ದಾಳಿ ನಡೆದು ಒಂದು ತಿಂಗಳು ಹನ್ನೊಂದು ದಿನಗಳ ಬಳಿಕ ಆರ್. ಎಸ್. ಎಸ್. ಕಾರ್ಯಕರ್ತ ಶರತ್ ಮಡಿವಾಳ ನನ್ನು ಮಾರಣಾಂತಿಕವಾಗಿ ಗಾಯಗೊಳಿಸಿ ಅವರ ಸಾವಿಗೆ ಕಾರಣರಾದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಅಬ್ದುಲ್ ಶಾಫಿ (36) ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಓರ್ವ ಆರೋಪಿಯಾದರೆ, ಮತ್ತೋರ್ವ ಚಾಮರಾಜನಗರ ಪಿಎಫ್ಐ ಸಂಘಟನೆ ಅಧ್ಯಕ್ಷ ಖಲೀಲುಲ್ಲಾ (30) ಎಂದು ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ.
ಶರತ್ ಮಡಿವಾಳ ಅವರ ಕೊಲೆ ಪ್ರಕರಣದ ತನಿಖೆ ಸಲುವಾಗಿ ಐಜಿಪಿ ನಿರ್ದೇಶನದಂತೆ ಏಳು ಮಂದಿ ಅಧಿಕಾರಿಗಳ ಎಸಿಪಿ ವೆಲಂಟೈನ್ ಡಿಸೋಜ, ಡಿಸಿಐಬಿ ಇನ್ಸ್ ಪೆಕ್ಟರ್ ಸುನಿಲ್ ನಾಯಕ್, ಪುತ್ತೂರು ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಬೆಳ್ತಂಗಡಿ ಇನ್ಸ್ ಪೆಕ್ಟರ್ ರವಿ ಮತ್ತು ಡಿಸಿಐಬಿ ಇನ್ಸ್ ಪೆಕ್ಟರ್ ಅಮಾನುಲ್ಲಾ ಅವರ ತಂಡವನ್ನು ರಚಿಲಾಗಿತ್ತು. ಎಂದು ಹೇಳಿದ ಹರಿಶೇಖರನ್, ಈ ತಂಡ ಪ್ರಕರಣದ ತನಿಖೆಯ ಭಾಗವಾಗಿ ಸುಮಾರು 30 ಜನರನ್ನು ವಿಚಾರಣೆಗೆ ತೆಗೆದುಕೊಂಡು ತೀವ್ರ ತನಿಖೆ ನಡೆಸಿದೆ. ತನಿಖಾ ತಂಡವು ಮಹಾರಾಷ್ಟ್ರ, ಕೇರಳ, ಬೆಂಗಳೂರು, ಶಿವಮೊಗ್ಗ, ಕಾರವಾರ ಮೊದಲಾದ ಕಡೆ ಆರೋಪಿಗಳ ಸುಳಿವಿನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇನ್ನೂ ನಾಲ್ಕು ಅಥವಾ ಐವರು ಈ ಪ್ರಕರಣದಲ್ಲಿ ಇರುವ ಕುರಿತು ಅನುಮಾನಗಳಿವೆ. ಅವರನ್ನು ಶೀಘ್ರ ಪತ್ತೆಹಚ್ಚಲಾಗುವುದು. ಹತ್ಯೆ ನಡೆಸಿದವರಿಗೆ ವಾಹನ ಒದಗಿಸಿ, ಅವರು ತಪ್ಪಿಸಿಕೊಳ್ಳಲು ಸಹಕರಿಸಿದ್ದು ಯಾರು ಎಂಬ ಕುರಿತು ತನಿಖೆಯಿಂದ ಗೊತ್ತಾಗಲಿದೆ. ಸದ್ಯಕ್ಕೆ ಹತ್ಯೆಗೆ ಏನು ಕಾರಣ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಅಬ್ದುಲ್ ಶಾಫಿಯನ್ನು ಬಂಟ್ವಾಳ ತಾಲೂಕಿನಲ್ಲಿ ಹಾಗೂ ಖಲೀಲುಲ್ಲ ನನ್ನು ಚಾಮರಾಜನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ, ಮುಂದಿನ ವಿಚಾರಣೆಗಾಗಿ ಪೊಲೀಸ್ ಕಷ್ಟಡಿಗೆ ಪಡೆಯಲಾಗುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಸುಳಿವು ದೊರೆತಿದ್ದು, ಅವರನ್ನು ಶೀಘ್ರ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.
ಜುಲೈ 4ರಂದು ರಾತ್ರಿ ಸುಮಾರ 9.30ಕ್ಕೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಅಂಗಡಿಯಲ್ಲಿದ್ದ ಶರತ್ ಮಡಿವಾಳ ಅವರನ್ನು ಅಂಗಡಿಯೊಳಗೆ ನುಗ್ಗಿ ಮಾರಕಾಯುಧಗಳಿಂದ ಕಡಿದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಜುಲೈ 7ರಂದು ಆಸ್ಪತ್ರಯಲ್ಲಿ ಶರತ್ ಮೃತಪಟ್ಟಿದ್ದು, ಕಲಂ 302ರಂತೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಬೇಕು ಎಂದು ಆಗ್ರಹಿಸಿ ಹಿಂದುಪರ ಸಂಘಟನೆಗಳು ತೀವ್ರ ಪ್ರತಿಭಟನೆಯನ್ನು ನಡೆಸಿದ್ದವು.
Be the first to comment on "ಶರತ್ ಹತ್ಯೆ – ಇಬ್ಬರ ಬಂಧಿಸಿದ ಪೊಲೀಸರು"