ಬಂಟ್ವಾಳ

ಅಪೂರ್ಣ ಕಾಮಗಾರಿ: ಎಸ್.ಡಿ.ಪಿ.ಐ 15 ದಿನಗಳ ಗಡುವು

ರಾಷ್ಟ್ರೀಯ ಹೆದ್ದಾರಿ 75ರ ರಾಜ ರಸ್ತೆ ಕೈಕಂಬ ಮತ್ತು ಬಿ.ಸಿ.ರೋಡಿನ ಇಕ್ಕೆಲೆಗಳಲ್ಲಿ ಅಗೆದು ಅರ್ಧದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ 15 ದಿನಗಳ ಗಡುವು ವಿಧಿಸಿದೆ.

ಜಾಹೀರಾತು

ಕೈಕಂಬದಲ್ಲಿ ಬಸ್‌ಬೇ ಹಾಗೂ ಅಗಲೀಕರಣದ ನೆಪದಲ್ಲಿ ರಸ್ತೆಯ ಎರಡೂ ಬದಿಯನ್ನು ಅಗೆದು ಹಾಕಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಇನ್ನು ಕೂಡಾ ಅಗೆದ ಹೊಂಡವನ್ನು ತುಂಬಿಸಿ ಸುಸ್ಥಿತಿಗೆ ತರುವ ಕೆಲಸ ಮಾಡಿರುವುದಿಲ್ಲ. ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಸರಿಸುಮಾರು ಒಂದು ವರ್ಷ ಸಮೀಪಿಸುತ್ತಿದೆ. ಬುಧವಾರ ಸುರಿದ ಮಳೆಗೆ ಇಲ್ಲಿನ ಅಂಗಡಿಗಳಿಗೆ ನೀರು ನುಗ್ಗಿ ಮತ್ತೊಂದು ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹಾಗೆಯೇ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ಅಗೆದು ಹಾಕಲಾಗಿದ್ದು ಇದರ ಕಾಮಗಾರಿ ಕೂಡಾ ಆಮೆಗತಿಯಲ್ಲಿ ಸಾಗುತ್ತಿದ್ದು ಪಾದಾಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಎರಡೂ ಕಾಮಗಾರಿಯನ್ನು ೧೫ ದಿನಗಳ ಒಳಗಾಗಿ ಪೂರ್ಣಗೊಳಿಸದಿದ್ದಲ್ಲಿ ಎಸ್‌ಡಿಪಿಐ ಸಾರ್ವಜನಿಕರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಕೆಲವು ಸಮಯದ ಹಿಂದೆ ಕೈಕಂಬದಲ್ಲಿ ಅಗೆದು ಹಾಕಲಾಗಿದ್ದ ರಸ್ತೆಯನ್ನು ಸುಸ್ಥಿತಿಗೆ ತಾರದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ತೆಗೆದ ಹೊಂಡಕ್ಕೆ ಮಣ್ಣು ತುಂಬಿಸಿದ್ದರೂ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ. ಇದೀಗ ಮಳೆಯಿಂದಾಗಿ ಮತ್ತೆ ಸಮಸ್ಯೆ ಉದ್ಭವಿಸಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಪುರಸಭಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ರಿಕ್ಷಾ ಯೂನಿಯನ್ ಅಧ್ಯಕ್ಷ ಯಾಕೂಬ್, ಎಸ್‌ಡಿಪಿಐ ಮುಖಂಡರಾದ ಇಸಾಕ್ ತಲಪಾಡಿ, ಬಶೀರ್ ಮದ್ದ, ನೌಶಾದ್ ಕಲಾಯಿ, ರಿಝ್ವಾನ್ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.