ಹಳೇ ಕಟ್ಟಡಕ್ಕೆ ಕೊನೆಗಾಲ ಬಂತು

ಬದಲಾವಣೆಯ ಪರ್ವಕಾಲದಲ್ಲಿ ಹಳೇ ಕಟ್ಟಡಗಳು ಧರೆಗುರುಳಲಿವೆ. ಹೊಸ ಬಸ್ ಸ್ಟ್ಯಾಂಡ್ ಬರಲಿದೆ. ಇನ್ನೇನಿದ್ದರೂ ಹೊಸ ಲುಕ್.

ಅದೆಷ್ಟು ಮಂದಿ ಪ್ರತಿಭಾವಂತರಿಗೆ ಈ ಕಟ್ಟಡ ವೇದಿಕೆಯೊದಗಿಸಿದೆಯೋ, ತಾಲೂಕಿನ ಸಮಗ್ರ ಬದಲಾವಣೆಗೆ ಎಷ್ಟು ಚರ್ಚೆಗಳು, ವಾದ ವಿವಾದಗಳು ಇಲ್ಲಿ ನಡೆದಿದೆಯೋ, ಒಂದು ಕಟ್ಟಡಕ್ಕೆ 53 ವರ್ಷ. ಮತ್ತೊಂದಕ್ಕೆ 93. ಇನ್ನೊಂದಕ್ಕೆ 42. ಎಲ್ಲವೂ ಪ್ರೌಢಾವಸ್ಥೆಗೆ ತಲುಪಿವೆ. ಎಲ್ಲದರ ಕೊಠಡಿಯೊಳಗೆ ಪ್ರೌಢ ವಿಚಾರ, ವಿನಿಮಯಗಳು ಬಂಟ್ವಾಳ ತಾಲೂಕಿನ ಮಟ್ಟಿಗೆ ನಡೆದಿವೆ.

ಆದರೆ ಬದಲಾವಣೆ ಜಗದ ನಿಯಮ. ನಾವಿಂದು ಬದಲಾವಣೆಯ ಹೊಸ್ತಿಲಲ್ಲಿದ್ದೇವೆ. ಇಡೀ ಊರಿಗೆ ಊರೇ ಬದಲಾಗುತ್ತಿದೆ. ಬಿ.ಸಿ.ರೋಡ್ ಸುತ್ತಮುತ್ತ ಇದ್ದ ಪೊಲೀಸ್ ಸ್ಟೇಶನ್ ಗೆ ಹೊಸ ಕಟ್ಟಡ ಬಂತು. ಎಲ್ಲರೂ ಓಡಾಡಿಕೊಂಡಿದ್ದ ಕೋರ್ಟು ಆವರಣಕ್ಕೆ ಕಂಪೌಂಡ್ ಬಂತು. ಅಲ್ಲೊಂದು ಕಟ್ಟಡ ನಿರ್ಮಾಣವಾಯಿತು. ತಾಲೂಕು ಪಂಚಾಯಿತಿಗೆ ಹೊಸ ವಿನ್ಯಾಸದ ಸ್ವಂತ ಕಚೇರಿಯಾಯಿತು. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಗಳಂಥ ಸರಕಾರಿ ಕಚೇರಿಗಳೆಲ್ಲವೂ ಒಂದೇ ಸೂರಿನಡಿ ಮಿನಿ ವಿಧಾನಸೌಧ ಎಂಬ ಹೆಸರಲ್ಲಿ ಸೇರಲಿವೆ. ಅಲ್ಲಿಗೆ ಅಂದಿನ ಬಿ.ಸಿ.ರೋಡ್ ಗತಕಾಲದ ಪುಟಕ್ಕೆ ಸೇರಿದಂತಾಯಿತು. ಇನ್ನೇನಿದ್ದರೂ ಹೊಸ ಲುಕ್.

ಅದೆಷ್ಟು ಬಾರಿ ನಮ್ಮ ಮಹಾಬಲೇಶ್ವರ ಹೆಬ್ಬಾರ ಸರ್ ಇಲ್ಲಿ ಕಾರ್ಯಕ್ರಮ ನಿರ್ವಹಿಸಿದ್ದಾರೋ ಏನೋ, ಲೆಕ್ಕವಿಲ್ಲದಷ್ಟು ಸಾಂಸ್ಕೃತಿಕ , ಸಾಹಿತ್ಯಿಕ ಚಟುವಟಿಕೆಗಳಿಗೆ ಬಿ.ಸಿ.ರೋಡಿನ ಹಳೇ ಬಿ.ಡಿ.ಓ ಹಾಲ್ ವೇದಿಕೆಯಾಗಿತ್ತು. ಈಗಲೇ ಆ ಜಾಗದಲ್ಲಿ ಕಾರ್ಯಕ್ರಮಗಳು ನಡೆಯುವುದಿಲ್ಲ. ಪಕ್ಕದಲ್ಲಿದ್ದ ಶೌಚಾಲಯ ಗಬ್ಬೆದ್ದು ನಾರುತ್ತದೆ. ಇಂತಿಪ್ಪ ಹೊತ್ತಿನಲ್ಲೇ ಇಡೀ ಬಿಲ್ಡಿಂಗ್ ಕೆಡಹಿ, ಅಲ್ಲೊಂದು ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಯೋಜನೆಯೊಂದನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೈಗೊಂಡಿದ್ದಾರೆ.

ಅಂಥ ಹೊತ್ತಿನಲ್ಲೇ ಬಿ.ಸಿ.ರೋಡಿನಲ್ಲಿರುವ ತಾಲೂಕು ಪಂಚಾಯಿತಿ ಹಳೇ ಕಟ್ಟಡಕ್ಕೂ ಅವಸಾನದ ಕಾಲ ಬಂದಿದೆ. ಜೊತೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯೂ ಕೆಲ ತಿಂಗಳುಗಳಲ್ಲಿ ನೆಲಕ್ಕುರುಳಲಿವೆ.

ಬಿ.ಸಿ.ರೋಡ್ ಗೆ ಫ್ಲೈಓವರ್ ನಿರ್ಮಾಣವಾದ ಮೇಲೆ (ಅದೂ ಅಂಕು ಡೊಂಕಿನ) ಇಡೀ ಪೇಟೆಯ ಚಂದವೇ ಹೋಯಿತು ಎನ್ನುವವರಿದ್ದಾರೆ. ಒಂದು ರೀತಿಯಲ್ಲಿ ಅದು ಹೌದು ಎನ್ನಬಹುದು. ಎಲ್ಲವೂ ಅಸ್ತವ್ಯಸ್ತ. ಹೀಗಿರುತ್ತಲೇ ಬಿ.ಸಿ.ರೋಡ್ ಬಸ್ ನಿಲ್ದಾಣ ಎಲ್ಲಾಗಬೇಕು ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದ್ದವು. ಮೊನ್ನೆ ಮೊನ್ನೆವರೆಗೆ ನಾಲ್ಕು ಮಾರ್ಗ ಸೇರುವ ನಾರಾಯಣ ಗುರು ವೃತ್ತದ ಬಳಿ ಬಸ್ ನಿಲ್ದಾಣ ಆಗುತ್ತದೆ ಎಂಬ ಮಾತಿತ್ತು. ಈಗ ಮಂಗಳೂರು ಬಸ್ ನಿಲ್ಲುವ ಪಕ್ಕದಲ್ಲೇ ಇರುವ ಹಾಗೂ ಸಾರ್ವಜನಿಕರು ಓಡಾಡುವ ಹಾಗೂ ಕೋರ್ಟು, ಕಚೇರಿಗಳು ಸನಿಹದಲ್ಲೇ ಇರುವ ಕೇಂದ್ರ ಸ್ಥಾನ ತಾಲೂಕು ಪಂಚಾಯಿತಿ ಹಳೇ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣ ಇರುವ ಜಾಗದಲ್ಲೇ ಹೊಸ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಖುದ್ದು ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ವೇಗ ಪಡೆದುಕೊಳ್ಳುತ್ತಿದೆ.

ಬುಧವಾರ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಒ ಸಿಪ್ರಿಯಾನ್ ಮಿರಾಂದ, ಸರ್ವೇ ಇಲಾಖೆ ಅಧಿಕಾರಿಗಳ ಸಮಕ್ಷಮ ಟೇಪು ಹಿಡಿದು ಅಳತೆ ಮಾಡಲಾಗುತ್ತಿತ್ತು.

ಬಿಡಿಒ ಹಾಲ್ ಕತೆ

ಬಿಡಿಒ ಹಾಲ್ ಅಂದರೆ ಬ್ಲಾಕ್ ಡೆವಲಪ್ ಮೆಂಟ್ ಆಫೀಸರ್ ಕಚೇರಿಯ ಹಾಲ್. ವಾಸ್ತವವಾಗಿ ಇದು ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಭವನ. ಸಾರ್ವಜನಿಕರ ಮಾತಿನಲ್ಲಿ ಬಿಡಿಒ ಹಾಲ್. ಮಹಾತ್ಮಾ ಗಾಂ ಜನ್ಮಶತಾಬ್ಧಿ ಭವನವನ್ನು ಅಂದಿನ ಮೈಸೂರು ಸರಕಾರದ ಸಹಕಾರ ಸಚಿವ ಎ.ಶಂಕರ ಆಳ್ವ ಉದ್ಘಾಟಿಸಿದ್ದರು. ಶಾಸಕ ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. 1978ನೇ ಇಸವಿ, ಜೂನ್ 11ರಂದು ಉದ್ಘಾಟನೆಗೊಂಡಿದ್ದ ಈ ಕಟ್ಟಡ ಬಂಟ್ವಾಳ ತಾಲೂಕು ಅಭಿವೃದ್ಧಿ ಮಂಡಳಿ ಸುಪರ್ದಿಯಲ್ಲಿತ್ತು. 1970ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಆಹಾರ ಸಚಿವ ವಿಠಲದಾಸ ಶೆಟ್ಟಿ ನೆರವೇರಿಸಿದ್ದರು. ಆಗ ಎಂಎಲ್ ಎ ಆಗಿದ್ದವರು ಕೆ.ಲೀಲಾವತಿ ರೈ. ತಾಲೂಕು ಪಂಚಾಯತ್ (ಹಿಂದಿನ ಬೋಡ್ ) ಮೀಟಿಂಗ್ ಗಳು, ಬಂಟ್ವಾಳ, ಬಿ.ಸಿ.ರೋಡ ನ ಸಂಘ, ಸಂಸ್ಥೆಗಳ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು, ಸಣ್ಣಪುಟ್ಟ ಸಭೆ, ಸಮಾರಂಭಗಳು, ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಸಹಿತ ಪ್ರಮುಖ ಅಧಿಕಾರಿಗಳು ಭೇಟಿಯಿತ್ತಾಗ ನಡೆಸುವ ಮೀಟಿಂಗ್ ಗಳು, ರಾಜಕೀಯ ಸಭೆಗಳು, ಚಟುವಟಿಕೆಗಳು, ಸಾಹಿತ್ಯ ಸಮಾಲೋಚನೆಗಳು, ಸಹಕಾರಿ ಸಂಘಗಳ ಸಹಿತ ಪ್ರಮುಖ ಸಂಘಟನೆಗಳ ರೂಪುರೇಷೆಗಳ ನಿರ್ಮಾಣ.. ಹೀಗೆ ಬಂಟ್ವಾಳ ತಾಲೂಕಿನ ಸಮಗ್ರ ಬೆಳವಣಿಗೆ, ಜನರ ಆಸೆ, ಆಕಾಂಕ್ಷೆಗಳ ಈಡೇರಿಕೆಗೆ ವೇದಿಕೆಯನ್ನು ಒದಗಿಸಿದ್ದು ಇದೇ ಹಾಲ್.

ವರ್ಷಗಳು ಉರುಳಿದಂತೆ ಎಲ್ಲ ಕಚೇರಿ, ಸಂಘ, ಸಂಸ್ಥೆಗಳು ತಮ್ಮದೇ ಮಿನಿ ಹಾಲ್ ಗಳನ್ನು ರೂಪಿಸಿಕೊಂಡ ಮೇಲೆ ಇಲ್ಲಿ ಚಟುವಟಿಕೆಗಳು ನಿಂತುಹೋದವು. ಕಳೆದ ಕೆಲ ವರ್ಷಗಳಿಂದ ಈ ಹಾಲ್ ನಲ್ಲಿ ಆಧಾರ್ ನೋಂದಣಿ ಕಾರ್ಯಗಳು ನಡೆಯಲು ಆರಂಭಿಸಿದ ಮೇಲೆ ಇಲ್ಲಿನ ಕುರ್ಚಿ ಮೇಜುಗಳು, ಮೈಕುಗಳಲ್ಲಿ ಸ್ವಾಗತ, ವಂದನೆಗಳ ಸದ್ದು ಅಡಗಿಹೋಯಿತು.

ತಾಲೂಕು ಬೋರ್ಡು ಕಚೇರಿ

ಈ ಹಾಲ್ ಪಕ್ಕದಲ್ಲೇ ಇದ್ದ ತಾಲೂಕು ಬೋಡ್  ಕಚೇರಿ ಹಾಲ್ ಗಿಂತ ಹಳೇಯದ್ದು. ಕಟ್ಟಡವನ್ನು ಭಾರತ ಸರಕಾರದ ಸಂಸದೀಯ ಕಾರ್ಯದರ್ಶಿ ದೊಡ್ಡ ತಮ್ಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಗಿನ ಎಂಎಲ್ ಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಕೆ.ಕೆ.ಶೆಟ್ಟಿ ವಹಿಸಿದ್ದರು. 1964ರ ಮೇ 19ರಂದು ಈ ಕಟ್ಟಡ ಲೋಕಾರ್ಪಣೆಗೊಂಡಿತ್ತು. ಇದೇ ಕಟ್ಟಡದ ಶಂಕುಸ್ಥಾಪನೆಯನ್ನು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ 1962ರ ಅಕ್ಟೋಬರ್ 13ರಂದು ನೆರವೇರಿಸಿದ್ದರು. ಅಂದು ತಾಲೂಕು ಅಭಿವೃದ್ಧಿ ಮಂಡಳಿ (ತಾಲೂಕು ಬೋಡ್ ) ಪ್ರಭಾವಶಾಲಿಯಾಗಿತ್ತು. ತಾಲೂಕು ಪಂಚಾಯಿತಿ ಕಚೇರಿ ಇನ್ನೊಂದು ಜಾಗಕ್ಕೆ ಶಿಫ್ಟ್ ಆದ ಬಳಿಕ ಹಾಗೂ ಮಿನಿ ವಿಧಾನಸೌಧ ನಿರ್ಮಾಣ ಆರಂಭಗೊಂಡ ಬಳಿಕ ಇಲ್ಲಿ ಕಂದಾಯ ಇಲಾಖೆಯ ಆಹಾರ ಶಾಖೆ, ಸಾಮಾಜಿಕ ಅರಣ್ಯ ಇಲಾಖೆ, ನಾಡಕಚೇರಿಯಂಥ ಕೆಲ ಕಚೇರಿಗಳಷ್ಟೇ ಉಳಿಸಲಾಯಿತು. ಈಗ ಬಿಡಿಒ ಹಾಲ್ ನ ಒಂದು ಬದಿಯಲ್ಲಿ ಪ್ರೆಸ್ ಕ್ಲಬ್ ಕಚೇರಿ ಇದೆ. ಎ.ರುಕ್ಮಯ ಪೂಜಾರಿ ಅವರು ಶಾಸಕರಾಗಿದ್ದ ಸಂದರ್ಭ ಅವರ ಕಚೇರಿ ಇದೇ ಕಟ್ಟಡದಲ್ಲಿತ್ತು. ಅವರ ಬಳಿಕ ಕೆ.ಎಂ.ಇಬ್ರಾಹಿಂ, ಪದ್ಮನಾಭ ಕೊಟ್ಟಾರಿಯವರ ಕಚೇರಿಗಳೂ ಇಲ್ಲೇ ಕಾರ್ಯಾಚರಿಸಿದವು. ನಾಗರಾಜ ಶೆಟ್ಟರ ಕಚೇರಿಯೂ ಇಲ್ಲೇ ಇತ್ತು. ರುಕ್ಮಯ ಪೂಜಾರಿ, ಕೆ.ಎಂ.ಇಬ್ರಾಹಿಂ ಮತ್ತು ಕೊಟ್ಟಾರಿ ಅವರು ಇಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು.

ನೂರರ ತಲುಪದ ಸಬ್ ರಿಜಿಸ್ಟ್ರಾರ್ ಕಚೇರಿ

ತಾಲೂಕು ಪಂಚಾಯಿತಿ ಕಚೇರಿ ಪಕ್ಕದಲ್ಲೇ ಇರುವ ಈ ಕಟ್ಟಡದ ವಯಸ್ಸು 93. ಬಹುಷ ಶತಮಾನ ಪೂರೈಸುವ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶ ಇದಕ್ಕಿಲ್ಲ. ಇದು ಬಂಟ್ವಾಳ ಸಬ್ ರಿಜಿಸ್ಟ್ರಾರ್ ನ ಈಗಿನ ಕಚೇರಿ. ಇದೂ ಕೆಲವೇ ತಿಂಗಳುಗಳಲ್ಲಿ ನೆಲಕಚ್ಚಲಿದೆ. ಹೊಸದಾಗಿ ನಿರ್ಮಿಸಲಾದ ಮಿನಿ ವಿಧಾನಸೌಧದ ಮೊದಲ ಅಂತಸ್ತಿಗೆ ಕಚೇರಿ ಶಿಫ್ಟ್ ಆದರೆ, ಈಗ ಕಟ್ಟಡವಿರುವ ಜಾಗ ಪಾರ್ಕಿಂಗ್ ಗೆಂದು ಉಪಯೋಗವಾಗಲಿದೆ.

ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಟ್ಟಡ ನಿರ್ಮಾಣಗೊಂಡದ್ದು 1924ರಲ್ಲಿ. ಸಬ್ ರಿಜಿಸ್ಟ್ರಾರ್ ಕಚೇರಿ 1865ನೇ ಇಸವಿಯಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯವಿದ್ದಾಗ ಆರಂಭಗೊಂಡಿತ್ತು. ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ಕಾರ್ಯಾಚರಿಸಿದ್ದ ಸಬ್ ರಿಜಿಸ್ಟ್ರಾರ್ ಕಚೇರಿ, 1921ರ ನೇತ್ರಾವತಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಯಿತು. ಬಳಿಕ 1924ರಲ್ಲಿ ಹೊಸ ಕಟ್ಟಡ ನಿರ್ಮಿಸಿ, ಕಚೇರಿಯನ್ನು ವರ್ಗಾಯಿಸಲಾಯಿತು. ಈಗಲೂ ಅದೇ ಕಚೇರಿಯಲ್ಲಿ ನೋಂದಣಿ ನಡೆಯುತ್ತಿದೆ. ಆದರೆ ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗುವ ಕಾರಣ ಈ ಕಟ್ಟಡದ ಆಯಸ್ಸು ಮುಗಿಯುತ್ತಾ ಬಂದಿದೆ.

ಈಗ ಧರೆಗುರುಳಲು ಸಿದ್ಧವಾಗುತ್ತಿರುವ ಕಚೇರಿಗಳು ಇವು. ತಾಲೂಕು ಪಂಚಾಯಿತಿ (ಹಿಂದಿನ ತಾಲೂಕು ಅಭಿವೃದ್ಧಿ ಮಂಡಳಿ ) ಹಳೇ ಕಟ್ಟಡ. ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ. ಇದರ ಜೊತೆಗೆ ಜೇನು ವ್ಯವಸಾಯ ಮಂಡಳಿಯ ಕಟ್ಟಡ. ಇವುಗಳಲ್ಲಿ ಅಳಿದುಳಿದ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗಲಿವೆ. ಸಬ್ ರಿಜಿಸ್ಟ್ರಾರ್ ಕಚೇರಿಯ ಜಾಗ ಪಾರ್ಕಿಂಗ್ ಗೆ ಮೀಸಲಾದರೆ ಉಳಿದ ಕಟ್ಟಡದ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸುಮಾರು 58 ಸೆಂಟ್ಸ್ ಜಾಗದಲ್ಲಿ ಮತ್ತೊಂದು ಬದಲಾವಣೆಗೆ ಬಿ.ಸಿ.ರೋಡ್ ಸಜ್ಜಾಗಲಿದೆ.

ನನ್ನ ಶಾಸಕತ್ವದ ಅವಯಲ್ಲಿ ಹಳೇ ತಾಲೂಕು ಬೋಡ್  ಕಚೇರಿಯ ಕಟ್ಟಡದಲ್ಲಿ ಕಚೇರಿ ಇತ್ತು. 80, 90ರ ದಶಕದ ಅವಯಲ್ಲಿ ಸಾರ್ವಜನಿಕರ ದು:ಖ, ದುಮ್ಮಾನ ಆಲಿಸಲು ವೇದಿಕೆಯೊದಗಿಸಿದ್ದು ಇದೇ ಕಟ್ಟಡ ಎನ್ನುತ್ತಾರೆ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ.

ತಾಲೂಕಿನ ಸಾಹಿತ್ಯ, ಸಾಂಸ್ಕೃತಿಕ ಮನಸುಗಳಿಗೆ ವೇದಿಕೆಯೊದಗಿಸಿದ್ದು ಹಳೇ ಬಿಡಿಒ ಹಾಲ್. ಅದರೊಂದಿಗೆ ಹಳೇ ತಲೆಮಾರಿನ ಜನರಿಗೆ ಭಾವನಾತ್ಮಕ ನಂಟಿದೆ. ಅಂದಿನ ಕಾಲದ ಹಲವು ಆಡಳಿತಾತ್ಮಕ ನಿರ್ಧಾರಗಳೂ ಇದೇ ಹಾಲ್ ನಲ್ಲಿ ನಡೆಯುತ್ತಿದ್ದವು ಎನ್ನುತ್ತಾರೆ ನಿವೃತ್ತ ಕಂದಾಯ ಅಧಿಕಾರಿ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಬಿ.ತಮ್ಮಯ್ಯ.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಹಳೇ ಕಟ್ಟಡಕ್ಕೆ ಕೊನೆಗಾಲ ಬಂತು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*