ಸಮಾಜ ವನ್ನು ಕಟ್ಟಬೇಕಾಗಿರುವುದು ಹಣದಿಂದಲ್ಲ. ಬದಲಾಗಿ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ. ಈ ಮೂರರ ಬಂಧನ ಕಳಚಲಾಗದ್ದು. ಅಂತಹ ಬೆಸುಗೆಯನ್ನು ಯುವವಾಹಿನಿ ಬೆಸೆಯುತ್ತಿದೆ ಎಂದು ಚಿಂತಕ, ಯುವ ಸಂಘಟಕ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು
ಬಂಟ್ವಾಳ ತಾಲೂಕಿನ ಮಾಣಿ ನಾರಾಯಣಗುರು ಸಮುದಾಯಭವನದಲ್ಲಿ ಜರುಗಿದ ಯುವವಾಹಿನಿಯ ೨೬ನೇ ನೂತನ ಘಟಕ ಯುವವಾಹಿನಿ (ರಿ) ಮಾಣಿ ಘಟಕದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಂಪತ್ ಬಿ.ಸುವರ್ಣ ಮಾತನಾಡಿ ಯುವಶಕ್ತಿ ಸಮಾಜದ ಸದುದ್ದೇಶಕ್ಕಾಗಿ ದುಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಈ ನಿಟ್ಟಿನಲ್ಲಿ ಶಿಸ್ತು ಬದ್ದ ಸಂಘಟನೆ ಯುವವಾಹಿನಿ ಬಿಲ್ಲವ ಸಮಾಜಕ್ಕೆ ಮಾತ್ರವಲ್ಲ ಇತರರಿಗೂ ಮಾದರಿಯಾಗಿದೆ ಎಂದರು.
ಮಾಣಿ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಯುವವಾಹಿನಿ (ರಿ) ಮಾಣಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅವರು ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜೇಶ್ ಪೂಜಾರಿ ಬಾಬನಕಟ್ಟೆ ನೇತ್ರತ್ವದಲ್ಲಿ ೨೯ ಸದಸ್ಯರ ಯುವವಾಹಿನಿ ಮಾಣಿ ಘಟಕದ ೨೦೧೭-೧೮ ನೇ ಸಾಲಿನ
ನೂತನ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಬೆಹರೈನ್ ಗುರುಸೇವಾ ಸಮಿತಿಯ ಸದಸ್ಯರಾದ ಸೌಮ್ಯಾ ಶೇಖರ್, ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ.ತಮ್ಮಯ, ಮಾಣಿ ನಾರಾಯಣಗುರು ಸೇವಾ ಸಂಘದ ಗೌರವ ಅಧ್ಯಕ್ಷರಾದ ಈಶ್ವರ ಪೂಜಾರಿ, ಮಾಣಿ ನಾರಾಯಣಗುರು ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ ಬಾಯಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ಬಾಬನಕಟ್ಟೆಯಿಂದ ಮಾಣಿ ನಾರಾಯಣಗುರು ಸಮುದಾಯ ಭವನಕ್ಕೆ ಗುರುವರ್ಯರ ಸಂದೇಶದ ವಾಹನಜಾಥಾ ಜರುಗಿತು.
ಬ್ರಹ್ಮಶ್ರೀ ನಾರಾಯಣಗುರುಗಳ ೧೬೩ ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರುಪೂಜೆ ನಡೆಯಿತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತುಂಬಿ ತುಳುಕಿದ ಜನಸ್ತೋಮ, ಅಚ್ಚುಕಟ್ಟಾದ ಸಭಾ ಕಾರ್ಯಕ್ರಮ ಎಲ್ಲರ ಆಕರ್ಷಣೆ ಕೇಂದ್ರವಾಯಿತು.
ಈ ಸಂದರ್ಭದಲ್ಲಿ ಮಾಣಿ ಬಿಲ್ಲವ ಸಂಘದ ಆಶ್ರಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು
ಯುವವಾಹಿನಿ ಮಾಣಿ ಘಟಕದ ಸಲಹೆಗಾರರಾದ ಪ್ರೇಮನಾಥ್ ಕೆ ಸ್ವಾಗತಿಸಿದರು. ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಸಂಚಾಲಕರಾದ ಟಿ.ಶಂಕರ ಸುವರ್ಣ ಪ್ರಸ್ತಾವನೆ ಮಾಡಿದರು, ಯುವವಾಹಿನಿ ಮಾಣಿ ಘಟಕದ ನೂತನ ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ ಧನ್ಯವಾದ ನೀಡಿದರು, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನಂಬಿಕೆ, ವಿಶ್ವಾಸ, ಪ್ರೀತಿಯ ಬೆಸುಗೆ ಯುವವಾಹಿನಿಯಿಂದ ಸಾಧ್ಯ"