ಬಂಟ್ವಾಳ ತಾಲೂಕಿನ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಭಾನುವಾರ ತಡರಾತ್ರಿ ಸುಮಾರು 5,13,000 ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಎಸ್.ಐ. ಉಮೇಶ್ ಬಂಟ್ವಾಳನ್ಯೂಸ್ ಗೆ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಪ್ರಮುಖ ಕಾರಣಿಕದ ದೇವಸ್ಥಾನ ಇದಾಗಿದ್ದು, ಇಲ್ಲಿ ಸಿಸಿ ಟಿವಿ ಕ್ಯಾಮರಾವನ್ನೂ ಅಳವಡಿಸಲಾಗಿತ್ತು. ಆದರೆ ಕಳ್ಳರು ಕ್ಯಾಮರಾದಲ್ಲಿ ತಮ್ಮ ಗುರುತುಗಳು ಹೊರಜಗತ್ತಿಗೆ ಬಾರದಂತೆ ಅದರಲ್ಲಿದ್ದ ಫೂಟೇಜ್ ಗಳನ್ನು ಹೊತ್ತೊಯ್ದಿದ್ದಾರೆ.
ಗರ್ಭಗುಡಿಯಲ್ಲಿದ್ದ ಲಕ್ಷ್ಮೀನರಸಿಂಹ ದೇವರ ಮೂರ್ತಿ ಚಿನ್ನದ ಪ್ರಭಾವಳಿ, ಹುಂಡಿಯಲ್ಲಿದ್ದ ಹಣವನ್ನು ಹಾಗೂ ದೇವರಿಗೆ ಹಾಕಿದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಹೇಗೆ ನುಗ್ಗಿದರು?
ದೇವಸ್ಥಾನದ ಮುಂಬಾಗಿಲು ಮುರಿದು ಒಳಹೊಕ್ಕ ಕಳ್ಳರು, ಮುಖ್ಯ ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿಂದ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯ ಪ್ರಭಾವಳಿಯನ್ನು ಮತ್ತು ಹುಂಡಿಯನ್ನ ತಡಕಾಡಿದ್ದಾರೆ. ಬಳಿಕ ದೇವಸ್ಥಾನದ ಸಿಸಿ ಕ್ಯಾಮರಾವನ್ನು ಹಾಳುಗೆಡವಿ ಅದರ ಫೂಟೇಜ್ ಗಳನ್ನು ಹೊತ್ತೊಯ್ದಿದ್ದಾರೆ.
ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜೆ ಕಾರ್ಯಕ್ಕೆ ತೆರಳಿದ ಸಂದರ್ಭ ಘಟನೆ ಗಮನಕ್ಕೆ ಬಂದಿದೆ. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಸ್.ಐ. ಉಮೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು, ಪರಿಶೀಲನೆ ನಡೆಸಲಾಯಿತು.
Be the first to comment on "ಕಡೇಶ್ವಾಲ್ಯ ದೇವಸ್ಥಾನದಲ್ಲಿ ಕಳವು"