ಜಗತ್ತು ಬದಲಾಗುತ್ತಿದೆ. ಅದರಂತೆ ವ್ಯವಸ್ಥೆಯೂ ಬದಲಾಗುತ್ತದೆ. ಇಂದು ಶಿಕ್ಷಣವು ಕೇವಲ ಪಠ್ಯಕೇಂದ್ರಿತವಾಗಿದ್ದರೆ ಸಾಲದು. ವೈಯಕ್ತಿಕ ವಿಕಸನಕ್ಕೆ ಪೂರಕವಾದ ಇತರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು. ಅದು ಬದುಕನ್ನು ಎದುರಿಸುವ ನಿಜವಾದ ಶಿಕ್ಷಣ ಎಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಹಾಯಕ ನಿರ್ದೇಶಕ ಗುರುದತ್ ಬಂಟ್ವಾಳ್‌ಕಾರ್ ಹೇಳಿದರು.
ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಫರ್ಧೆ ರಿಥಮ್ ಎಸ್.ವಿ.ಎಸ್. ಉದ್ಘಾಟಿಸಿ ಮಾತನಾಡಿದರು. ಯಾವುದೇ ಸ್ಫರ್ಧೆಗಳಿರಲಿ ಅದರಲ್ಲಿ ಕ್ರೀಯಾಶೀಲವಾಗಿ ಭಾಗವಹಿಸಬೇಕು. ಅದು ನಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡಿ ಕಾಲೇಜು ಮತ್ತು ವಿದ್ಯಾರ್ಥಿಗಳ ಬೆಳವಣಿಗೆ ದೃಷ್ಟಿಯಿಂದ ಇಂಥ ಸ್ಪರ್ಧೆಗಳು ಸಹಕಾರಿ. ಸೋಲು-ಗೆಲುವನ್ನು ಪರಿಭಾವಿಸದೆ ಸಕಾರಾತ್ಮಕ ದೃಷ್ಟಿಕೋನದಿಂದ ಎಲ್ಲರೂ ಭಾಗವಹಿಸಬೇಕು ಎಂದರು. ಎಸ್.ವಿ.ಎಸ್ ಕಾಲೇಜಿನ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣ್ಯೆ ಅಧ್ಯಕ್ಷತೆ ವಹಿಸಿದ್ದರು.
ರಿಥಮ್ ಎಸ್.ವಿ.ಎಸ್. ಸಂಯೋಜಕಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಪ್ರೇಮಲತಾ ಪೈ ಸ್ವಾಗತಿಸಿದರು. ಕಾಲೇಜಿನ ಐಕ್ಯುಎಸಿ ಸಂಯೋಜಕ ಮತ್ತು ರಿಥಮ್ ಎಸ್. ವಿ.ಎಸ್. ಸಹಸಂಯೋಜಕ ಡಾ. ಟಿ.ಕೆ.ರವೀಂದ್ರನ್ ವಂದಿಸಿದರು. ಉಪನ್ಯಾಸಕಿ ವಿನಂತಿ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವೈಯಕ್ತಿಕ ವಿಕಸನದ ಕಡೆಗೆ ಚಿತ್ತ ಹರಿಸಿ: ಗುರುದತ್ತ್ ಬಂಟ್ವಾಳ್‌ಕಾರ್"