ಅನುಭವದಿಂದಲೇ ಆತ್ಮಜ್ಞಾನ. ಆತ್ಮದ ಅರಿವಿನಿಂದಲೇ ಅಧ್ಯಾತ್ಮದ ಹೊಳಪು ಗೋಚರವಾಗುತ್ತದೆ. ಗುರುತತ್ತ್ವವನ್ನು ಜಗತ್ತಿಗೆ ಸಾರಿ ಜ್ಞಾನನಿಧಿ ಅವಧೂತ ಸಂಪ್ರದಾಯದ ಭಗವಾನ್ ಶ್ರೀ ದತ್ತಾತ್ರೇಯರು ಪ್ರಕೃತಿಯನ್ನು ಗುರುವಾಗಿಸಿದವರು. ದತ್ತ ದೇವರು ಆಯ್ದ 24 ಗುರುಗಳಲ್ಲಿ ಸ್ತ್ರೀಯೂ ಓರ್ವಳು. ಶ್ರೀ ದತ್ತ ದೇವರ ಮಾತೆ ಸತಿ ಅನಸೂಯಾ ದೇವಿ ಸ್ತ್ರೀ ಸಂಕುಲಕ್ಕೆ ಮಾದರಿ. ತನ್ನ ತಪೋಬಲದಿಂದ ಅಸಾಧಾರಣಶಕ್ತಿ ಸಂಪನ್ನಳೆಂದು ತೋರಿಸಿಕೊಟ್ಟವರು. ಸ್ವಾರ್ಥದ ಪೊರೆಯನ್ನು ಕಳಚಿ ನಿಸ್ವಾರ್ಥದ ಹಾದಿಯಲ್ಲಿ ನಡೆಯಲು ಅನಸೂಯಾ ದೇವಿಯಂತೆ ನಾವೂ ದತ್ತನಿಗೆ ಶರಣಾಗಬೇಕು. ಸಾಂಸಾರಿಕ ಮತ್ತು ಅಧ್ಯಾತ್ಮಿಕ ರಂಗಗಳೆರಡನ್ನೂ ಸರಿದೂಗಿಸಿಕೊಂಡು ಜೀವನ ನಡೆಸಬೇಕು. ಸಮುದ್ರ ತನ್ನಲ್ಲಿ ಸೇರಿದ ಕಸ-ಕಲ್ಮಶಗಳನ್ನು ಹೊರಹಾಕುವಂತೆ ನಾವು ನಿತ್ಯ ಚಟುವಟಿಕೆಯಿಂದಿದ್ದು ನಮ್ಮಲ್ಲಿರುವ ಕಲ್ಮಶಗಳನ್ನು ಹೊರಹಾಕಬೇಕು. ಸಂಘಟಿತರಾಗಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದ ಮಹಿಳಾವಿಕಾಸ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸಾಮೂಹಿಕ ಶ್ರೀ ಸತ್ಯದತ್ತ ವೃತಪೂಜೆಯನ್ನು ನಡೆಸುವುದರೊಂದಿಗೆ ಶ್ರೀ ಸಂಸ್ಥಾನದ ಬೆಳವಣಿಗೆಯಲ್ಲೂ ಕೇಂದ್ರವು ತನ್ನನ್ನು ತೊಡಗಿಸಿಕೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ವತಿಯಿಂದ ಹಮ್ಮಿಕೊಂಡ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆಯ ಸಂದರ್ಭ ಆಶಿರ್ವಚನ ನೀಡಿದರು.
ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಗೌರವಾಧ್ಯಕ್ಷೆ ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು. ತಾರಾ ಸುಂದರ ರೈ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೆ ಸರ್ವಾಣಿ ಪದ್ಮನಾಭ ಶೆಟ್ಟಿ ಸಹಕರಿಸಿದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಮತ್ತು ಬಳಗದವರು ಶ್ರೀ ಸತ್ಯದತ್ತವ್ರತಪೂಜೆ ನೆರವೇರಿಸಿದರು.
ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
Be the first to comment on "ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ವತಿಯಿಂದ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆ"