ಧರ್ಮ ಪ್ರಜ್ಞೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಕಾಣಿಸಿಕೊಳ್ಳುತ್ತಿದೆ. ಅಹಂಕಾರ ಮತ್ತು ಬೇಡಿಕೆ ಕಡಿಮೆಯಾದಾಗ ಶಾಂತಿ ನೆಲೆಸಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಶ್ರೀಗಳ ಜನ್ಮದಿನೋತ್ಸವದ ಗ್ರಾಮೋತ್ಸವ ಗುರುವಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹೂವಿನ ಹಡಗಲಿ ಮಲ್ಲನಕೇರಿ ವಿರಕ್ತ ಮಠದ ಶ್ರೀ ಮ. ನಿ. ಪ್ರ. ಅಭಿನವ ಚೆನ್ನಬಸವ ಸ್ವಾಮಿಜಿ ಆಶೀರ್ಚವ ನೀಡಿ ನೈಜ ಭಕ್ತಿ ಶ್ರದ್ಧೆಯನ್ನು ಜನರು ಮೈಗೂಡಿಸಿಕೊಂಡಾಗ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಿದರು.
ಹೂವಿನ ಹಡಗಲಿ ಮಠದ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನದ ಶ್ರೀ ಡಾ. ಹರಿಶಾಂತ ವೀರ ಸ್ವಾಮಿಜಿ ಆಶೀರ್ವಚನದರು.
ಸಾಧ್ವೀ ಶ್ರೀ ಮಾತಾನಂದಮಯೀ ನೇತೃತ್ವದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್ ದಂಪತಿಗಳಿಂದ ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಪಾದ ಪೂಜೆ ನಡೆಯಿತು. ಕರ್ನಾಟಕ ರಾಜ್ಯ ಜೋಗಿ ಸಮಾಜದ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಶ್ರೀ ಗಣಪತಿ ಹವನ, ಆರಾಧ್ಯ ದೇವರಿಗೆ ವಿಶೇಷ ಪೂಜೆ, ವನಮಹೋತ್ಸವ, ನವಧಾನ್ಯದಿಂದ ಸ್ವಾಮೀಜಿಯವರ ತುಲಾಭಾರ ಮತ್ತು ಸ್ವಾಮೀಜಿಯವರ ಮಾತೃಶ್ರೀ ಅಂತಕ್ಕೆಯವರಿಂದ ಉಯ್ಯಾಲೆ ಸೇವೆ, ಭಕ್ತರಿಂದ, ಗುರುಬಂಧುಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಬಾಲವಿಕಾಸ ಕೇಂದ್ರದ ಪುಟಾಣಿಗಳಿಂದ ಗುರು ನಮನ ಕಾರ್ಯಕ್ರಮ ನಡೆಯಿತು.
ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಮುಂಬೈ, ಜನ್ಮದಿನೋತ್ಸವ ಸಮಿತಿ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಎ ಅಶೋಕ್ ಕುಮಾರ್ ಬಿಜೈ, ಮಂಗಳೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಬಿ. ಕೆ. ಚಂದ್ರಶೇಖರ್, ಲಿಂಗಪ್ಪ ಗೌಡ ಪನೆಯಡ್ಕ, ಸ್ವಾಗತ ಸಮಿತಿಯ ವಾಸುದೇವ ಆರ್. ಕೊಟ್ಟಾರಿ, ದಾಮೋದರ ಶೆಟ್ಟಿ ಪಟ್ಲಗುತ್ತು, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ. ಪಿ. ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ವೇದಿಕೆ ಸಮಿತಿ ಸಂಚಾಲಕ ಸಂತೋಷ ಭಂಡಾರಿ, ಹಿರಿಯರಾದ ಮಲಾರು ಜಯರಾಮ ರೈ, ಗುರುದೇವಾ ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ವಿವಿಧ ಸೇವಾ ಬಳಗಗಳ ಅಧ್ಯಕ್ಷರು, ಗ್ರಾಮ ವಿಕಾಸ ಯೋಜನೆಯ ಮಂಡಲ ಹಾಗೂ ಘಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಧರ್ಮ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ:
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ನಡೆದ ಗ್ರಾಮೋತ್ಸವದ ಸಭಾ ಕಾರ್ಯಕ್ರಮದಲ್ಲಿ ಗ್ರಾಮೋಭ್ಯುದಯ ಕೃತಿ ಬಿಡುಗಡೆ ಮಾಡಿದ ಬಳಿಕ ಆಶೀರ್ವಚನ ನೀಡಿದ ಶ್ರೀ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಧರ್ಮ ಸಂಸ್ಕೃತಿಯ ಮೂಲಕ ಪ್ರತಿಯೊಬ್ಬರಲ್ಲಿ ಪ್ರೀತಿಯ ಭಾವ ತುಂಬುವ ಕಾರ್ಯವಾಗಬೇಕು. ಧರ್ಮದ ಸಂರಕ್ಷಣೆ ನಮ್ಮೆಲ್ಲರ ಕೈಯಲ್ಲಿದ್ದು, ಅದನ್ನು ಉಳಿಸುವ ಕಾರ್ಯವಾಗಬೇಕು. ಪ್ರಜ್ಞಾವಂತ ಪ್ರಜೆಗಳ ನಿರ್ಮಾಣವಾದಾಗ ರಾಷ್ಟ್ರೋತ್ಥಾನವಾಗುತ್ತದೆ. ಯುವ ಸಮಾಜದಿಂದ ಭ್ರಷ್ಟಾಚಾರ ಹಾಗೂ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಭಾರತದ ಆಂತರ್ಯ ಆಧ್ಯಾತ್ಮವಾಗಿದ್ದು, ಸಾಮರಸ್ಯ ಉಳಿಯಲು ನಮ್ಮತನ ವಿರಬೇಕು. ರಾಷ್ಟ್ರಕ್ಕೆ ತೊಂದರೆಯಾಗುವ ಸಮಯ ಒಗ್ಗಟ್ಟಿನಿಂದ ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಂತರ ಪಾತ್ರ ಮಹತ್ವದ್ದು. ಆಯುಧಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಇರುವುದಿಲ್ಲ. ಆಧ್ಯಾತ್ಮದಿಂದ ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಬಹುದು. ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ಕಾಗ ಆದರ್ಶ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಸೇವಾ ಮನೋಭಾವದ ಭಕ್ತರ ಮೂಲಕ ಮಹಾತ್ಕಾರ್ಯವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಕ್ಷೇತ್ರದ ಜತೆಗೆ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಸಮಸ್ಯೆಗಳು ಬಂದಾಗ ನಿವಾರಣೆ ಮಾಡಿ ಸಮಾಜವನ್ನು ಉಳಿಸುವಲ್ಲಿ ಗುರುಪರಂಪರೆಗಳ ಪಾತ್ರ ಮಹತ್ವದ್ದು. ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗುರು ದಿಗ್ದರ್ಶನ ಬೇಕು. ಗುರು ಪರಂಪರೆ ದೇಶವನ್ನು ಉಳಿಸಿದೆ. ಭಾರತೀಯ ಸಂಸ್ಕೃತಿಯ ರಾಜಪೀಠಕ್ಕಿಂತ ಗುರುಪೀಠ ಶ್ರೇಷ್ಠ. ಸಜ್ಜನ ಶಕ್ತಿ ಮೌನವಾದಾಗ ದುರ್ಜನ ಶಕ್ತಿ ಎದ್ದು ನಿಲ್ಲುತ್ತದೆ ಎಂದು ಹೇಳಿದರು.
ಕುಂಡಾಜೆ, ವರ್ಕಾಡಿ, ಕಬ್ಯಾಡಿ ಘಟ ಸಮಿತಿಗಳಿಗೆ ಆದರ್ಶ ಘಟ ಸಮಿತಿ ಪ್ರಶಸ್ತಿ ನೀಡಲಾಯಿತು. ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗರೋಡಿ ಉತ್ತಮ ಕಾರ್ಯವೈಕರಿ ಬಹುಮಾನ ಪಡೆದುಕೊಂಡರು. ವರ್ಕಾಡಿ ಮಮತ ಲಕ್ಷ್ಮಿ ಉತ್ತಮ ಸೇವಾಧೀಕ್ಷೆ ಬಹುಮಾನ ಪಡೆದರು. ಬಂಟ್ವಾಳ ತಾಲೂಕು ಸದಾಶಿವ ಅಳಿಕೆ ಅವರಿಗೆ ತಾಲೂಕು ಮಟ್ಟದ ಉತ್ತಮ ವಿಸ್ತರಣಾಧಿಕಾರಿಯಾಗಿ ಬಹುಮಾನ ವಿತರಿಸಲಾಯಿತು.
ಗ್ರಾಮೋತ್ಸವದ ಅಂಗವಾಗಿ ವಿದ್ಯಾಬ್ಯಾಸ ಮುಂದುವರಿಕೆಗೆ ೨೦೩ ವಿದ್ಯಾರ್ಥಿಗಳಿಗೆ ೪.೮೩ಲಕ್ಷ ರೂ., ಪ್ರತಿಭಾ ಪುರಸ್ಕಾರ ೧೮ ಮಕ್ಕಳಿಗೆ ೨೯.೫ಸಾವಿರ ರೂ., ವೈದ್ಯಕೀಯ ಶುಶ್ರೋಷೆಗೆ ೧೨೫ ಜನರಿಗೆ ೩.೯೭ಲಕ್ಷ ರೂ., ಸಂಘ – ಸಂಸ್ಥೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ೩೫ ಕೇಂದ್ರಗಳಿಗೆ ೫೮೯೧೫೦ರೂ., ನವನಿಕೇತನ – ಮನೆ ರಿಪೇರಿ – ಶೌಚಾಲಯ ನಿರ್ಮಾಣಕ್ಕೆ ೨೧ ಫಲಾಪೇಕ್ಷಿತರಿಗೆ ೪೨೩೧೫೦ರೂ., ಮಂಗಳ ಕಾರ್ಯಗಳಿಗೆ ೨೩ ಫಲಾಪೇಕ್ಷಿತರಿಗೆ ೬೯ ಸಾವಿರ ರೂ. ಸಹಾಯ ಹಸ್ತ ವಿತರಿಸಲಾಯಿತು.
ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಂಗಳೂರು ಅಸಿಸ್ಟೆಂಟ್ ಕಮೀಶನರ್ ಎ. ಸಿ. ರೇಣುಕಾಪ್ರಸಾದ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಮುಂಬಯಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ಚಂದ್ರಹಾಸ ಎಂ. ರೈ ಬೋಳ್ನಾಡುಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕ ಸದಾಶಿವ ಅಳಿಕೆ ವರದಿ ಮಂಡಿಸಿದರು. ನವೀನ್ ಶೆಟ್ಟಿ ಮಂಗಳೂರು, ಸುರೇಶ್ ಶೆಟ್ಟಿ ಮೊಗರೊಡಿ, ಯಶೋಧರ ಸಾಲ್ಯಾನ್ ಬೆಳ್ತಂಗಡಿ ವಿವಿಧ ಪಟ್ಟಿ ಓದಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಎ. ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಪದ್ಮನಾಭ ಒಡಿಯೂರು ಸಹಕರಿಸಿದರು.
Be the first to comment on "ಧಾರ್ಮಿಕ ಪ್ರಜ್ಞೆಯ ಕೊರತೆಯಿಂದಲೇ ಸಮಾಜದಲ್ಲಿ ಅಶಾಂತಿ: ಒಡಿಯೂರು ಶ್ರೀಗಳು"