ನಿಮ್ಗೆ ಅಮ್ಮನತ್ರ ಹೇಳ್ತೇನೆ

ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರುವುದೂ ಅಲ್ಲ, ಯಾವುದನ್ನು ಮಕ್ಕಳಿಗೆ ಒದಗಿಸಿಕೊಟ್ಟರೆ ಒಳ್ಳೆಯದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಲ್ಲಿ ಮುಖ್ಯ.

www.bantwalnews.com

  • ಮಕ್ಕಳ ಮಾತು
  • ಮೌನೇಶ ವಿಶ್ವಕರ್ಮ

ಮಂಗಳೂರಿನ ಹೋಟೆಲ್‌ವೊಂದರಲ್ಲಿ  ಪಾರ್ಟಿ ನಡೆಯುತ್ತಿತ್ತು. ರಾತ್ರಿ ಪಾರ್ಟಿಯಾಗಿದ್ದ ಕಾರಣ ಅಮಲು ಉಂಟುಮಾಡುವ ಮದ್ಯಗಳೂ ಪಾರ್ಟಿಯಲ್ಲಿ ಪಾಲುಪಡೆದಿದ್ದವು. ಮದ್ಯದಿಂದ ದೂರವಿರುವವರು ತಂಪು ಪಾನೀಯ ಕುಡಿದು ಹೊಟ್ಟೆ ತಂಪುಮಾಡಿಕೊಂಡಿದ್ದರು. ಮಕ್ಕಳ ಮಾತಿನ ಬದಲು, ಬಾರ್‌ನ ಮಾತು ಇಲ್ಲಿಯಾಕೆ ಬಂತು ಎಂದು ಯೋಚನೆ ಮಾಡ್ತಾ ಇದ್ದೀರಾ..? ಹೇಳ್ತೇನೆ ಕೇಳಿ.

ಪಾರ್ಟಿಗೆ ಒಬ್ಬರು ತಡವಾಗಿಯೇ ಬಂದರು. ತಡವಾಗಿ ಬರಬಾರದು ಎಂದು ಹೇಳುವವರು ಯಾರೂ ಇಲ್ಲವಾದ್ದರಿಂದ ಅವರು ತಡವಾಗಿ ಬಂದದ್ದು ತಪ್ಪೂ ಕೂಡ ಆಗಲಿಲ್ಲ. ಒಬ್ಬರೇ ಬಂದರೆ ಪರವಾಗಿರಲಿಲ್ಲ. 6 ವರ್ಷದ ತಮ್ಮ ಮಗಳನ್ನೂ ಪಾರ್ಟಿಗೆ ಕರೆದುಕೊಂಡು ಬಂದಿದ್ದರು.

ಮಂದ ಬೆಳಕಿನ ಆ ಕೊಠಡಿಯಲ್ಲಿ ಕುಳಿತುಕೊಂಡರು. ಅವರು ಆರ್ಡರ್ ಮಾಡಿದ ಪ್ರಕಾರ ಸಪ್ಲೇಯರ್  ಪಾನೀಯಗಳನ್ನು ತಂದಿರಿಸಿದರು.

ತಡವಾಗಿ ಬಂದ ವ್ಯಕ್ತಿ ಮದ್ಯದ ಬಾಟಲಿಯನ್ನು ತೆರೆದು ಗ್ಲಾಸಿಗೆ ಹೊಯ್ಯುತ್ತಿರುವಾಗಲೇ, ಅವರ ಪಕ್ಕದಲ್ಲಿ ಕುಳಿತಿದ್ದ ಮಗಳು, ಅಲ್ಲೇ ಇದ್ದ ಟ್ಯಿಶು ಪೇಪರ್ ಅನ್ನು ಮೂಗಿಗೆ ಒತ್ತಿ ಹಿಡಿಯುತ್ತಾ ॒ನಿಮ್ಗೆ ಅಮ್ಮನತ್ರ ಹೇಳ್ತೇನೆ.. ಎಂದು ಹೆದರಿಸಿದಳು. ಆದರೆ ಅದನ್ನು ಅವಳ ಅಪ್ಪ ಗಂಭೀರವಾಗಿಯೇ ಪರಿಗಣಿಸಲಿಲ್ಲ. ತಮಾಷೆ ಮಾಡುತ್ತಾ ಮಗಳಿಗಾಗಿ ಕೋಲ್ಡ್ ಡ್ರಿಂಕ್ಸ್ ತರಿಸಿದರು, ಸುಮಾರು ಒಂದು ಗಂಟೆಯಷ್ಟು ಹೊತ್ತು ಊಟಮಾಡಿ ಅಲ್ಲಿಂದ ತೆರಳಿದರು.

ಈ ಘಟನೆಯಲ್ಲಿ ಮಗುವಿನ ಮಾತನ್ನು ನಾವು ಗಂಭೀರವಾಗಿ ಪರಿಗಣಿಸಿದಾಗಲಷ್ಟೇ ಘಟನೆಯಲ್ಲಿ ಆಗಿರುವ ಏರುಪೇರುಗಳು ನಮ್ಮ ಗಮನಕ್ಕೆ ಬಂದೀತು. ಆ ಮಗುವಿಗೆ ಮದ್ಯ ಸೇವನೆ ಎಂಬುದು ಗೊತ್ತಿದೆ, ಆದರೆ ಆ ಅಪ್ಪನಿಗೆ ಗೊತ್ತಿಲ್ಲವೋ ಎಂಬುದು ಇಲ್ಲಿ ತರ್ಕಿಸಬೇಕಾದ ವಿಚಾರ. ಮದ್ಯ ಹಾಗೂ ದುಶ್ಚಟಗಳಿಂದ ಮಕ್ಕಳನ್ನು ದೂರವಿಡಿ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇಂತಹಾ ಘಟನೆಗಳಾದಾಗ ಮಕ್ಕಳು ಮಾನಸಿಕವಾಗಿ ಒಂದು ಬಗೆಯ ನೋವು ಅನುಭವಿಸುತ್ತಾರೆ.

ಮದ್ಯದ ಬಾಟಲಿಯನ್ನು ಕಂಡು ಆ ಮಗು ಮೂಗನ್ನು ಮುಚ್ಚಿಕೊಂಡು ವ್ಯಕ್ತಪಡಿಸುತ್ತಿದ್ದ ಪ್ರತಿರೋಧವೂ ಅದೇ ಬಗೆಯಲ್ಲಿತ್ತು. ಇಲ್ಲಿ ನಾವು ಮಕ್ಕಳನ್ನು ದುಶ್ಚಟಗಳಿಂದ ದೂರವಿಡುವ ಕಾರಣಕ್ಕೆ ಬಾರ್‌ಗೆ ಕರೆದುಕೊಂಡು ಬರಬೇಡಿ ಎಂದು ಮಾತ್ರ ಹೇಳುವುದಲ್ಲ. ಮಕ್ಕಳು ಬಾರ್‌ನ ವಿಚಿತ್ರ ಸ್ಮೆಲ್ ಅನ್ನು ಎಷ್ಟರ ಮಟ್ಟಿಗೆ ಸಹಿಸಿಕೊಂಡಾರು ಎನ್ನುವುದು ಕೂಡ ಇಲ್ಲಿ ಪ್ರಶ್ನೆ ಮಾಡಬೇಕಾದ, ಯೋಚಿಸಬೇಕಾದ ಸಂಗತಿ.

ಆದರೆ ದೊಡ್ಡವರಿಗೆ ಮಕ್ಕಳ ಸ್ಥಿತಿಗತಿ ಅಲ್ಲಿ ಅರ್ಥವಾಗುವುದೇ ಇಲ್ಲ. ಕನಿಷ್ಠ ತಮ್ಮ ಮಕ್ಕಳನ್ನಾದರೂ ಅರ್ಥಮಾಡಿಕೊಳ್ಳುವತ್ತ ಹೆತ್ತವರು ಹೆಜ್ಜೆ ಇಡಬೇಕು.  ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರುವುದೂ ಅಲ್ಲ, ಯಾವುದನ್ನು ಮಕ್ಕಳಿಗೆ ಒದಗಿಸಿಕೊಟ್ಟರೆ ಒಳ್ಳೆಯದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಲ್ಲಿ ಮುಖ್ಯ.

ಮಕ್ಕಳನ್ನು ಇಂತಹಾ ಘಟನೆಗಳು ಪ್ರತಿದಿನ ಕಾಡುತ್ತಿದ್ದರೂ, ಅವರು ಅದಕ್ಕೆ ಪ್ರತಿರೊಧ ವ್ಯಕ್ತಪಡಿಸುವ ಸಾಧ್ಯತೆ ತೀರಾ ಕಡಿಮೆ. ಅನೇಕ ಸನ್ನಿವೇಶಗಳಲ್ಲಿ ಅದಕ್ಕೆ ಅವಕಾಶ ಸಿಗದೇ ಇದ್ದರೆ, ಕೆಲವೊಮ್ಮೆ ಮಕ್ಕಳಿಗೆ ಆ ಧೈರ್ಯ ಇರುವುದೂ ಇಲ್ಲ. ಯಾಕೆಂದರೆ ಅಲ್ಲಿ ದೊಡ್ಡವರ ಒತ್ತಡ ಅಷ್ಟರಮಟ್ಟಿಗೆ ಇರುತ್ತದೆ.

ಇಂತಹಾ ಘಟನೆಗಳು ಆಗುವುದಕ್ಕೆ ನೇರವಾಗಿ ಮಕ್ಕಳ ಹೆತ್ತವರೇ ಕಾರಣ ಎಂಬುದು ನನ್ನ ಆರೋಪವಲ್ಲ. ಮಕ್ಕಳನ್ನು, ಮಕ್ಕಳ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಪರಿಣಾಮ ಈ ಬಗೆಯ ಸ್ಥಿತಿಯನ್ನು ನಾವು ಕಾಣುವಂತಾಗುತ್ತದೆ.

ಮಕ್ಕಳ ಮುಂದೆ ನಿರ್ಭಯವಾಗಿ ನೀರು ಸೇವಿಸಿದಷ್ಟು ಸಲೀಸಾಗಿ ಮದ್ಯ ಸೇವಿಸುವುದು, ಮದ್ಯವೇ ಶ್ರೇಷ್ಠ ಎಂಬರ್ಥದಲ್ಲಿ ಮಾತನಾಡುವುದೂ ತಪ್ಪು. ಇದು ಮಕ್ಕಳನ್ನು ದುಶ್ಚಟದತ್ತ ಆಕರ್ಷಿಸಲೂ ಬಹುದು. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ಮಕ್ಕಳ ಮನೋಬಲಗಟ್ಟಿಯಾಗುವ ವರೆಗೂ ಇಂತಹಾ ಘಟನೆಗಳಿಗೆ ಆಸ್ಪದ ಕೊಡುವುದು ಸರಿಯಲ್ಲ. ಒಟ್ಟಿನಲ್ಲಿ ನಮ್ಮ ಮಕ್ಕಳು ಮಾನಸಿಕವಾಗಿ ಗಟ್ಟಿಯಾಗುವ ಸನ್ನಿವೇಶಗಳನ್ನು ನಾವು ಸೃಷ್ಟಿಮಾಡೋಣ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ನಿಮ್ಗೆ ಅಮ್ಮನತ್ರ ಹೇಳ್ತೇನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*