ಬಹುನಿರೀಕ್ಷಿತ ಮಿನಿ ವಿಧಾನಸೌಧ, ಕೆಎಸ್ಸಾರ್ಟಿಸಿ ಹೈಟೆಕ್ ಬಸ್ ನಿಲ್ದಾಣ, ಸುಸಜ್ಜಿತ ನಿರೀಕ್ಷಣಾ ಮಂದಿರ, ಆರ್.ಟಿ.ಒ, ಮೆಸ್ಕಾಂ ಭವನ ಸಹಿತ ಸಾರ್ವಜನಿಕರ ಸೇವೆಗೆ ಅನುಕೂಲವಾಗುವ ಹಲವು ಕೊಡುಗೆಗಳನ್ನು ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಈ ವಿಷಯವನ್ನು ಮೇಲ್ಕಾರ್ ನಲ್ಲಿ ಸಚಿವ ಬಿ.ರಮಾನಾಥ ರೈ ಪ್ರಕಟಿಸಿದರು.
2 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಗೊಂಡ ಮೆಲ್ಕಾರ್-ಮಾರ್ನಬೈಲು ರಸ್ತೆ ಹಾಗೂ ಹೈಮಾಸ್ಟ್ ದೀಪಗಳನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ತಾಲೂಕಿನ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ, ಮೆಸ್ಕಾಂ ಕಛೇರಿ, ಬಂಟ್ವಾಳದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಿರೀಕ್ಷಣಾ ಮಂದಿರ, ಮೇಲ್ದರ್ಜೆಗೇರಿದ ಸರಕಾರಿ ಆಸ್ಪತ್ರೆ, ಬಂಟ್ವಾಳಕ್ಕೆ ಮಂಜೂರುಗೊಂಡಿರುವ ನೂತನ ಆರ್‌ಟಿಒ ಕಛೇರಿಯನ್ನು ಮೆಲ್ಕಾರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಪಂಜೆ ಮಂಗೇಶ ಭವನ, ಅಂಬೇಡ್ಕರ್ ಭವನ, ವಿವಿಧ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬೆಂಜನಪದವು ತಾಲೂಕು ಕ್ರೀಡಾಂಗಣ ಮೊದಲಾದ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಬಂಟ್ವಾಳದಲ್ಲಿ ದೇವರಾಜು ಅರಸು ಭವನ, ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ಹಾಗೂ ಕಾರ್ಮಿಕ ಭವನ ನಿರ್ಮಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಶೀಘ್ರ ರೂಪುರೇಷೆ ಮಾಡಲಾಗುವುದು ಎಂದು ಸಚಿವ ರೈ ಹೇಳಿದರು.
ಅಭಿವೃದ್ದಿ ಕಾಮಗಾರಿಗಳು ಅದು ಕೇವಲ ಭಾಷಣ ಮಾಡಿದ ಹಾಗಲ್ಲ. ಅದನ್ನು ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟದ ಕೆಲಸ. ಬಂಟ್ವಾಳ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರಿಸುವುದಾಗಿ ಸಚಿವರು ಇದೇ ವೇಳೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸದಸ್ಯ ಸಂಜೀವ ಪೂಜಾರಿ, ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ, ಜಿ ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಪುರಸಭಾ ಸದಸ್ಯರಾದ ಜೆಸಿಂತಾ ಡಿಸೋಜ, ಸಂಜೀವಿನಿ, ಗಂಗಾಧರ, ಜಗದೀಶ್ ಕುಂದರ್, ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ, ಇರಾ ಗ್ರಾ ಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಸಜಿಪಮೂಡ ಗ್ರಾ ಪಂ ಅಧ್ಯಕ್ಷ ಗಣಪತಿ ಭಟ್, ಕಾಮಗಾರಿ ಗುತ್ತಿಗೆದಾರ ಹಾಜಿ ಅಬ್ದುಲ್ ಖಾದರ್, ಪ್ರಮುಖರಾದ ಮಾಧವ ಮಾವೆ, ಅಹ್ಮದ್ ಬಾವಾ ಯಾಸೀನ್, ಯೂಸುಫ್ ಕರಂದಾಡಿ, ವೆಂಕಪ್ಪ ಪೂಜಾರಿ, ಅಹ್ಮದ್ ಬಾವಾ ಮೆಲ್ಕಾರ್, ಬಶೀರ್ ಮೆಲ್ಕಾರ್, ಪ್ರಶಾಂತ್ ಕುಲಾಲ್, ಇರ್ಶಾದ್ ಗುಡ್ಡೆಅಂಗಡಿ, ಅಝೀಝ್ ಬೊಳ್ಳಾಯಿ ಮೊದಲಾದವರು ಭಾಗವಹಿಸಿದ್ದರು.
ಪುರಸಭಾ ಮಾಜಿ ಸದಸ್ಯ ಹಾಜಿ ಪಿ ಮುಹಮ್ಮದ್ ರಫೀಕ್ ಸ್ವಾಗತಿಸಿ, ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ವಂದಿಸಿದರು. ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳದ ಹಲವು ಯೋಜನೆ ಅಕ್ಟೋಬರ್ ನಲ್ಲಿ ಲೋಕಾರ್ಪಣೆ: ರೈ"