ತಾಲೂಕು ಕಚೇರಿಯಿಂದ ಕಡತಗಳು ಮಾಯ!

  • ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರ ಕಳವಳ
  • ಮಿನಿ ವಿಧಾನಸೌಧ ಪೂರ್ತಿ ಸಿಸಿ ಕ್ಯಾಮರಾ ಅಳವಡಿಸಲು ಒತ್ತಾಯ

ಬಂಟ್ವಾಳ ತಾಲೂಕು ಕಚೇರಿಗೆ ಬಂದರೆ ಕಡತಗಳು ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ!

ಹಿಂದೊಮ್ಮೆ ಅರ್ಜಿ ಹಾಕಿದ ಕಡತವೇ ನಾಪತ್ತೆ!, ಕೆಲಸಕ್ಕೆಂದು ತಾಲೂಕು ಕಚೇರಿಗೆ ಬಂದರೆ ಕಡತವೇ ಇಲ್ಲ ಎಂದು ಮರಳುವ ಜನತೆ, ಪ್ರಭಾವ ಬೀರಿದರಷ್ಟೇ ಪತ್ತೆ.

ಗುರುವಾರ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತ್ ಸಭೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರ ಒಕ್ಕೊರಳ ಧ್ವನಿ ಇದು.

ವಿಷಯ ಪ್ರಸ್ತಾಪಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ, ಕಡತಗಳ ಸುಭದ್ರತೆಗೆ ಏನು ಮಾಡುತ್ತೀರಿ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆಯವರನ್ನು ಪ್ರಶ್ನಿಸಿದರು. ತಾಲೂಕು ಕಚೇರಿಯ ರೆಕಾರ್ಡ್ ರೂಮ್ ನಲ್ಲಿ ಕಡತಗಳು ಮಾಯವಾಗುತ್ತಿವೆ. ದೂರದಿಂದ ಬರುವ ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬಹಳಷ್ಟು ಪ್ರಭಾವ ಬಳಸಿದಾಗ ಇದು ದೊರಕುತ್ತದೆ ಎಂದು ಇತರ ಸದಸ್ಯರೂ ದೂರಿದರು. ಈ ಸಂದರ್ಭ ಉತ್ತರಿಸಿದ ತಹಶೀಲ್ದಾರ್, ಪರಿಶೀಲಿಸುವುದಾಗಿ ಭರವಸೆ ನೀಡಿ, ಮಿನಿ ವಿಧಾನಸೌಧಕ್ಕೆ ರೆಕಾರ್ಡ್ ರೂಮ್ ಈಗಾಗಲೇ ವರ್ಗಾವಣೆ ಹೊಂದಿದೆ. ಪೂರ್ತಿಯಾಗಿ ಮಿನಿ ವಿಧಾನಸೌಧ ಕಾರ್ಯಾಚರಣೆ ಆರಂಭಿಸಿದ ಬಳಿಕ ಸಮಸ್ಯೆ ಬಾರದು ಎಂದರು.

ಈ ಸಂದರ್ಭ ಮಾತನಾಡಿದ ಸುಭಾಶ್ಚಂದ್ರ ಶೆಟ್ಟಿ, ಸಿಸಿ ಕ್ಯಾಮರಾ ಅಳವಡಿಸುವುದು ಸೂಕ್ತ ಎಂಬ ಸಲಹೆ ನೀಡಿದರು. ರೆಕಾರ್ಡ್ ರೂಮ್ ಗೆ ಸಿಸಿ ಕ್ಯಾಮರಾ ಹಾಕಬಹುದು ಎಂದು ತಹಶೀಲ್ದಾರ್ ಹೇಳಿದಾಗ, ಇಡೀ ಮಿನಿ ವಿಧಾನಸೌಧಕ್ಕೆ ಕ್ಯಾಮರಾ ಅಳವಡಿಸಲು ಶೆಟ್ಟಿ ಸಲಹೆ ನೀಡಿದರು. ಇದಕ್ಕೆ ಹಣ ನೀವು ಕೊಡುತ್ತೀರಾ ಎಂದು ತಹಶೀಲ್ದಾರ್ ಕೇಳಿದಾಗ, ದಾನಿಗಳ ನೆರವಿನಿಂದಾದರೂ ಕ್ಯಾಮರಾ ಅಳವಡಿಸಲು ನಾವು ಗ್ರಾಪಂ ಅಧ್ಯಕ್ಷರು ಒಟ್ಟಾಗಿ ನೆರವು ನೀಡುತ್ತೇವೆ. ನಮಗೆ ಪಾರದರ್ಶಕ ಆಡಳಿತ ದೊರಕುವುದು ಮುಖ್ಯ ಎಂದು ಹೇಳಿದರು.

ಇದೇ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ತಾಲೂಕು ಕಚೇರಿಯಲ್ಲಿ ಕಡತ ನಾಪತ್ತೆಯಾಗುವುದು ನಾಚಿಕೆಯ ಸಂಗತಿ. ಇದು ಇಡೀ ತಾಲೂಕಿಗೆ ನಾಚಿಕೆ ತರುವ ವಿಚಾರ ಎಂದು ಹೇಳಿದರು.

ಅಂಗನವಾಡಿಗೆ ಆವರಣಗೋಡೆ ನಿರ್ಮಾಣ ವಿಚಾರದಲ್ಲಿ ನಿರ್ವಹಣೆಗೆ ಎಂದಿರುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಬಂತು. ನಯನಾಡು ಅಂಗನವಾಡಿಗೆ ಮೀಸಲಿಟ್ಟ ಹಣ ದುರಸ್ತಿ ಎಂಬ ಬದಲು ಅಭಿವೃದ್ಧಿ ಎಂದು ಆಗಬೇಕಿತ್ತು ಎಂದು ತಾಪಂ ಸದಸ್ಯ ರಮೇಶ್ ಕುಡ್ಮೇರು ಒತ್ತಾಯಿಸಿದರು. ಇದೇ ವೇಳೆ ಅಂಗನವಾಡಿ ಅಭಿವೃದ್ಧಿ ಸಮಿತಿ ಸಭೆಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ ಎಂದೂ ಅವರು ದೂರಿದರು.

ಮಕ್ಕಳಿದ್ದರೂ ಶಿಕ್ಷಕರಿಲ್ಲ:

ಉತ್ತಮ ಫಲಿತಾಂಶ ದೊರಕಿದ ಸುರಿಬೈಲು ಹೈಸ್ಕೂಲಿಗೆ ಶಿಕ್ಷಕರೇ ಇಲ್ಲ ಎಂಬ ವಿಚಾರ ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು. ವಿಷಯ ಪ್ರಸ್ತಾಪಿಸಿದ ಸುಭಾಶ್ಚಂದ್ರ ಶೆಟ್ಟಿ, 83 ಮಕ್ಕಳು ಇರುವ ಕಡೆ ಕೇವಲ ಇಬ್ಬರು ಶಿಕ್ಷಕರು ಇರುವ ಸನ್ನಿವೇಶವೂ ಇದೆ. ಕೆಲವೆಡೆ ಅದೇ ಸಂಖ್ಯೆಗೆ ಆರು ಶಿಕ್ಷಕರು ಇದ್ದಾರೆ. ಇದು ಯಾವ ನ್ಯಾಯ ಎಂದು ಕ್ಷೇತ್ರ ಶಿಕ್ಷಣಾಕಾರಿ ಲೋಕೇಶ್ ಅವರನ್ನು ಪ್ರಶ್ನಿಸಿದರು.

ಸುರಿಬೈಲು ಹೈಸ್ಕೂಲಿಗೆ ಈ ಬಾರಿ ಶಿಕ್ಷಕರ ಕೊರತೆ ನಡುವೆಯೂ ಶೇ.60ರಷ್ಟು ಫಲಿತಾಂಶ ಬಂದಿದೆ. ಇದು ಉತ್ತಮ ಸಾಧನೆಯಾಗಿದೆ. ಆದರೆ ಇಲ್ಲಿಗೆ ಶಿಕ್ಷಕರ ನಿಯೋಜನೆಯಾಗದೆ ಸಮಸ್ಯೆ ಆಗುತ್ತಿದೆ ಎಂದರು. ಇದಕ್ಕೆ ದನಿಗೂಡಿಸಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಯಾವುದೇ ಸವಲತ್ತುಗಳು ಇಲ್ಲದೆ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷವಾದರೂ ಅಧ್ಯಾಪಕರನ್ನು ನೇಮಿಸಿ ಎಂದು ಹೇಳಿದರು. ಎಲ್ಲಿ ಕಡಿಮೆ ಶಿಕ್ಷಕರು ಇದ್ದಾರೆಯೋ ಅಲ್ಲೆಲ್ಲ ಭರ್ತಿ ಮಾಡಿ ಎಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಕಾರಿ ಲೋಕೇಶ್, ಮಕ್ಕಳಿರುವ ಕಡೆ ಶಿಕ್ಷಕರ ನಿಯೋಜನೆ ನಡೆಯುತ್ತಿದೆ. ಎರಡು ವಾರಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ. ಸುರಿಬೈಲು ಶಾಲೆಗೆ ಶಿಕ್ಷಕರ ಹುದ್ದೆಯೇ ಮಂಜೂರಾಗಿಲ್ಲ ಎಂದು ಹೇಳಿದರು.

ಶಾಲೆಯೊಂದರಲ್ಲಿ ನಾಡಗೀತೆ, ರೈತಗೀತೆ ಮತ್ತು ರಾಷ್ಟ್ರಗೀತೆ ಹಾಡನ್ನೇ ಕಡಿತ ಮಾಡಲಾಗುತ್ತಿದೆ ಎಂದು ಹೈದರ್ ಆರೋಪಿಸಿದರು.

ಇಲಿಜ್ವರ ಪತ್ತೆ:

ತಾಲೂಕಿನಲ್ಲಿ ಎರಡು ಪ್ರಕರಣಗಳು ಇಲಿಜ್ವರಕ್ಕೆ ಸಂಬಂಸಿದ್ದಾದರೆ, 12 ಪ್ರಕರಣಗಳು ಡೆಂಗೆಗೆ ಸಂಭವಿಸಿವೆ. ಪುಣಚ ಪರಿಸರದಲ್ಲಿ ಈ ಸಮಸ್ಯೆ ಇದ್ದು ಈಗ ನಿವಾರಣೆಯಾಗುತ್ತಿದೆ ಎಂದು ತಾಲೂಕು ಆರೋಗ್ಯಾಕಾರಿ ಡಾ.ದೀಪಾ ಪ್ರಭು ತಿಳಿಸಿದರು.

ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಸದಸ್ಯರೂ ಜನತೆಗೆ ತಿಳಿಹೇಳಬೇಕಾಗಿದೆ ಎಂದು ಕಾರ್ಯನಿರ್ವಹಣಾಕಾರಿ ಸಿಪ್ರಿಯಾನ್ ಮಿರಾಂದಾ ಸೂಚಿಸಿದರು.

ಲೈನಸ್ಸ್ ಕೊಡುವಾಗ ಎಚ್ಚರ:

ನಾವು ಶಾಲಾ ಪರಿಸರದಲ್ಲಿ ಹಂದಿ ಸಾಕಾಣೆ ಕುರಿತ ಆಕ್ಷೇಪದ ಬಗ್ಗೆ ದೂರು ನೀಡಿದರೆ, ಆರೋಗ್ಯ ಇಲಾಖೆ ನಿರಾಕ್ಷೇಪಣೆ ಪತ್ರ ಕೊಡುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬಲಿಪಶುವಾಗುವುದು ಗ್ರಾಮ ಪಂಚಾಯತ್ ಗಳು ಎಂದು ಸುಭಾಶ್ಚಂದ್ರ ಶೆಟ್ಟಿ ಹೇಳಿದರು. ಈ ಕುರಿತು ಗಮನಹರಿಸುವುದಾಗಿ ಹೇಳಿದ ಡಾ.ಪ್ರಭು, ಮಾರ್ಚ್ ೧ರಿಂದ ತಾಲೂಕು ಆಹಾರ ಸುರಕ್ಷತೆ ಅಕಾರಿಯ ಪ್ರಭಾರ ಹೊಣೆಗಾರಿಕೆ ತನಗಿದೆ. ಪ್ರತಿಯೊಂದಕ್ಕೂ ಸ್ಥಳಪರಿಶೀಲನೆ ಮಾಡಿ ನಿರಾಕ್ಷೇಪಣೆ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಹೀಗೆ ತ್ರಿಸ್ತರದ ವ್ಯವಸ್ಥೆ ಇದೆ. ಈಗ ಗ್ರಾಮ ಪಂಚಾಯತ್  ನ ಟಯರ್ ಪಂಕ್ಚರ್ ಆಗಿದೆ ಎಂದರು. ಮೂರು ತಿಂಗಳಿಗೊಮ್ಮೆಯಾದರೂ ಪರಾಮರ್ಶೆ ಸಭೆ ಗ್ರಾಪಂ ಸದಸ್ಯರಿಗೆ ಆಗಬೇಕು ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದರು. ೯೪ಸಿಸಿ ಅರ್ಜಿಗಳು ತಾಲೂಕಿನಲ್ಲಿ ೩೪೦೦ ವಿಲೇವಾರಿಗೆ ಬಾಕಿ ಇವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯರಾದ ಹೈದರ್ ಕೈರಂಗಳ, ಆದಂ ಕುಂಞ, ಸಂಜೀವ ಪೂಜಾರಿ, ರಮೇಶ್ ಕುಡುಮೇರು, ಮಲ್ಲಿಕಾ ವಿ.ಶೆಟ್ಟಿ, ಯಶವಂತ ಪೂಜಾರಿ, ಶಿವಪ್ರಸಾದ್ ಕನಪಾಡಿ, ಗಣೇಶ್ ಸುವರ್ಣ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಅವರನ್ನು ಅವರ ಪುತ್ರ ನವೀನ್ ಭಟ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ೩೭ನೇ ರ್‍ಯಾಂಕ್ ಗಳಿಸಿದ್ದಕ್ಕಾಗಿ ಅಭಿನಂದಿಸಲಾಯಿತು.

ಇಒ ಸಿಪ್ರಿಯಾನ್ ಮಿರಾಂದಾ ಕಾರ್ಯಕ್ರಮ ನಿರ್ವಹಿಸಿದರು. ಸಭೆ ಆರಂಭಕ್ಕೆ ಮೊದಲು ಕರೋಪಾಡಿಯಲ್ಲಿ ಹತ್ಯೆಗೀಡಾದ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ತಾಲೂಕು ಕಚೇರಿಯಿಂದ ಕಡತಗಳು ಮಾಯ!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*