- ಬಿ.ತಮ್ಮಯ್ಯ
- ಅಂಕಣ: ನಮ್ಮ ಭಾಷೆ
ಸಾಮಾನ್ಯವಾಗಿ ಒಂದು ಊರಿಗೆ ಒಂದು ಹೆಸರು, ಒಂದು ವ್ಯಕ್ತಿಗೊಂದು ಹೆಸರು ಇರುತ್ತದೆ. ಆದರೆ ತುಳುನಾಡಿನ ಕೆಲವು ಊರುಗಳಿಗೆ ಎರಡೆರಡು ಹೆಸರು ಮತ್ತು ಕೆಲವು ಊರಿಗೆ ಹಲವು ಹೆಸರು ಇರುವುದನ್ನು ನೋಡಬಹುದು. ಇದಕ್ಕೆ ಕಾರಣ ಈ ಭಾಗದಲ್ಲ ವಾಸವಿರುವ ಬಹುಭಾಷಾ ಜನಾಂಗ ಎಂಬುದನ್ನು ಮರೆಯಬಾರದು. ಅಂಥ ಕೆಲ ಸ್ಥಳಗಳನ್ನು ಗುರುತಿಸೋಣ.
ಬೆಳ್ತಂಗಡಿಯನ್ನು ಬೊಳ್ತೇರ್ ಎಂದು ಕರೆಯುತ್ತಾರೆ. ಉಪ್ಪಿನಂಗಡಿಯನ್ನು ಉಬಾರ್ ಎಂದು ಕರೆಯುತ್ತಾರೆ. ಪಾಣೆಮಂಗಳೂರನ್ನು ಪಾಣೇರ್ ಎಂದೂ ವಿಟ್ಲವನ್ನು ಇಟ್ಟೆಲ್ ಎಂದು ಕರೆಯುತ್ತಾರೆ. ಉಡುಪಿಯನ್ನು ಒಡಿಪು ಎಂದು ಕಾರ್ಕಳವನ್ನು ಕಾರ್ಲ ಎಂದು ಕರೆಯುತ್ತಾರೆ. ಬಂದರು ನಗರಿಯಾದ ಮಂಗಳೂರನ್ನು ತುಳುವರು ಕುಡ್ಲ ಎಂದು ಮಲೆಯಾಳಿಗರು ಮಂಗಳಾಪುರ ಎಂದು ಮಾಪಿಳ್ಳೆಗಳು ಮೈಕಾಲ ಎಂದು ಕೊಂಕಣಿಗರು ಕೊಡಿಯಾಲ ಎಂದು ಕರೆಯುತ್ತಾರೆ. ಹೀಗೆ ಹಲವು ಭಾಷಿಗರು ಒಂದೇ ಸ್ಥಳವನ್ನು ಇಷ್ಟೊಂದು ಹೆಸರಿನಲ್ಲಿ ಕರೆಯುವುದು ಬೇರೆಲ್ಲಿಯೂ ಇರುವುದಿಲ್ಲ. ಇದು ಮಂಗಳೂರಿನ ವಿಶೇಷತೆ. ಕಡಲಿಗೆ ಎರಡು ಹೊಳೆಗಳು ಸೇರುವ ಸ್ಥಳವನ್ನು ಕೂಡುವ ಎಂದು ಹೇಳುತ್ತಾ ಬಳಿಕ ಕುಡ್ಲವಾಯಿತು ಎಂದು ಪೊಳಲಿ ಶೀನಪ್ಪ ಹೆಗ್ಡೆಯವರು ಹೇಳುತ್ತಾರೆ. ನದಿಗಳು ಕಡಲು ಸೇರುವ ಸ್ಥಳ ಕುಡ್ಲ ಎನ್ನಲಾಗುತ್ತದೆ. ನದಿಗಳು ಮಾತ್ರವಲ್ಲ ಎಲ್ಲ ಭಾಷಿಗರು ಕೂಡುವ ಸ್ಥಳ ಕುಡ್ಲವಾಗಿರುವುದು ತುಳುವರ ಹೆಮ್ಮೆ. ಕುಡ್ಲ ಕೂಡಿಸುವ ಸ್ಥಳವಾಗಿ ಬೇರ್ಪಡಿಸುವ ಸ್ಥಳವಾಗದಿರಲಿ ಎಂದು ಹಾರೈಸೋಣ.
Be the first to comment on "ಕೂಡಿಸುವ ಸ್ಥಳವಾಗಲಿ ಕುಡ್ಲ"