ಹಲವಾರು ದಿನಗಳಿಂದ ಇರಿಯುವುದು, ಕಡಿಯುವುದು, ಕಲ್ಲೆಸೆಯುವುದು, ಸಾಯುವಂತೆ ಹೊಡೆಯುವುದು ಬಳಿಕ ಕೊಲ್ಲುವುದು… ಹೀಗೆ ಇಂಥ ಶಬ್ದಗಳೇ ಬಂಟ್ವಾಳ ತಾಲೂಕಿನಿಂದ ಕೇಳಿಬರುತ್ತಿವೆ. ಶನಿವಾರವೂ ಬಿ.ಸಿ.ರೋಡಿನಿಂದ ಅಂಥದ್ದೇ ಸುದ್ದಿ ಇಡೀ ದಿನ ಆತಂಕ ಮೂಡಿಸಿತು.
ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರ ಪಾರ್ಥಿವ ಶರೀರ ಮಂಗಳೂರಿನಿಂದ ಬಿ.ಸಿ.ರೋಡಿಗೆ ಬರುವವರೆಗೂ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಆದರೆ ಬಿ.ಸಿ.ರೋಡಿಗೆ ಬಂದ ತಕ್ಷಣ ಅಹಿತಕರ ಘಟನೆಗಳು ನಡೆದವು. ನೋಡನೋಡುತ್ತಿದ್ದಂತೆ ಬಿ.ಸಿ.ರೋಡ್ ಬದಲಾಯಿತು. ಆಸ್ಪತ್ರೆಯಲ್ಲಿದ್ದವರು, ಬೀದಿಯಲ್ಲಿದ್ದವರು, ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದವರು ತೊಂದರೆಗೆ ಒಳಗಾದರು. ಒಂದು ಕಡೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಮತ್ತೊಂದು ಕಡೆ ಸಮಸ್ಯೆ ತಲೆದೋರಿತು. ಹೀಗೆ ಕಲ್ಲೆಸೆತದಂಥ ಘಟನೆಗಳು ನಡೆದು ಸ್ವಲ್ಪ ಹೊತ್ತಿನ ಬಳಿಕ ಇಡೀ ಬಿ.ಸಿ.ರೋಡನ್ನು ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಂಡರು.
ಆದರೆ ಅಷ್ಟು ಹೊತ್ತಿಗೆ ಜನಸಾಮಾನ್ಯರು ದಿಕ್ಕಾಪಾಲಾಗಿ ಹೋದರು. ಕೆಲವರು ಹೋಟೆಲ್, ಅಂಗಡಿಯ ಒಳಗೆ ಬಚ್ಚಿಟ್ಟುಕೊಂಡರು. ಇನ್ನು ಕೆಲವರು ಏನು ಮಾಡುವುದು ಎಂದು ತಿಳಿಯದೆ ಬೀದಿಯಲ್ಲೇ ನಿಂತರು. ಕೆಲವರು ಅವಸರದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ಓಡಿಸತೊಡಗಿದರು. ಒಂದೆಡೆ ಅಂಗಡಿಗಳ ಶಟರ್ ಎಳೆಯಲಾಗಿದೆ. ಅಂಗಡಿಯ ಎದುರು ನಿಂತರೂ ಕಷ್ಟ. ಅದೇ ಹೊತ್ತಿನಲ್ಲಿ ಗಲಭೆ ಮಾಡಿಸುವವರ ಸಂಖ್ಯೆ ಕಡಿಮೆಯಾಯಿತು. ಪೊಲೀಸರ ಸಂಖ್ಯೆ ಜಾಸ್ತಿಯಾಯಿತು.
ಅದಾದ ಬಳಿಕ ಸಿಕ್ಕಸಿಕ್ಕವರನ್ನೆಲ್ಲ ಪೊಲೀಸರು ಅಟ್ಟಿಸಿಕೊಂಡು ಹೋಗಲು ಆರಂಭಿಸಿದರು. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಗದರಿಸಿ, ಹೊರಟು ಹೋಗಿ ಎಂದು ಆಜ್ಞಾಪಿಸಿದರು. ಅವರಿಗೆ ಶಾಂತಿ ಬೇಕಿತ್ತು. ಆದರೆ ಅವರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ಶಾಂತಿ ಬೇಕಿತ್ತು. ಅವರಾದರೂ ಎಲ್ಲಿಗೆ ಹೋಗಬೇಕು? ಇದು ಅಶಾಂತಿ ಸೃಷ್ಟಿಸುವವರಲ್ಲೂ ಉತ್ತರ ದೊರಕದು.
ಕೆಲವರಿಗೆ ಸುದ್ದಿ ಹರಡಿಸುವ ಧಾವಂತ. ವಾಟ್ಸಾಪುಗಳು ಹಾಗೂ ಉಚಿತ ಇಂಟರ್ ನೆಟ್ ಪ್ಯಾಕೇಜುಗಳು ಧಾರಾಳ ಬಳಕೆಯಾದವು. ಮತ್ತಷ್ಟು ಕಿಚ್ಚು ಹರಡಿಸಿತೋ ಏನೋ?
ಸಂಜೆಯಾಗುತ್ತಿದ್ದಂತೆ ನಡೆದುಕೊಂಡು ಹೋಗುವವರಿಗೂ ಬಿ.ಸಿ.ರೋಡ್ ಭೀತಿ ಸೃಷ್ಟಿಸಿತು. ಪೊಲೀಸರು ಕಂಡಕಂಡವರನ್ನೆಲ್ಲ ವಿಚಾರಿಸತೊಡಗಿದ್ದರು. ಕಚೇರಿಯಿಂದ ಮರಳುವವರು, ಮಧ್ಯಾಹ್ನ ಶಾಲೆಯಿಂದ ಮರಳುವವರು, ಕಾಲೇಜುಗಳಿಂದ ಮರಳುವವರು, ದೂರದ ಊರುಗಳಿಗೆ ಅನಿವಾರ್ಯವಾಗಿ ಹೋಗುವವರು, ಆಸ್ಪತ್ರೆಗೆಂದು ತೆರಳುವವರು, ಔಷಧಿಗೆಂದು ಅಂಗಡಿ ಹುಡುಕಿಕೊಂಡು ಪೇಟೆಗೆ ಬರುವವರು ಹೀಗೆ ತೊಂದರೆಗೆ ಒಳಗಾದವರು ಜನಸಾಮಾನ್ಯರು.
ಇದರ ಹಿನ್ನೆಲೆ ಏನೆಂದು ಕೇಳಿದರೆ ಒಬ್ಬರು ಇನ್ನೊಬ್ಬರ ಮೇಲೆ ಬೆರಳು ತೋರಿಸುತ್ತಾರೆ. ಸಮಸ್ಯೆ ಜೀವಂತವಾಗಿಯೇ ಉಳಿಯುತ್ತಿದೆ. ಸೆ.144ರನ್ವಯ ನಿಷೇಧಾಜ್ಞೆ ಹೊರಡಿಸಿ 43 ದಿನಗಳು ಕಳೆದುಹೋದವು. ಇದರ ಅವಧಿಯಲ್ಲಿ ಎರಡು ಶಾಂತಿಸಭೆಗಳು ನಡೆದವು. ಎರಡು ಹತ್ಯೆಗಳೂ ನಡೆದವು. ಕಲ್ಲೆಸೆತವೂ ಆಯಿತು. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುವ ವಿಚಾರ ಸಾಮಾನ್ಯವಾಗಿ ಹೋದವು. ಜನಸಾಮಾನ್ಯರಿಗೆ ನಿಮ್ಮ ಆರೋಪ, ಪ್ರತ್ಯಾರೋಪ ಬೇಕಾಗಿಲ್ಲ. ತಮ್ಮ ದೈನಂದಿನ ಚಟುವಟಿಕೆ ನಡೆಸಲು ಭದ್ರತೆ ಬೇಕು. ಅಷ್ಟಕ್ಕೆ ಒಬ್ಬ ಮತ್ತೊಬ್ಬನೂ ನನ್ನಂತೆ ಮನುಷ್ಯ ಎಂದು ಕಂಡರೆ ಸಾಕು. ಬಿ.ಸಿ.ರೋಡ್ ಮೊದಲಿನಂತಾಗಲಿ. ಮತ್ತೊಂದು ಆತಂಕದ ಕ್ಷಣ ನಮ್ಮ ಎದುರು ಕಾಣಿಸುವುದು ಬೇಡ.
Be the first to comment on "ಬಿ.ಸಿ.ರೋಡಿನಲ್ಲಿ ದಿನವಿಡೀ ಆತಂಕದ ಕ್ಷಣಗಳು…"