ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ 9.9 ಅಡಿ ಎತ್ತರದ ನೂತನ ಅಂಜನೇಯ ವಿಗ್ರಹವನ್ನು ಬೆಳಿಗ್ಗೆ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ವಿವಿಧ ವೈದಿಕ ವಿಧಿಯೊಂದಿಗೆ ಪ್ರತಿಷ್ಠಾಪಿಸಲಾಯಿತು.
ಕ
ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹನುಮಂತ ವಿಗ್ರಹಕ್ಕೆ ಮೊದಲ ಅಭಿಷೇಕ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಕಮಲಾ ಪ್ರ. ಭಟ್ ಮತ್ತು ಪ್ರಮುಖರು ಉಪಸ್ಥಿತರಿದ್ದರು. ಸುಮಾರು 8 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಪುರೋಹಿತ ಕಶೆಕೋಡಿ ಸೂರ್ಯನಾರಾಯಣ ಭಟ್ ವಿಧಿಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಪ್ರತಿಷ್ಠಾ ಪೂರ್ವದಲ್ಲಿ ಫಲನ್ಯಾಸ, ಸಾಮೂಹಿಕ ಪ್ರಾರ್ಥನೆ, ಹನುಮಾನ್ ಬಿಂಬಪರಿಗ್ರಹ, ಗಣಪತಿ ಪೂಜೆ, ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ,ಹೋಮ, ಬಲಿ, ದಿಕ್ಷಾಲಕ ಬಲಿ, ಬಿಂಬ ಶುದ್ಧಿ, ಬಿಂಬಾಧಿವಾಸ ನೆರವೇರಿಸಲಾಗಿತ್ತು.
ಪ್ರತಿಷ್ಠೆಯ ಬಳಿಕ, ಹಾಲು, ತುಪ್ಪ, ಮೊಸರು, ಜೇನು, ಸಕ್ಕರೆ, ಸುಗಂಧ ದ್ರವ್ಯಗಳಿಂದ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಸಾನಿಧ್ಯ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆಯನ್ನು ನೆರವೇರಿಸಲಾಯಿತು.
ಸ್ತ್ರೀಪುರುಷ ಎಂಬ ಬೇಧವಿಲ್ಲದೆ ಎಲ್ಲರೂ ಮೂರ್ತಿಯನ್ನು ಸ್ಪರ್ಶಿಸಿ ಸಿಯಾಳ ಅಭಿಷೇಕ ಮಾಡುವುದಕ್ಕೆ ಅವಕಾಶ ನೀಡಲಾಯಿತು. ಮುಂದಕ್ಕೂ ಇದೇ ಮಾದರಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರುವುದಾಗಿ ಪ್ರಕಟಿಸಲಾಯಿತು.
ಈ ಸಂದರ್ಭ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಪ್ರಮುಖ ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ಶ್ರೀಕರ ಪ್ರಭು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಅಂಜನೇಯ ವಿಗ್ರಹ ಪ್ರತಿಷ್ಠೆ"