ಬಿ.ಸಿ.ರೋಡ್ ಹಳೇ ತಾಲೂಕು ಕಚೇರಿ ಇದ್ದ ಜಾಗದಿಂದ ಕೈಕುಂಜೆ ತಿರುವಿನವರೆಗೆ 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕಳಪೆ ಗುಣಮಟ್ಟವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತದ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೇತೃತ್ವದ ತಂಡ ಗುರುವಾರ ಪರಿಶೀಲನೆ ನಡೆಸಿತು.
ತನಿಖೆ ಸಂದರ್ಭ ಲೋಕಾಯುಕ್ತ ತಂಡವಲ್ಲದೆ, ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ದೂರುದಾರ ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು ಮತ್ತು ಸುಗುಣ ಕಿಣಿ ಹಾಜರಿದ್ದರು.
ಸಹಾಯಕ ಕಾರ್ಯಪಾಲ ಇಂಜಿನೀಯರ್-2 ಮತ್ತು ತನಿಖಾಧಿಕಾರಿಯಾದ ಸುಧೀಂದ್ರ ಅವರು ರಸ್ತೆ ಪರಿಶೀಲಿಸಿ ಬಳಿಕ ತನಿಖಾ ವರದಿ ಸಿದ್ದಪಡಿಸಿದ್ದರು.ಈ ವರದಿ ಸಮರ್ಪಕ ಮತ್ತು ತೃಪ್ತಿಕರವಾಗಿಲ್ಲ ಎಂದು ದೂರುದಾರ ಗೋವಿಂದ ಪ್ರಭುರವರು ಲಿಖಿತ ಅಕ್ಷೇಪ ದಾಖಲಿಸಿದರು. ದೂರಿನ ತನಿಖಾ ಹಂತದಲ್ಲಿರುವಾಗ ಮತ್ತು ರಸ್ತೆ ನಿರ್ಮಾಣದ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವುದರಿಂದ ಗುತ್ತಿಗೆದಾರನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲು ಈ ಹಿಂದೆ ನಡೆದ ತನಿಖೆಯ ಬಳಿಕ ಲೋಕಾಯುಕ್ತ ಕಚೇರಿಯಿಂದಲೇ ಶಿಫಾರಸು ಮಾಡಿದ್ದರೂ ಗುತ್ತಿಗೆದಾರನಿಗೆ ಕಾಮಗಾರಿಯ ಪೂರ್ತಿ ಬಿಲ್ ಪಾವತಿಸಿರುವ ವಿಚಾರವನ್ನು ತನಿಖಾಧಿಕಾರಿ ಗಮನ ಸೆಳದರು.
ಏನಿದು ಸಮಸ್ಯೆ:
ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಈರಸ್ತೆ ನಿರ್ಮಾಣಗೊಂಡಿತ್ತು.ಈ ರಸ್ತೆ ಮೂಲ ಅಂದಾಜುಪಟ್ಟಿಯಂತೆ ನಿರ್ಮಾಣವಾಗಿಲ್ಲ ಮತ್ತು ಕಳಪೆಗುಣ ಮಟ್ಟದಿಂದ ಕೂಡಿದೆ ಎಂದು 2014 ರ ನವಂಬರ್ 19 ರಂದು ಗೋವಿಂದ ಪ್ರಭು ಅವರು ಲೋಕಾಯುಕ್ತದ ಮುಂದೆ ದೂರು ದಾಖಲಿಸಿದ್ದರು. ಇನ್ನೂ ಪ್ರಕರಣ ತನಿಖಾ ಹಂತದಲ್ಲೇ ಇದೆ.
Be the first to comment on "ಕೈಕುಂಜೆ ರಸ್ತೆ ಕಳಪೆ: ಲೋಕಾಯುಕ್ತ ಇಂಜಿನಿಯರುಗಳ ತನಿಖೆ"