ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಐದು ದಿನಗಳ ಕಾಲ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಆರಾಧಿಸಲ್ಪಟ್ಟ 14ನೇ ವರ್ಷದ ಶ್ರೀ ಗಣೇಶೋತ್ಸವ ಶೋಭಾಯಾತ್ರೆ ಮಂಗಳವಾರ ರಾತ್ರಿ ವೈಭವಯುತವಾಗಿ ನಡೆಯಿತು.
ಸಂಜೆ ವಿಸರ್ಜನಾ ಪೂಜೆ ಬಳಿಕ ನಡೆದ ಶ್ರೀಗಣಪತಿಯ ಆಕರ್ಷಕ ಶೋಭಾಯಾತ್ರೆ ಸಂದರ್ಭ ಮಳೆ ಸುರಿದರೂ ಲೆಕ್ಕಿಸದೆ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ಇದಕ್ಕೂ ಮೊದಲು ವೇದಿಕೆಯಲ್ಲಿ ನಾಸಿಕ್ ಬ್ಯಾಂಡ್, ಹುಲಿವೇಷ, ಶಿಲ್ಪ ಗೊಂಬೆಗಳ ವಿಶೇಷ ನೃತ್ಯ ಪ್ರದರ್ಶನಗಳು ಮನಸೆಳೆದವು.
ಬಳಿಕ ಆರಾಧನ ಸ್ಥಳದಿಂದ ಹೊರಟ ಶ್ರೀ ಗಣೇಶನ ಶೋಭಾಯಾತ್ರೆ ಜಕ್ರಿಬೆಟ್ಟು ಜಂಕ್ಷನ್ ಗೆ ತೆರಳಿ ವಾಪಾಸ್ ಬೈಪಾಸ್ ರಸ್ತೆಯ ರಾಜಾಮಾರ್ಗದಲ್ಲಿ ಸಂಚರಿಸಿ ತುಂಬೆ ಜಂಕ್ಷನ್, ಅಜೆಕಲ, ಭಂಡಾರಿಬೆಟ್ಟುವಿನ ನೆರೆವಿಮೋಚನಾ ರಸ್ತೆಯ ಮೂಲಕ ಬಂಟ್ವಾಳ ಪೇಟೆ, ತ್ಯಾಗರಾಜ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಶೋಭಾಯಾತ್ರೆಯಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ, ಟ್ಯಾಬ್ಲೊಗಳು, ಸ್ತಬ್ದಚಿತ್ರಗಳು, ಹುಲಿವೇಷ, ಗೊಂಬೆಕುಣಿತಗಳು ವಿಜೃಂಭಿಸಿದವು.
ಐದು ದಿನಗಳ ಕಾಲ ನಡೆದ ಶ್ರೀ ಗಣೇಶೋತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈದವು.
ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧಾರ್ಮಿಕ ನೇತಾರರ, ಗಣ್ಯರ, ಶಾಸಕರು, ಇನ್ನಿತರ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯಲ್ಲಿ ಧಾರ್ಮಿಕ ಸಭೆಗಳು ನಡೆದವು.
ಐದು ದಿನಗಳ ಕಾಲ ನಿರಂತರ ಸಾರ್ವಜನಿಕ ಅನ್ನಸಂತರ್ಪಪಣೆ ಚಹಾ, ಉಪಾಹಾರ ವ್ಯವಸ್ಥೆ ಯನ್ನು ಕಲ್ಲಿಸಲಾಗಿತ್ತು.
ಸಮಿತಿಯ ಗೌರವಾಧ್ಯಕ್ಷ ಸಚಿವ ರಮಾನಾಥ ರೈ ಮಾರ್ಗದರ್ಶನದಲ್ಲಿ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸದಾಶಿವ ಬಂಗೇರ, ಪಿಯೂಸ್ ಎಲ್. ರೊಡ್ರಿಗಸ್, ರಾಜೀವ ಶೆಟ್ಟಿ ಎಡ್ತೂರು, ಜನಾರ್ದನ ಚಂಡ್ತಿಮಾರ್, ಪ್ರವೀಣ ಕಿಣಿ, ಬೇಬಿಕುಂದರ್, ದಿನೇಶ್ ಶೆಣೈ ಕಲ್ಲಡ್ಕ, ಬಿ.ಪ್ರವೀಣ್, ಜಗನ್ನಾಥ ತುಂಬೆ, ವೆಂಕಪ್ಪ ಪೂಜಾರಿ ಬಂಟ್ವಾಳ, ಮಾಧವ ಮಾವೆ, ಚಂದ್ರಹಾಸ ಕರ್ಕೇರ ಸಹಿತ ಜಿಪಂ, ತಾಪಂ, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು. ಸುದರ್ಶನ ಬಲ್ಲಾಳ್ ನಾವೂರ ಅವರು ಪೌರೋಹಿತ್ಯದ ವಿಧಿ ವಿಧಾನ ನೆರವೇರಿಸಿದರು.
Be the first to comment on "ಜಕ್ರಿಬೆಟ್ಟು ಗಣೇಶೋತ್ಸವ ವೈಭವದ ಶೋಭಾಯಾತ್ರೆ"