ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಶ್ರೀ ಕ್ಷೇತ್ರ ಹೊಂಬುಜದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿ ಉಪಸ್ಥಿತಿಯಲ್ಲಿ ಶ್ರೀ ಚತುರ್ವಿಂಶತಿ ತೀರ್ಥಂಕರರ ಆರಾಧನೆಯು, ಡಾ. ಜೀವಂಧರ ಜೈನ್, ಮಕ್ಕಳು ಮತ್ತು ಕುಟುಂಬಿಕರು, ಶ್ರೀ ಪೂಜ್ಯ ಪಾದ ಚಿಕಿತ್ಸಾಲಯ ತೀರ್ಥಹಳ್ಳಿ, ಪ್ರಾಯೋಜಕತ್ವದಲ್ಲಿ, ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.
ಪೂರ್ವಾಹ್ನ ಮುನಿ ಶ್ರೀಗಳ ಆಹಾರ ಚರ್ಯೆಯಲ್ಲಿ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಸಾಮೂಹಿಕ ಶ್ರೀ ಚತುರ್ವಿಂಶತಿ ತೀರ್ಥಂಕರರ ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪೂಜೆಗಳನ್ನು ವಿವರವಾಗಿ ತಿಳಿಯಪಡಿಸಿದರು.
ಶ್ರೀ ಕ್ಷೇತ್ರ ಹೊಂಬುಜದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಇದೇ ಪ್ರಥಮ ಬಾರಿಗೆ ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯಕ್ಕೆ ಭೇಟಿ ನೀಡಿ ಮುನಿಶ್ರೀಗಳ ಆಶೀರ್ವಾದ ಪಡೆದರು. ಅಪರಾಹ್ನ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಹಾಗೂ ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.
ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಮ್ಮ ಮಂಗಲ ಪ್ರವಚನದಲ್ಲಿ ಜೈನ ದಿಗಂಬರ ಮುನಿಗಳ ಭವ್ಯ ಮಂಗಲ ಚಾತುರ್ಮಾಸ ಮಹೋತ್ಸವದ ಮಹತ್ವ ಮತ್ತು ಧರ್ಮ ಪ್ರಭಾವನೆಯಿಂದ ಶ್ರಾವಕ ಬಂಧುಗಳ ಪುಣ್ಯ ಲಾಭಗಳನ್ನು ವಿವರಿಸಿದರು.
ಮುನಿ ಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ದಿಗಂಬರ ಮುನಿ ಮಹಾರಾಜರುಗಳ ನಿಯಮಗಳು ಮತ್ತು ದೈನಂದಿನ ಚರ್ಯೆಗಳನ್ನು ತಿಳಿಸಿದರು.ಧರ್ಮ ಸಭೆಯಲ್ಲಿ ಶ್ರೀ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಬೀಡು ಮತ್ತು ಭಾರತೀಯ ಜೈನ್ ಮಿಲನ್ ವಲಯ 8 ರ ಕಾರ್ಯಾಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್ ಉಡುಪಿ, ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ “ಶಂಕಾ-ಸಮಾಧಾನ”ಕಾರ್ಯಕ್ರಮ ನಡೆಯಿತು.ಅನೇಕ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ ಪೂಜ್ಯ ಮುನಿ ಮಹಾರಾಜರು ಮತ್ತು ಪೂಜ್ಯ ಭಟ್ಟಾರಕ ಸ್ವಾಮೀಜಿಗಳು ಉತ್ತರಿಸಿ ಶ್ರಾವಕರ ಶಂಕೆಗಳಿಗೆ ಶಾಸ್ತ್ರಗಳ ಆಧಾರಿತ ಉತ್ತರಗಳನ್ನು ಪ್ರತಿಯೊಬ್ಬರ ಮನಮುಟ್ಟುವಂತೆ ತಿಳಿಯಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶ್ರಾವಕರೂ “ಶಂಕಾ-ಸಮಾಧಾನ”ಕಾರ್ಯಕ್ರಮದಲ್ಲಿ, ತಮ್ಮ ಪ್ರಶ್ನೆಗಳನ್ನು ಕೇಳಿ ತಮ್ಮ ಉತ್ತರ ಪಡೆದು, ಧರ್ಮದ ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್ ಸುಭಾಶ್ಚಂದ್ರ ಜೈನ್ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಪಾಣೆಮಂಗಳೂರು ಚಾತುರ್ಮಾಸ- ಶ್ರೀ ಚತುರ್ವಿಂಶತಿ ತೀರ್ಥಂಕರರ ಆರಾಧನೆ , ಮಂಗಲ ಪ್ರವಚನ"