ಕಟ್ಟಡವೊಂದಕ್ಕೆ ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಸಾಮಾನ್ಯಸಭೆಯಲ್ಲಿ ಮುಖ್ಯಾಧಿಕಾರಿ ತಿಳಿಸಿದ್ದರೂ ನಿರ್ಣಯವನ್ನು ದಾಖಲಿಸಿಲ್ಲ ಎಂದು ಆರೋಪಿಸಿ, ವಿಪಕ್ಷ ಬಿಜೆಪಿ ಸದಸ್ಯರು ಬುಧವಾರ ಸಂಜೆಯಿಂದ ರಾತ್ರಿವರೆಗೆ ದಿಢೀರನೆ ಬಂಟ್ವಾಳ ಪುರಸಭೆ ಎದುರು ಧರಣಿ ಕುಳಿತರು. ಸಭೆ ನಡೆದು 16 ದಿನಗಳು ಕಳೆದರೂ ನಿರ್ಣಯ ಪ್ರತಿ ಪಡೆದುಕೊಂಡಾಗ ಅದರಲ್ಲಿ ಲಿಖಿತ ದೂರಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ದಾಖಲಿಸದಿರುವುದು ಕಂಡು ಬಂದಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರುಗಳಾದ ಬಿ.ದೇವದಾಸ ಶೆಟ್ಟಿ,ಭಾಸ್ಕರ ಟೈಲರ್ ಮತ್ತು ಸುಗುಣಾ ಕಿಣಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅವರ ಮನವೊಲಿಸಲು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮತ್ತಡಿ ಸಹಿತ ಸಿಬ್ಬಂದಿ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ತಹಶೀಲ್ದಾರ್ ಭರವಸೆ: ರಾತ್ರಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಪುರಸಭೆಗೆ ಆಗಮಿಸಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು. ಸೆ. ೨೧ರ ಬೆಳಗ್ಗೆ ಸಹಾಯಕ ಕಮೀಷನರ್ ರೇಣುಕಾಪ್ರಸಾದ್ ಅವರ ಸಮ್ಮುಖದಲ್ಲಿ ಪುರಸಭಾ ಅಧ್ಯಕ್ಷರನ್ನೊಳಗೊಂಡಂತೆ ಸಭೆಯನ್ನು ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಈ ಸಭೆಗೆ ತಾವು ಭಾಗವಹಿಸುವುದಿಲ್ಲ ಎಂದು ಬಿಜೆಪಿ ಸದಸ್ಯರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಸೆ.೪ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯ ಪುಸ್ತಕದಲ್ಲಿ ದಾಖಲಾಗಿ ನಮಗೆ ಅದರ ಪ್ರತಿ ದೊರಕಬೇಕು. ತಪ್ಪಿದಲ್ಲಿ ಮತ್ತೆ ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Be the first to comment on "ಬಂಟ್ವಾಳ ಪುರಸಭೆಯಲ್ಲಿ ದಿಢೀರ್ ಧರಣಿ"