಲ. ಕಟ್ಟುವೆವು ನಾವು ಹೊಸನಾಡೊಂದನು ಅನ್ನುವ ಹಾಡೂ ಹಾಗೆಯೇ. ಆದರೆ ಎಲಿಯಟ್ ನಂಥ ಇಂಗ್ಲಿಷ್ ಕವಿಗಳ ಕಾವ್ಯದ ಪ್ರಭಾವ ಹಾಗೂ ಸ್ವಾತಂತ್ರ ಪಡೆದ ನಂತರದ ದೇಶದ ಸ್ಥಿತಿಗತಿ ಅಡಿಗರ ಕಾವ್ಯದಲ್ಲಿ ಗಮನಾರ್ಹ ಬದಲಾವಣೆ ಉಂಟಾಗಲು ಕಾರಣವಾದವು. ಅವರ ಕಾವ್ಯದ ರಚನಾತಂತ್ರ ಮತ್ತು ಕಾವ್ಯದ ವಸ್ತುವಿನಲ್ಲಿ ಈ ಬದಲಾವಣೆ ಕಾಣುತ್ತದೆ.

ಈ ಭೂಮಿ ಅಥವಾ ಪ್ರಕೃತಿ ಇತ್ಯಾದಿ ಬಗ್ಗೆ ಕೇವಲ ರಮ್ಯ ಕಲ್ಪನೆಗಳನ್ನು ಕವಿತೆಗಳ ಮೂಲಕ ಹೇಳಿದರೆ ಸಾಲದು; ಬದುಕಿನಲ್ಲಿ ಕೇವಲ ರಮ್ಯವಾದ ಸಂಗತಿಗಳು ಅಥವಾ ಸಂತೋಷ ದುಃಖ ಮುಂತಾದ ಭಾವುಕ ವಿಚಾರಗಳು ಮಾತ್ರ ಇರುವುದಲ್ಲ; ಬದುಕಿನ ಇನ್ನಿತರ ಮುಖಗಳ ಶೋಧನೆ  ಕೂಡ ಕಾವ್ಯದಲ್ಲಿ ಆಗಬೇಕು ಎಂಬುದನ್ನು ಅಡಿಗರು ಪ್ರತಿಪಾದಿಸಲಾರಂಭಿಸಿದರು. ಭಾವ ಬಂದಂತೆ ಹಾಡುತ್ತ ಹೋಗುವ ಬದಲು ಕಾವ್ಯ ರಚನೆ ಕೂಡ ಒಂದು ಕುಸುರಿ ಕೆಲಸದಂತೆ ಧ್ಯಾನಸ್ಥನಾಗಿ ಕವಿ ಮಾಡಬೇಕಾದ ಕೆಲಸ ಎಂದು ಅವರು ಭಾವಿಸದರು. ಪದಗಳ ದುಂದುವೆಚ್ಚವಾಗಬಾರದು ಎನ್ನುವುದು ಅವರ ನಿಲುವು. ಭಾಷೆಯ ಬಿಗಿ ಅವರಿಗೆ ಮುಖ್ಯವೆನಿಸಿತು. ಹೀಗಾಗಿ ಗೇಯತೆಗೆ ಮುಖ್ಯವಾಗುವ ಪ್ರಾಸ, ಛಂದೋಬದ್ಧತೆ ಇವುಗಳ ಬದಲು ನವ್ಯವಾದ ಶೈಲಿಯನ್ನು ಅವರು ರೂಢಿಸಿಕೊಂಡರು. ಗೋಕಾಕರು ಕೂಡ ವಸ್ತು ಮತ್ತು ರಚನೆಯ ತಂತ್ರದಲ್ಲಿ ಇಂಥದೇ ಬದಲಾವಣೆಯನ್ನು ಮಾಡಿಕೊಂಡಿದ್ದರು. ಆದರೆ ಅವರ ಕಾವ್ಯ ಅಡಿಗರದರಷ್ಟು ಪರಿಣಾಮ ಬೀರಲಿಲ್ಲ.

ಜಾಹೀರಾತು

ದೇಶ ಸ್ವತಂತ್ರವಾಗುವವರೆಗೆ ಜನರಲ್ಲಿ ಒಂದು ಭಾವನೆಯಿತ್ತು. ನಾವು ಈಗ ಅನುಭವಿಸುತ್ತಿರುವ ಕಷ್ಟಗಳಿಗೆಲ್ಲ ಬ್ರಿಟಿಷರೇ ಕಾರಣ; ಒಮ್ಮೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ್ಕಿದರೆ ಎಲ್ಲವೂ ಸರಿಯಾಗುತ್ತದೆ ಎಂಬ ಅನಿಸಿಕೆಯಿತ್ತು. ಆದರೆ ಸ್ವಾತಂತ್ರ್ಯ ದೊರೆತು ಕೆಲವು ವರ್ಷಗಳಾದರೂ ಏನೂ ಬದಲಾವಣೆಯಾದಂತೆ ತೋರಲಿಲ್ಲ. ಇದರಿಂದ ಸುಶಿಕ್ಷಿತರಾದವರಲ್ಲಿ ಒಂದು ಬಗೆಯ ಭ್ರಮನಿರಸನವಾದಂತೆ ಆಯಿತು. ಇವೆಲ್ಲದಕ್ಕೂ ಅಡಿಗರ ಕಾವ್ಯ ಧ್ವನಿಯಾಯಿತು. ಪ್ರಭುತ್ವದ ನಡವಳಿಕೆ, ಮನುಷ್ಯನ ಅಂತರಂಗದ ಶೋಧನೆ, ಸ್ವವಿಮರ್ಶೆ ಇವೆಲ್ಲ ಅಡಿಗರ ಕಾವ್ಯದ ವಸ್ತುಗಳಾದವು. ಆಗತಾನೇ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದ ಅಂದರೆ ಸಾಹಿತ್ಯದಲ್ಲಿ ಬಿ.ಎ., ಎಂ.ಎ. ಕಲಿಯುತ್ತಿದ್ದ ಒಂದು ತಲೆಮಾರು ಈ ಹೊಸಬಗೆಯ ಕಾವ್ಯದಿಂದ ವಿಶೇಷವಾಗಿ ಪ್ರಭಾವಿತವಾಯಿತು. ನವ್ಯಕಾವ್ಯ ಎಂಬ ಹೊಸರೀತಿಯ ಕವನಗಳು ಯಥೇಚ್ಚವಾಗಿ ಕನ್ನಡದಲ್ಲಿ ೧೯೬೦-೭೦ರ ದಶಕಗಳಲ್ಲಿ ಬಂದವು. ಹೀಗಾಗಿ ಅಡಿಗರು ಒಂದು ತಲೆಮಾರಿನ ಕಾವ್ಯಸಂವೇದನೆಯನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.

ಸಾಕ್ಷಿಯಂಥ ಸಾಹಿತ್ಯ ಪತ್ರಿಕೆಯ ಮೂಲಕ ಹೊಸಬಗೆಯ ಕಥೆ ಕವನಗಳಿಗೆ ಅವಕಾಶ ನೀಡಿದರು. ಅಷ್ಟೇ ಅಲ್ಲ; ಸಾಹಿತ್ಯ ಹೇಗೆ ಇರಬೇಕು ಎಂಬ ಬಗೆಗಿನ ವಿಚಾರಗಳನ್ನು ಪ್ರಚುರಪಡಿಸಿದರು. ಅಡಿಗರು ವ್ಯಕ್ತಿಸ್ವಾತಂತ್ರದ ದೊಡ್ಡ ಪ್ರತಿಪಾದಕರಾಗಿದ್ದರು. ಹೇಗೆಲ್ಲ ಅದಕ್ಕೆ ಧಕ್ಕೆ ಬರುತ್ತದೆ ಎನ್ನುವುದನ್ನು ತಮ್ಮ ವೈಚಾರಿಕ ಬರಹಗಳ ಮೂಲಕ ಹೇಳಿದರು. ಅವರು ಎಂದೂ ಪ್ರಭುತ್ವದೊಂದಿಗೆ ತಮಗೆ ಒಗ್ಗದುದರೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.

ಹೀಗೆ ಬರೆದ ಮತ್ತು ಬದುಕಿದ ಅಡಿಗರನ್ನು ಮತ್ತು ಅದಕ್ಕಿಂತ ಮುಖ್ಯವಾಗಿ ಅವರ ಸಾಹಿತ್ಯವನ್ನು ಈಗಿನ ತಲೆಮಾರಿಗೆ ತಲುಪಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಈಗೀಗ ಯುವಸಮುದಾಯಕ್ಕೆ ಸಾಹಿತ್ಯದಲ್ಲಿ ಆಸಕ್ತಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿದೆಯೆಂದರೆ ಅಂಥ ಆಸಕ್ತಿ ಮೂಡಿಸುವಲ್ಲಿ ಹಿರಿಯ ತಲೆಮಾರು ವಿಫಲವಾಗಿದೆ ಎಂದೂ ಒಪ್ಪಿಕೊಳ್ಳಬೇಬೇಕಾಗುತ್ತದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಬೋಧಕರನ್ನು ಸೇರಿಸಿಕೊಂಡು ಅಡಿಗರ ಸಾಹಿತ್ಯದ ಬಗ್ಗೆ ಉಪನ್ಯಾಸ, ಚರ್ಚೆಗಳು ನಡೆದರೆ ಒಂದಷ್ಟು ಸಾಹಿತ್ಯಪ್ರೀತಿ ಮತ್ತು ತನ್ಮೂಲಕ ಜೀವನಪ್ರೀತಿ ಬೆಳೆಯಬಹುದು ಎನಿಸುತ್ತದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ ಒಂದರಂದು ಬಿಸಿರೋಡಿನ ಲಯನ್ಸ್ ಸಭಾಂಗಣದಲ್ಲಿ ನಡೆಯಲಿರುವ ಇಡೀದಿನದ ವಿಚಾರಸಂಕಿರಣ ಮಹತ್ವಪೂರ್ಣವಾಗುತ್ತದೆ. ವಿಚಾರಸಂಕಿರಣದ ಅಂಗವಾಗಿ ಏರ್ಪಡಿಸಲಾದ ಅಡಿಗರ ಕುರಿತ ಪ್ರಬಂಧ ಸ್ಪರ್ಧಗೆ ೩೧ ಪ್ರಬಂಧಗಳು ಬಂದಿವೆ ಹಾಗೂ ನೂರಿಪ್ಪತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸಂಕಿರಣದಲ್ಲಿ ಬಾಗವಹಿಸಲು ಹೆಸರು ನೋಂದಾಯಿಸಿದ್ದಾರೆ ಎನ್ನುವುದು ತುಂಬ ಆಶಾದಾಯಕವಾದ ಸಂಗತಿ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಹೊಸ ದಾರಿ ಹಿಡಿದ ಅಡಿಗರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*