ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಆದಾಯ ಪ್ರಮಾಣ ಪತ್ರ ಪ್ರಮುಖ ದಾಖಲೆಯಾಗಿದ್ದು, ಸಂಬಂಧಪಟ್ಟ ಗ್ರಾಮಕರಣಿಕರು ಕೂಡಲೇ ಆದಾಯಪ್ರಮಾಣ ನೀಡಲು ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ತಾಕೀತು ಮಾಡಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವುದು ಗ್ರಾಮಕರಣಿಕರ ಮೂಲ ಕರ್ತವ್ಯವಾಗಿದೆ. ಬಿಪಿಎಲ್ ಕಾರ್ಡ್‍ಗೆ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಆಹಾರ ಇಲಾಖೆಯು ಜನಸ್ನೇಹಿ ಕೇಂದ್ರಗಳಿಗೆ ರವಾನಿಸಲಿದೆ. ಸಂಬಂಧಪಟ್ಟ ಗ್ರಾಮಕರಣಿಕರು ಅವುಗಳನ್ನು ಅಲ್ಲಿಂದ ಪಡೆದು ಪರಿಶೀಲಿಸಿ ಸಲ್ಲಿಸಬೇಕು. ಪ್ರಸಕ್ತ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ತೀರಾ ಸರಳೀಕರಿಸಲಾಗಿದೆ. ಫಲಾನುಭವಿ ಕುಟುಂಬದ ರೂ. 1.20ಲಕ್ಷದೊಳಗಿನ ಆದಾಯ ಪ್ರಮಾಣಪತ್ರವೇ ಪ್ರಮುಖ ಮಾನದಂಡವಾಗಿದೆ. ಇತರೆ ಮಾನದಂಡಗಳ ಬಗ್ಗೆ ಫಲಾನುಭವಿಗಳು ಸ್ವಯಂಘೋಷಣೆಯನ್ನು ಲಿಖಿತವಾಗಿ ಸಲ್ಲಿಸಬೇಕು. ನಾಗರೀಕರಿಗೆ ಅತ್ಯಂತ ತ್ವರಿತ ಮತ್ತು ಸರಳವಾಗಿ ರೇಶನ್ ಕಾರ್ಡ್ ದೊರೆಯಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಬಿಪಿಎಲ್ ಕಾರ್ಡ್ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅತೀವ ಮುಖ್ಯವಾಗಿದೆ. ಬಡವರು ಅನಾರೋಗ್ಯ ಚಿಕಿತ್ಸೆ ಪಡೆಯಲು ಸೇರಿದಂತೆ ಹಲವಾರು ಸೌಲಭ್ಯಗಳಿಗೆ ಇದನ್ನು ನಂಬಿಕೊಂಡಿದ್ದಾರೆ. ಇಂತಹ ಬಡವರ ಕೆಲಸದಲ್ಲಿ ಎಲ್ಲಾ ಇಲಾಖೆಯವರು ಕೈಜೋಡಿಸಬೇಕು. ಗ್ರಾಮಕರಣಿಕರು ಜನರ ಪರವಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ನಿರ್ಲಕ್ಷ್ಯವನ್ನು ಸಹಿಸಲಾಗದು. ಈ ನಿಟ್ಟಿನಲ್ಲಿ ಗ್ರಾಮಕರಣಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗೆ ಆದಾಯ ಪ್ರಮಾಣ ಪತ್ರ ನೀಡಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಗೊಂದಲಗಳಿಂದ ಸಿಲುಕಿದ್ದ ಪಡಿತರ ಚೀಟಿ ವಿತರಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಸಾರ್ವಜನಿಕರ ಈ ಅತಿಮುಖ್ಯ ಸೇವೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ, ಅಪರ ಜಿಲ್ಲಾಧಿಕಾರಿ ಕುಮಾರ, ಪುತ್ತೂರು ಉಪವಿಭಾಗಾಧಿಕಾರಿ ರಘುನಂದನಮೂರ್ತಿ, ಜಿಲ್ಲೆಯ ಎಲ್ಲಾ ತಹಶೀಲ್ದಾರ್‍ಗಳು ಉಪಸ್ಥಿತರಿದ್ದರು.
Be the first to comment on "ಆದಾಯ ಪ್ರಮಾಣಪತ್ರ ನೀಡಲು ಕೂಡಲೇ ಕ್ರಮ: ಖಾದರ್ ಖಡಕ್ ಸೂಚನೆ"