ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ರೈಗಳು ಪೈಪೋಟಿ ನೀಡುವುದಿದ್ದರೆ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಬೇಕೇ ಹೊರತು, ದೇವಸ್ಥಾನ ಕೊಡುವ ಅನುದಾನ ಸ್ಥಗಿತಗೊಳಿಸುವ ಸಣ್ಣತನದ ಕಾರ್ಯಕ್ಕೆ ಇಳಿಯಬಾರದು, ಇದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದರ್ಭ ಅವರಿಗೆ ತೊಂದರೆಯಾದರೆ, ಭಾರತೀಯ ಜನತಾ ಪಾರ್ಟಿ ಅವರಿಗೆ ಸಹಕಾರ ನೀಡುತ್ತದೆ. ಒಂದು ವೇಳೆ ದೇವಸ್ಥಾನದ ಅನುದಾನವನ್ನು ಮಕ್ಕಳಿಗೋಸ್ಕರ ನೀಡುವುದಿದ್ದರೆ ಸಂಪೂರ್ಣ ಬೆಂಬಲಿಸುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ ಜೊತೆ ಹೋರಾಡುವುದಿದ್ದರೆ ವೈಚಾರಿಕವಾಗಿ ಮಾಡಿ. ಭಕ್ತರು ಹುಂಡಿಗೆ ಹಾಕಿದ ಹಣವನ್ನು ಶಾಲೆಗೆ ಒದಗಿಸುವುದನ್ನು ನಿಲ್ಲಿಸುವ ಮೂಲಕ ಸಣ್ಣತನ ತೋರಿಸಬೇಡಿ ಎಂದು ಸಚಿವರಿಗೆ ಸಲಹೆ ನೀಡಿದರು.
ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ:
ಕಲ್ಲಡ್ಕ,ಪುಣಚ ಶಾಲೆಗಳಲ್ಲಿ ಯೋಗ, ಸಂಸ್ಕ್ರತ, ಸಂಸ್ಕಾರವನ್ನು ಕಲಿಸಿಕೊಡುವುದರ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ದೇವಸ್ಥಾನದ ಹಣ ಪೋಲಾಗಬಾರೆದಂಬ ಉದ್ದೇಶದಿಂದ ದಿ.ಡಾ.ವಿ.ಎಸ್.ಆಚಾರ್ಯರು ಮುಜರಾಯಿ ಸಚಿವರಾಗಿದ್ದಾಗ ದೇವಸ್ಥಾನದ ಹುಂಡಿ ಹಣ ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗವಾಗಬೇಕೆಂದು ಕಾನೂನು ರೂಪಿಸಲಾಗಿತ್ತು ಎಂದರು.
ಶಾಲೆ ನಡೆಸುವುದು ಕಷ್ಟದ ಕೆಲಸ, ಕನ್ನಡ ಶಾಲೆಗಳ ಪೈಕಿ, ಶ್ರೀರಾಮ ವಿದ್ಯಾಕೇಂದ್ರ ರಾಜ್ಯದಲ್ಲೇ ಗಮನ ಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಾ ಗರಿಷ್ಠ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ಪೈಕಿ ಕಲ್ಲಡ್ಕ ಶಾಲೆ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ರಾಜಕೀಯ ನಡೆಸುವ ಮೂಲಕ ಶಾಲೆ ಮಕ್ಕಳಿಗೆ ಒದಗಿಸುವ ಅನ್ನವನ್ನು ಕಸಿಯುವ ಕೆಲಸ ಮಾಡಲಾಗಿದೆ. ಇದು ಸಚಿವರಿಗೆ ಶೋಭೆ ತರುವ ವಿಚಾರವಲ್ಲ ಎಂದು ನಳಿನ್ ಹೇಳಿದರು.
ಜನತಾ ಜನಾರ್ದನನ ಬಳಿ ಭಿಕ್ಷೆ:
ಇನ್ನು ಶಾಲೆಗೆ ಹಣ ಕೊಡಿ ಎಂದು ಧಾರ್ಮಿಕ ದತ್ತಿ ಇಲಾಖೆಯನ್ನು ಕೇಳಬೇಡಿ ಎಂದು ಡಾ. ಭಟ್ ಅವರಲ್ಲಿ ಮನವಿ ಮಾಡಿದ್ದೇವೆ. ಏನಿದ್ದರೂ ಜನತಾ ಜನಾರ್ಧನನ ಬಳಿ ಹೋಗಿ ಭಿಕ್ಷೆ ಕೇಳುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಉರ್ದು ಶಾಲೆಗೂ ಅನುದಾನ:
ಕಟೀಲು ದೇವಳದಿಂದಲೂ ನಾನಾ ಶಾಲೆಗಳಿಗೆ ಅನುದಾನ ಹೋಗುತ್ತದೆ. ಅದರಲ್ಲಿ ಉರ್ದು ಶಾಲೆಯೂ ಸೇರಿದೆ. ಎಂದಿಗೂ ದೇವಸ್ಥಾನದ ಹಣ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದೊರಕುವುದಾದರೆ ಅದಕ್ಕೆ ಕಲ್ಲು ಹಾಕುವ ಕೆಲಸವನ್ನು ನಾವು ಮಾಡಿಲ್ಲ ಎಂದು ನಳಿನ್ ಹೇಳಿದರು.
ಎಲ್ಲವೂ ಹೊರಬರಲಿ:
ಶರತ್ ಮಡಿವಾಳ ಹತ್ಯೆ ಹಿಂದಿನ ಶಕ್ತಿಗಳ ಪಾತ್ರಗಳ ಕುರಿತು ತನಿಖೆಯಾಗಲಿ. ನಿರಪರಾಗಳನ್ನು ಪೊಲೀಸರು ಬಂಧಿಸುವುದಿಲ್ಲ ಎಂಬ ವಿಶ್ವಾಸವಿದೆ. ಹತ್ಯೆ ಆರೋಪಿಗಳನ್ನು ಬಂಸಿದ ಜಿಲ್ಲಾ ಪೊಲೀಸರಿಗೆ ಅಭಿನಂದಿಸುತ್ತೇನೆ ಎಂದ ನಳಿನ್, ಹತ್ಯೆಗೆ ಸಂಬಂತ ಎಲ್ಲ ಮಾಹಿತಿಗಳೂ ಹೊರಬರಲಿ ಎಂದು ಆಶಿಸಿದರು.
ಸರ್ವೀಸ್ ರಸ್ತೆ:
ಒಟ್ಟು ಮೂರು ಸರ್ವೀಸ್ ರಸ್ತೆಗಳ ಅಭಿವೃದ್ಧಿಗೆ 19 ಕೋಟಿ ರೂ ಅನುದಾನ ಮಂಜೂರುಗೊಂಡಿದೆ. ಅದರಲ್ಲಿ ಬಿ.ಸಿ.ರೋಡ್ ಸರ್ವೀಸ್ ರಸ್ತೆಯೂ ಒಳಗೊಂಡಿದೆ. ಕೆಲ ತಾಂತ್ರಿಕ ಕಾರಣಗಳಿಂದ ರಸ್ತೆ ದುರಸ್ತಿ ಕೆಲಸಕ್ಕೆ ಹಿನ್ನಡೆಯಾಗಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ನಡೆಯಲಿದೆ ಎಂದು ನಳಿನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ. ಭಟ್, ದೇವದಾಸ ಶೆಟ್ಟಿ, ಜಿ.ಆನಂದ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ಶಾಲೆಗೆ ಅನುದಾನ ಸ್ಥಗಿತ ವಿಚಾರ ಸಚಿವರಿಗೆ ಶೋಭೆಯಲ್ಲ: ನಳಿನ್ ಕುಮಾರ್ ಕಟೀಲ್"