ಪದ್ಯಾಣ ಗೋಪಾಲಕೃಷ್ಣ (1928-1997)
ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ. ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ ಏಳನೇ ಕಂತು ಇಲ್ಲಿದೆ.
ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ 7: ಆ ವಿಶೇಷ, ನಡೆದದ್ದಲ್ಲ – ನಡೆಸಿದ್ದು.
ಕೆಲಸದ ಹೊರೆ ಹೆಚ್ಚುತ್ತಿದ್ದರೂ, ಸಾಧ್ಯವಾದಷ್ಟೂ ಬೇಗನೆ ಕಲಿಯಬೇಕಾದ್ದೆಲ್ಲವನ್ನೂ ಕಲಿಯುವ ಹುಮ್ಮಸ್ಸು, ಆಯಾಸವನ್ನು ಮರೆಸುತ್ತಿತ್ತು. ಜೊತೆಗೆ, ತಾತ್ಕಾಲಿಕ ಉದ್ಯೋಗದ ನೆಲೆಯಲ್ಲೇ ನೇಮಕಗೊಂಡು, ಕೆಲವೇ ವಾರಗಳಲ್ಲಿ ಬೇರೆ ಕಡೆ ಕೆಲಸ ದೊರಕಿಸಿಕೊಳ್ಳುವ ಹಲವಾರು ಹೊಸಬರ ಆಗಮನ-ನಿರ್ಗಮನಗಳೂ, ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಿಕೊಳ್ಳಲು ಸಹಾಯವಾಗುತ್ತಿದ್ದವು.
ಹಾಗೆ ಬಂದು ಹೋದವರಲ್ಲಿ ಒಬ್ಬಿಬ್ಬರು. ಹಿಂದೆ ಒಂದು ಕಾಲದಲ್ಲಿ ವಿಶ್ವಕರ್ನಾಟಕ ಗರಡಿಯಲ್ಲಿ ಸಾಧನೆ ಮಾಡಿದ್ದ ಸಾಹಿತಿ ತ.ರಾ.ಸು., ಪತ್ರಿಕೋದ್ಯಮಿ ಮ. ಶೀಧರಮೂರ್ತಿ ಇವರಂತೆ(ಮುಂದೆ) ಪ್ರಸಿದ್ಧರಾದರು. ಒಬ್ಬರು ಸ್ವಂತವಾಗಿ ಪತ್ರಿಕೆ ಆರಂಭಿಸಿ, ಯಶಸ್ವಿಯೂ ಆದರು. ದಾರಿ ಗೊತ್ತಿಲ್ಲದ ನಾನು ಮಾತ್ರ ಇದ್ದಲ್ಲೇಇದ್ದು, ವಾರಗಳನ್ನು ಕಳೆಯತೊಡಗಿದೆ.
1956ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿತ್ತು. ಒಂದು ದಿನ ಚುನಾವಣೆಯ ಘೋಷಣೆಯೂ ಆಯಿತು. ಆ ಹೊತ್ತಿಗೆ, ಸಂಪಾದಕ ಆನಂದ ರೇಣು ಸರಕಾರಿ ಹುದ್ದೆಗೆ ಸೇರಿದ್ದ ಕಾರಣ, ಮುದ್ರಕ ಮಹಾಶಯರೇ ಸಂಪಾದಕರಾದರು. ಮೊದಲೇ ನಿರ್ಣಯವಾದಂತೆ, ದಿನದ ಸ್ವಲ್ಪ ಹೊತ್ತನ್ನಷ್ಟೇ ಕಚೇರಿಯಲ್ಲಿ ಕಳೆಯುತ್ತಿದ್ದ ವೆಂಕಣ್ಣ, ಸರಿರಾತ್ರಿಯವರೆಗೂ ಉಳಿಯುವ ಅಭ್ಯಾಸ ಮಾಡಿಕೊಂಡರು.
ಯಾವಾಗ ನೋಡಿದರೂ ಬರೆಯುತ್ತಾ ಕುಳಿತಿರುತ್ತಿದ್ದ ಅವರನ್ನು ಒಮ್ಮೆ- ಇಷ್ಟೊಂದು ಬರಿಯುತ್ತೀರಲ್ಲ, ಕಂಪೋಸಿಂಗ್ ಡಿಪಾರ್ಟ್ ಮೆಂಟ್ ಯಾವಾಗಲೂ ಬೆಳಿಗ್ಗೆ “ವೆಂಕಣ್ಣನವರು ಏನೂ ಮ್ಯಾಟರ್ ಕೊಟ್ಟಿಲ್ಲ ಎನ್ನುತ್ತಾರೆ, ಯಾಕೆ?” ಎಂದು ಕೇಳಿಯೇ ಬಿಟ್ಟೆ. ಅವರ ಸ್ವಂತದ ಮಾಸಪತ್ರಿಕೆ ಪಾಪಚ್ಚಿ ಮತ್ತು ನಾಗಯ್ಯನವರ(ಅ)ನಿಯಕತಕಾಲಿಕ ಕನ್ನಡ ಕೇಸರಿಗಳ ಪುನರುತ್ಥಾನ ಪ್ರಯತ್ನಗಳ ಹಿನ್ನೆಲೆ ಗೊತ್ತಾಯಿತು. ನೌಕರಿಯನ್ನೇ ನೆಚ್ಚಿ ಬದುಕಲು ಅಸಾಧ್ಯವೆನಿಸುವ ದಿನಗಳೂ ಬರುತ್ತವೆ, ಸ್ವಂತ ನೆಲೆ ಸಿದ್ಧಗೊಳಿಸಬೇಕಾಗುತ್ತದೆ ಎಂಬ ಸೂಚನೆಯೂ ಸಿಕ್ಕಿತು.
ಹಾಗೆಯೂ ಇನ್ನೊಮ್ಮೆ ಮಾತುಗತೆಗೆ ಅವಕಾಶ ಸಿಕ್ಕಾಗ-
ಕನ್ನಡ ಪತ್ರಿಕೆಗಳೆಲ್ಲ ಬ್ರಿಟಿಷ್ ಸಿದ್ಧಾಂತ- ವಿಧಾನಗಳನ್ನೇ ಅವಲಂಬಿಸಿರುವುದೇಕೆ ? ಸ್ವತಂತ್ರವಗಿ ಏನೊಂದನ್ನೂ ರೂಪಿಸಿಕೊಳ್ಳಲು ಕನ್ನಡ ಪತ್ರಿಕೋದ್ಯಮಕ್ಕೆ ಇನ್ನೂ ಸಾಧ್ಯವಾಗಿಲ್ಲವೆ ? ಎಂಬ ಪ್ರಶ್ನೆ ಕೇಳಿದೆ.
“ಏನೋ ? ಇದ್ದಕ್ಕಿದ್ದ ಹಾಗೆ ಕನ್ನಡ ಜಾಗೃತಿ ಆಯಿತಾ ?” ಎಂದು ನಕ್ಕರೂ, ಮುಂದೆ- ಪತ್ರಿಕೆಗಳ ಪರಿಚಯವನ್ನು ನಮಗೆ ಮಾಡಿಕೊಟ್ಟವರೇ ಬ್ರಿಟಿಷರು, ಭಾರತದ ಮೊತ್ತಮೊದಲ ಸಂಪಾದಕ ಜೇಮ್ಸ್ ಗಸ್ಟಸ್ ಹಿಕ್ಕಿಯ ಹೆಸರು ಕೇಳಿದ್ದೀಯಾ ? ಅವರು ಕಲಿಸಿಕೊಟ್ಟದ್ದನ್ನು ನಮಗೆ ಬೇಕಾದ ಹಾಗೆ ಅಳವಡಿಸಿಕೊಳ್ಳೋದಕ್ಕೆ ಮಾತ್ರ, ನಮ್ಮ ಬುದ್ಧಿದಾಸ್ಯ ಅಡ್ಡ ಬಂದಿರಬೇಕು….. ಮೊನ್ನೆಮೊನ್ನೆಯವರೆಗೂ ತಾಯಿನಾಡು ಕನ್ನಡ ಪತ್ರಿಕೆಯ ಬ್ಯಾನರ್ ಹೆಡ್ ಲೈನ್ ಇಂಗ್ಲಿಷಿನಲ್ಲೇ ಇರುತ್ತಿತ್ತು ಗೊತ್ತಾ ? ಈಗ ಕೂಡಾ, ನ್ಯೂಸ್ ತರಿಸಬೇಕಾದರೂ, ಕಳುಹಿಸಬೇಕಾದರೂ ನಮಗೆ ಇಂಗ್ಲಿಷೇ ಗತಿ. ಒಳ್ಳೆ ಪ್ರಿಂಟಿಂಗ್ ಮೆಷಿನ್, ಕೊನೆಗೆ ಬಿಳಿ ನ್ಯೂಸ್ ಪ್ರಿಂಟ್ ಬೇಕಾದರೂ ನಾವು ಎಲ್ಲಿಗೆ ಹೋಗಬೇಕು ? ಅದೂ ಸಾಯಲಿ, ಇಂಗ್ಲಿಷ್ ಪೇಪರಿನಲ್ಲಿ ಸಬ್ ಎಡಿಟರ್ ಕೆಲವು ಅಕ್ಷರಗಳಿಗೆ ಎರಡು ಕೆಳಗೀಟು ಹಾಕಿ ತೆಗೆದುಕೊಳ್ಳುವ ಸಂಬಳ, ಪ್ರತಿಯೊಂದು ಅಕ್ಷರವನ್ನೂ ಟ್ರಾನ್ಸ್ ಲೇಟ್ ಮಾಡಿ ಸಾಯುವ ಕನ್ನಡ ಸಬ್ಬಿಗಿಂತ ಡಬ್ಬಲ್ ಇರುತ್ತದೆ. ಅದೂ ಬೇಡ, ಒಂದೇ ತರದ ನ್ಯೂಸ್ ಪ್ರಿಂಟಿನಲ್ಲಿ ಪ್ರಿಂಟಾಗಿ ಹಳೆಯದಾಗುವ ರದ್ರಿ ಕಾಗದಕ್ಕೆ ಕನ್ನಡ ಆದ್ರೆ ಬೆಲೆ ಕಡಿಮೆ, ಇಂಗ್ಲಿಷ್ ಆದ್ರೆ ಹೆಚ್ಚು….”
ಇತ್ಯಾದಿ ಇತ್ಯಾದಿ ಒಂದು ಪುಟ್ಟ ಭಾಷಣವನ್ನೇ ಬಿಗಿದು ಕೊನೆಗೆ “ಅದೆಲ್ಲ ಸಾಕು, ಬೇರೆ ಏನಾದರೂ ತಿಳಿಯಬೇಕಾದ ವಿಷಯ ಇದ್ದರೆ ಕೇಳು – ಆದರೆ, ಈಗ ಅಲ್ಲ” ಎಂದು ಮಾತು ಮುಗಿಸಿ ಎದ್ದು ಹೊರಟು ಹೋದರು.
ಅವರು ಆ ದಿನ ಹೇಳಿದ್ದ ಕೊನೆಯ ಮಾತನ್ನೇ ಅವರ ನೆನಪಿಗೆ ತರುವ ಒಂದು ಅವಕಾಶ ಬೇಗನೆ ಬಂತು. ಹೊಸ ಸಂಪಾದಕರ ಒತ್ತಡದಾಸೆ – ರಾಜಾ ಸಿಂಗರ ಸಲಹೆ ಇವೆರಡೂ ಸೇರಿ. ಪತ್ರಿಕೆಯ ಹದಿನಾರು ಪುಟಗಳ ವಿಶೇಷ ಸಂಚಿಕೆಯನ್ನು ಒಂಭತ್ತು ದಿನಗಳ ಒಳಗೆ ಹೊರತರುವ ನಿರ್ಧಾರವಾಯಿತು. ಪುಟ ತುಂಬಿಸುವ ಹೊಣೆ ನನ್ನದೆಂಬ ತೀರ್ಮಾನವೂ ಆಯಿತು.
ಆ ಹೊತ್ತಿಗೆ, ಹೆಚ್ಚಿನ ಕೆಲಸ ಮಾಡಬೇಕಾದರೆ, ಹೆಚ್ಚಿನ (ಓವರ್ ಟೈಮ್) ತಲಬನ್ನೂ ಕೊಡಬೇಕೆಂಬ ಬೇಡಿಕೆಯನ್ನು ಧೈರ್ಯವಾಗಿ ಮಂಡಿಸುವಷ್ಟು ಮುಂದುವರಿದಿದ್ದೆ. ಹೇಗೂ ಮೇಲು ಸಂಪಾದನೆಯಿಂದ ಕೊಡುವುದಾದ ಕಾರಣ ಹಣ ಕೊಡುವ ಆಶ್ವಾಸನೆ ಕೂಡಲೆ ಬಂದಿತ್ತು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ಎ.ವಿವೇಕ ರೈ ಅವರು ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರು ಶ್ರೀ. ದೇವರಾಜ್ ಜೊತೆ ದಿನಾಂಕ 20 ಜುಲೈ 1994 ರಂದು ಮಂಗಳೂರಿನಲ್ಲಿ ಏರ್ಪಡಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಮಂಗಳೂರಿನ ಪತ್ರಕರ್ತರೊಂದಿಗೆ ಶ್ರೀ. ಪ. ಗೋಪಾಲಕೃಷ್ಣ.
ವಿಶೇಷ ಸಂಚಿಕೆಗಳಲ್ಲಿ ಜಾಹೀರಾತುಗಳಿಗೇ ಪ್ರಥಮ ಪ್ರಾಶಸ್ತ್ಯ. ಉಳಿದ ಜಾಗ ಭರ್ತಿ ಮಾಡುವುದಕ್ಕಷ್ಟೇ ಎಡಿಟೋರಿಯಲ್ ನ ಕೊಡುಗೆ ಸೀಮಿತ. ಆದರೆ, ಕೆಲಸ ಬೇಕಾಬಿಟ್ಟಿಯಾಗಿ ಹೋಗಲು ಬಿಡಬಾರದು. ಲೇಖನಗಳಲ್ಲಿ ವೈವಿಧ್ಯತೆ ಕಾಣಬೇಕು. ವಿನ್ಯಾಸವೂ ಅಚ್ಚುಕಟ್ಟಾಗಿರಬೇಕು ಎಂಬ ಗುರೂಪದೇಶದ ತರುವಾಯ- ಬೇರೆಯವರಿಂದ ತರಿಸುವ ಲೇಖನಗಳಂತೂ ಬರುತ್ತವಲ್ಲ, ಆಗಲಿ, ಕೆಲಸ ಮಾಡುತ್ತೇನೆ- ಎಂದೆ.
“ಮಂಡೆ ಸಮ ಇಜ್ಜಿಯಾ ನಿಕ್ಕ್? ಕಾಸ್ ಬುಡ್ವಿನಾಯೆ ಅತ್ತ್, ನಿನ ಪಿರಾವೇ ಉಳ್ಳೆ” ಎಂಬ ಸಂಪಾದಕರ ಬೆನ್ನ ಹಿಂದಿನ ಉಪಸ್ಥಿತಿಯ ಸೂಚನೆ ತುಳುವಿನಲ್ಲಿ ಬಂತು. ಆದರೆ, ದಿಢೀರ್ ಲೇಖನದ ತಯಾರಿಯನ್ನು ಕಲಿಸಿಕೊಡುವ ಆಶ್ವಾಸನೆಯೂ ಒಟ್ಟಿಗೆ ಬಂದಿತ್ತು.
ಕಲೆ, ಸಾಹಿತ್ಯ, ಸಿನೆಮಾ, ರಾಜಕೀಯ ವಿಚಾರ, ವಿಸ್ಮಯ ಜಗತ್ತು, ಆರ್ಥಿಕ ವಿದ್ಯಮಾನಗಳು ಇತ್ಯಾದಿಗಳಲ್ಲಿ ಸಂಗ್ರಹಾನುವಾದ ರೂಪಾಂತರ ಸಾಹಿತ್ಯದ ಹನ್ನೆರಡು ಲೇಖನಗಳಿಗೆ ವೆಂಕಣ್ಣನ ಕೋಣೆಯ ರಾಶಿ ಹುಡುಕಿ ತಂದಿದ್ದ ಬೇರೆ ಬೇರೆ ಪತ್ರಿಕೆಗಳ ‘ಸಪ್ಲಿಮೆಂಟ್’ಗಳೇ ಆಕರ. ಉಳಿದ ನಾಲ್ಕು ಪ್ರಮುಖ ಬರಹಗಳಿಗೆ ಕು.ವೆಂ.-ಹಿ.ಮ.ನಾ. ಆಧಾರ. ಅಂತೂ ವಿಶೇಷ ಸಂಚಿಕೆ ಒಂಭತ್ತನೇ ದಿನವೇ ಹೊರಬಂದಿತು. ಅದಕ್ಕಾಗಿ ಬರಬೇಕಾದ ದುಡ್ಡು ನನಗೂ ಸಿಕ್ಕಿತು.
ಅಂದಿನವರೆಗೂ, ಅಂದಿನಿಂದ ಮುಂದೂ, ಕಲಿತಿದ್ದ ಮತ್ತು ಕಲಿಯುತ್ತಿದ್ದ ಪತ್ರಿಕೋದ್ಯಮದ ಅಂಗ-ಅಂಶಗಳನ್ನೆಲ್ಲ ಆಗಾಗ ಪ್ರಯೋಗಿಸಿ ನೋಡುತ್ತಿದ್ದೆ. ಅವುಗಳಲ್ಲಿನ ಹೆಚ್ಚುಕಡಿಮೆಗಳನ್ನು ತಿಳಿದುಕೊಳ್ಳಲು ಕೆಲವರು ವೃತ್ತಿಮಿತ್ರರ ಸಹಾಯವನ್ನೂ ಯಾಚಿಸುತ್ತಿದ್ದೆ. ಆದರೆ, ಅವರಲ್ಲಿ ಒಬ್ಬನ ಹೊರತು ಹೆಚ್ಚಿನವರು ನನ್ನ ಪ್ರಶ್ನೆಗಳಿಗೆ ಕಾಟಾಚಾರದ ಉತ್ತರಗಳನ್ನಷ್ಟೇ ಕೊಟ್ಟು ಸುಮ್ಮನಾಗುವ ಹಂತಕ್ಕೆ ಮುಟ್ಟಿದಾಗ, ನಿಜವಾಗಿ ವಿಮರ್ಶೆ ಮಾಡಬೇಕಾದವರು ಆ ಬಗ್ಗೆ ಏನೂ ಆಸಕ್ತಿ ತೋರಿಸದಿರುವುದೂ ನನ್ನ ಮಟ್ಟಿಗೆ ಒಂದು ದೊಡ್ಡ ತೊಡಕು ಎಂದೆನಿಸಿತು.
ಒಮ್ಮೆ ನನ್ನ ಅಳಲನ್ನು ತೋಡಿಕೊಂಡಾಗ “ನಿನ್ನ ಕೆಲಸ ಸರಿದಾರಿಯಲ್ಲೇ ನಡೆದಿದೆ. ಸಣ್ಣ ಪುಟ್ಟ ತಪ್ಪುಗಳು ಕೆಲವು ಆಗಿರಬಹುದು. ಆದರೆ ಅವುಗಳನ್ನಾದರೂ ಓದುಗರೇ ತೋರಿಸಿಕೊಟ್ಟರೆ ಅವರ ಅಭಿಪ್ರಾಯಗಳಿಗೆ ಮನ್ನಣೆ ಕೊಡಲೇಬೇಕು. ಅಂಥ ತಪ್ಪುಗಳು ರಿಪೀಟ್ ಆಗದಂತೆ ನೋಡಿಕೊಳ್ಳಬೇಕು, ಅಷ್ಟೆ, ಅದೂ ಅಲ್ಲದೆ, ಪ್ರತಿಯೊಂದನ್ನೂ ನಾವೇ ಗಮನಿಸಿ ತಿದ್ದಬೇಕಾದ ಹಂತವನ್ನು ನೀನೀಗ ದಾಟಿದ್ದಿ” ಎಂಬ ಸಾಂತ್ವನ ದೊರಕಿತು.
ಹಾಗಾಗಿ, ಇಲ್ಲದ( ಕೆಲವೊಮ್ಮೆ ಸಲ್ಲದ ಎನ್ನಲೂಬಹುದು) ಧೈರ್ಯವನ್ನು ಎರವಲು ಪಡೆದು ಅನಂತರದ ತಿಂಗಳುಗಳನ್ನು ದೂಡತೊಡಗಿದೆ. ಹೊಟ್ಟೆಗೆ ಮತ್ತು ವಸತಿಯ ಬಾಡಿಗೆಗೆ ಸಾಕಾಗುವಷ್ಟು ವರಮಾನವನ್ನು ಸಂಬಳದ ಜೊತೆಗೆ ‘ರಾಷ್ಟ್ರಮತ’ ವಾರಪತ್ರಿಕೆಯ ಬೆಂಗಳೂರು ಪ್ರತಿನಿಧಿಯ ಕೆಲಸ ಮತ್ತು ಆಕಾಶವಾಣಿಗೆ ಒದಗಿಸುತ್ತಿದ್ದ ಕಥೆ- ಶಬ್ದಚಿತ್ರಗಳ ಮೂಲಕ ಪಡೆಯುತ್ತಿದ್ದೆ.
ಆ ಸ್ಥಿತಿ, ಚುನಾವಣೆಗಳು ಮುಗಿದು, ತಿಂಗಳುಗಳು ಸರಿದು, ರಾಜ್ಯಗಳ ಪುನರ್ಘಟನೆಯಾಗಿ, ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರ ಸಮ್ಮುಖದಲ್ಲಿ (ವಿಶಾಲ) ಮೈಸೂರು ರಾಜ್ಯದ ಉದ್ಘಾಟನೆ ಆಗುವವರೆಗೂ ಮುಂದುವರೆಯಿತು.
ರಾಜ್ಯೋತ್ಸವ ಪುರವಣಿಯಲ್ಲಿ ಗೋವಿಂದ ಪೈಗಳ -‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’– ಕವನವನ್ನು ಅವರ ಅನುಮತಿಯಿಲ್ಲದೆ ಪ್ರಕಟಿಸಿ, ಅವರು ಅದಕ್ಕಾಗಿ ನೊಂದುಕೊಂಡ ಸುದ್ದಿ ತಿಳಿದು, ಮರುಗಿದ ಒಂದು ಘಟನೆಯ ಹೊರತು ಹೆಚ್ಚಿನ ವಿಶೇಷವೇನೂ ಆ ಸಮಯದಲ್ಲಿ ನಡೆಯಲಿಲ್ಲ.
ಒಬ್ಬರನ್ನೊಬ್ಬರು ಸಂಧಿಸಿದಾಗ ಅಥವಾ ದೂರವಾಣಿಯಲ್ಲಿ ಸಂಭಾಷಣೆ ಆರಂಭಿಸಿದಾಗ, ‘ಏನ್ಸಮಾಚಾರ?’ ಎನ್ನುವ ನಾಡಿನಲ್ಲಿ ದುಡಿಯುತ್ತಿದ್ದ ನಾನು “ಏನು ವಿಶೇಷ?” ಎಂದೂ ಮಾತಿಗೆ ತೊಡಗುವ ಕ್ರಮವಿತ್ತು. ಅದರಿಂದಾಗಿ -“ನಿಮ್ ಮಂಗ್ಳೂರಿನವರಿಗೆ ಯಾವಾಗ್ಲೂ ವಿಶೇಷ ನಡೀತಾನೇ ಇರಬೇಕೇನೀ?” ಎಂಬ ಪ್ರಶ್ನೆಯನ್ನೂ ಈ ನನ್ನ ಜೀಪ್ ಪ್ರಯಾಣದ ಮಿತ್ರನಿಂದ ಎಷ್ಟೋ ಬಾರಿ ಎದುರಿಸಿದ್ದೆ.
“ವಿಶೇಷ-ವಿಶೇಷಾಂಕ ಬಡ್ಕೊಳ್ತೀರಲ್ಲ ಗೋಪಾಲಕೃಷ್ಣ- ಒಂದು ದೊಡ್ಡ ವಿಶೇಷ ಬೇಗ ನಡಿಯುತ್ತೆ ನೋಡಿ-ನಿಮ್ಮಲ್ಲೇ” ಎಂದೊಂದು ದಿನ ಆತ ಫೋನಿನಲ್ಲಿ ಮುನ್ಸೂಚನೆ ಇತ್ತಾಗ, ಏನೇನನ್ನೊ ಕಲ್ಪಿಸಿಕೊಂಡು ಬೆದರಿದ ಕಾರಣ- ಯಾವರೀತಿಯ ವಿಶೇಷ?- ಎಂದು ಕೇಳಲು ಮರೆತೇ ಹೋಯಿತು. ಮುಂದೆ ಅವನು ಹೇಳಿದ್ದಂತೆಯೇ ಹುಟ್ಟ ಪರಿಣಾಮವನ್ನೂ ಬೀರಿದ,-
ಆ ವಿಶೇಷ, ನಡೆದದ್ದಲ್ಲ – ನಡೆಸಿದ್ದು. ಅಥವಾ ಸೃಷ್ಟಿಸಿದ್ದು ಎಂದೂ ಹೇಳಬಹುದು.
(ಮುಂದಿನ ಭಾಗದಲ್ಲಿ)
ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 6 : “ಮಿಸ್ಟರ್ ಓದುಗ! ಪ್ಲೀಸ್ ಫಿಲ್ ಅಪ್ ದಿ ಬ್ಲಾಂಕ್ಸ್”
Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 7: ಆ ವಿಶೇಷ, ನಡೆದದ್ದಲ್ಲ – ನಡೆಸಿದ್ದು."