ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಸಜೀಪಮುನ್ನೂರು ಗ್ರಾಮದ ಕಂದೂರು ಸಮೀಪ ನಿವಾಸಿ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಶರತ್ (28) ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಬಿ.ಸಿ.ರೋಡಿನ ಹೆದ್ದಾರಿ ಸಮೀಪ ಉದಯ ಲಾಂಡ್ರಿಯನ್ನು ನಡೆಸುತ್ತಿದ್ದ ತನಿಯಪ್ಪ ಮಡಿವಾಳ ಅವರ ಏಕೈಕ ಪುತ್ರ ಶರತ್ ಅವರನ್ನು ಮಂಗಳವಾರ ರಾತ್ರಿ ಬೈಕಿನಲ್ಲಿ ಬಂದಿದ್ದ ಮೂವರು ಮಾರಕಾಸ್ತ್ರಗಳಿಂದ ಇರಿದಿದ್ದರು. ಕೂಡಲೇ ಸಮೀಪದ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರ ಸಹಾಯದಿಂದ ಶರತ್ ಅವರನ್ನು ತುಂಬೆ ಆಸ್ಪತ್ರೆ, ಬಳಿಕ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದೇಹಕ್ಕೆ ಆದ ಬಲವಾದ ಗಾಯದಿಂದ ತೀವ್ರ ರಕ್ತಸ್ರಾವಗಳೊಂದಿಗೆ ಶರತ್ ಜೀವನ್ಮರಣ ಸ್ಥಿತಿಯಲ್ಲಿದ್ದರು. ಮೂರು ದಿನಗಳ ನಿರಂತರ ಚಿಕಿತ್ಸೆ ಬಳಿಕವೂ ಚಿಕಿತ್ಸೆಗೆ ಸ್ಪಂದಿಸದ ಶರತ್ ಅವರು ಮೃತಪಟ್ಟಿರುವುದಾಗಿ ಶುಕ್ರವಾರ ಘೋಷಿಸಲಾಯಿತು.
ಉದಯ ಲಾಂಡ್ರಿಯನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದವರು ತನಿಯಪ್ಪ ಮಡಿವಾಳ. ಅವರ ಏಕೈಕ ಪುತ್ರ ಶರತ್. ಅಂಗಡಿ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿಯನ್ನು ಶರತ್ ಹೊತ್ತಿದ್ದರು. ತಾಯಿ, ಇಬ್ಬರು ಅಕ್ಕಂದಿರು.
ಶರತ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಸಹಿತ ಜಿಲ್ಲೆಯಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಸೆ.144ರನ್ವಯ ನಿಷೇಧಾಜ್ಞೆ ಹೇರಲಾಗಿದ್ದು, ವಿವಿಧೆಡೆಗಳಿಂದ ಹೆಚ್ಚುವರಿ ಪೊಲೀಸರು ಆಗಮಿಸಿದ್ದಾರೆ. ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

Be the first to comment on "ಆರೆಸ್ಸೆಸ್ ಕಾರ್ಯಕರ್ತ ಶರತ್ ಮೃತ"