ಬಂಟ್ವಾಳ ತಾಲೂಕಿನ ನಾನಾ ಕಡೆಗಳಲ್ಲಿ ಶಾರದೋತ್ಸವ ಸಂಭ್ರಮ. ಹಲವೆಡೆ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕವಾಗಿ ಆಚರಿಸಿದರೆ, ಕೆಲವೆಡೆ ಕುಟುಂಬ, ಸಮಾಜದ ಬಂಧುಗಳು ಸೇರಿ ಆಚರಿಸುತ್ತಾರೆ. ತಾಲೂಕಿನ ಕೆಲವು ಸಾರ್ವಜನಿಕ ಶಾರದೋತ್ಸವಗಳ ವಿವರ ಇಲ್ಲಿದೆ.
ಕಲ್ಲಡ್ಕ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ 40ರ ಸಂಭ್ರಮ. ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕದಲ್ಲಿ ಆಯೋಜಿಸಿರುವ ಈ ಉತ್ಸವ 28ರಂದು ಆರಂಭಗೊಳ್ಳಲಿದೆ. ಪ್ರತಿದಿನ ಹಲವು ಕಾರ್ಯಕ್ರಮಗಳೊಂದಿಗೆ ನಡೆಯುವ ಉತ್ಸವದ ಶೋಭಾಯಾತ್ರೆ ಅ.೧ರಂದು ಸಂಜೆ ನಡೆಯುವುದು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಆರಾಸಲ್ಪಡುವ ಶ್ರೀ ಶಾರದಾ ಮಹೋತ್ಸವಕ್ಕೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮ. ಸೆ.೨೬ರಿಂದ ಆರಂಭಗೊಂಡಿರುವ ಉತ್ಸವ ಅಕ್ಟೋಬರ್ ೧ವರೆಗೆ ನಾನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅಧ್ಯಕ್ಷತೆಯ ಸಮಿತಿ ಸದಸ್ಯರು ಸಹಿತ ಉಪಸಮಿತಿ, ಭಜಕವೃಂದ ಶ್ರೀ ಶಾರದೋತ್ಸವದ ಸುವರ್ಣಮಹೋತ್ಸವದ ನೇತೃತ್ವ ವಹಿಸಿದೆ.
ವಾಮದಪದವಿನಲ್ಲಿ ೨೫ನೇ ವರ್ಷದ ಶಾರದೋತ್ಸವ ಸೆ.೨೮ರಿಂದ ೩೦ವರೆಗೆ ನಡೆಯಲಿದೆ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಶಾರದಾ ಪೂಜಾ ಮಹೊತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲೆ ಶಾಲಾ ವಠಾರದಲ್ಲಿ ಸೆ. ೨೭ರಂದು ಜರಗಲಿದೆ.
ಪುಂಜಾಲಕಟ್ಟೆ ಶ್ರೀ ಶಾರದಾಂಬಾ ಯುವಕ ಮಂಡಲ ವತಿಯಿಂದ ಸೆ. ೨೭-ಅ. ೧ವರೆಗೆ ಶ್ರೀ ಶಾರದಾ ಪೂಜೆ ನಡೆಯಲಿದೆ. ರಾಯಿ,ಕೊಯಿಲ,ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸೆ. ೩೦-ಅ. ೧ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುವುದು. ಸೆ. ೨೮ರಂದು ಮಾವಿನಕಟ್ಟೆಯಲ್ಲಿ ಶ್ರೀ ಶಾರದೋತ್ಸವ ನಡೆಯಲಿದೆ.
Be the first to comment on "ಬಂಟ್ವಾಳ ತಾಲೂಕಿನ ಹಲವೆಡೆ ಶಾರದೋತ್ಸವ ಸಂಭ್ರಮ"