- ಉಗ್ರರೊಂದಿಗೆ ಕಾದಾಡಿದ ಮುಡಿಪುವಿನ ಸಂತೋಷ್ ನಮ್ಮ ಜಿಲ್ಲೆಯ ಹೆಮ್ಮೆ
- www.bantwalnews.com ಕವರ್ ಸ್ಟೋರಿ by ದಿನೇಶ್ ನಾಯಕ್ ತೊಕ್ಕೊಟ್ಟು
ಆ ಯೋಧನಿಗೆ ಇನ್ನೂ ದೇಶರಕ್ಷಣೆಯ ಹುಮ್ಮಸ್ಸು. ಗಾಯಗೊಂಡು ಮರಳಿದ್ದರೂ ಹೆತ್ತಬ್ಬೆಗೆ ಮಗನ ಪರಾಕ್ರಮದ ಬಗ್ಗೆ ಹೆಮ್ಮೆ. ಭಾರತ ಮಾತಾ ಕೀ ಜೈ ಎಂಬ ಘೋಷಣೆಯನ್ನು ಅಕ್ಷರಶ: ಪಾಲಿಸಿದವರು ಇವರು. ಹೆಸರು: ಸಂತೋಷ ಕುಮಾರ್. ವಯಸ್ಸು 33.
ನಿಮಗೆ ಸರ್ಜಿಕಲ್ ಸ್ಟ್ರೈಕ್ ನೆನಪಿರಬೇಕಲ್ಲ, ಜನಸಾಮಾನ್ಯರು ಮರೆತರೂ ಸೈನಿಕರಂತೂ ಮರೆಯೋದಿಲ್ಲ. ಇದಕ್ಕೆ ಪ್ರತಿಯಾಗಿ ಪಾಕ್ ಉಗ್ರರು ಕುಪ್ ಹಾರ್ ನಲ್ಲಿ ದಾಳಿ ನಡೆಸಿದ್ದರು. ಕಳೆದ ಅಕ್ಟೋಬರ್ 12ರಂದು ಜಮ್ಮುವಿನ ಕುಪ್‌ಹಾರ್‌ಹಾದಲ್ಲಿ ಪೆಟ್ರೋಲಿಂಗಲ್ಲಿ ಇದ್ದ ಭಾರತೀಯ ಯೋಧರ ಮೇಲೆ ಪಾಕ್ ಪ್ರೇರಿತ 7 ಉಗ್ರರು ದಾಳಿ ನಡೆಸಿದ್ದರು. ಆ ಸಂದರ್ಭ, ವೈರಿಗಳ ನಾಲ್ಕು ಗಉಂಡುಗಳಿಗೆ ಎದೆಕೊಟ್ಟು, ತನ್ನಲ್ಲಿದ್ದ ರೈಫಲ್ ನಲ್ಲೇ ಉಗ್ರರ ಕೊಂದು ಮುಗಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪಿನ ವೀರ ಜವಾನ. ಅದಾಗಿ ಐದು ತಿಂಗಳ ಬಳಿಕ ಈಗ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸೆಪ್ಟೆಂಬರ್ 29ರಂದು ಭಾರತದ ಸೈನಿಕರು ವೈರಿ ಪಾಕಿಸ್ಥಾನದ ನೆಲದಲ್ಲೇ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದುರುಳಿಸಿದ್ದರು.ಇದರ ಪ್ರತೀಕಾರ ತೀರಿಸಲು ಪಾಕಿಸ್ಥಾನ ಬೆಂಬಲಿತ 7 ಉಗ್ರರು 2016ನೇ ಒಕ್ಟೋಬರ್ 12ರಂದು ಜಮ್ಮುವಿನ ಕುಪ್‌ಹಾರ್‌ಹಾ ಗಡಿಭಾಗದ ವಿದ್ಯಾರ್ಥಿಗಳ ಹಾಸ್ಟೆಲ್‌ನ ಬಹುಮಹಡಿ ಕಟ್ಟಡವನ್ನು ಆಕ್ರಮಿಸಿ ಅವಿತು ಕುಳಿತಿದ್ದರು. ಪ್ರತೀಕಾರ ತೀರಿಸಲು ಉಗ್ರರು ಆಕ್ರಮಣ ನಡೆಸುವ ಮಾಹಿತಿ ಇದ್ದುದರಿಂದ ಹಾಸ್ಟೆಲಿನ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಅದಾಗಲೇ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಸಂತೋಷ್ ತನ್ನ ಸಹೋದ್ಯೋಗಿ ಇತರ ಆರು ಸೈನಿಕರ ಜೊತೆಗೂಡಿ ಕುಪ್‌ಹಾರ್‌ಹಾ ಪ್ರದೇಶಕ್ಕೆ ಪೆಟ್ರೋಲಿಂಗ್ ನಡೆಸಲು ಹೋಗಿದ್ದಾರೆ. ಹಾಸ್ಟೆಲ್‌ನಲ್ಲಿ ಅವಿತು ಕುಳಿತಿದ್ದ 7 ಉಗ್ರರು ಸಂತೋಷ್ ನೇತೃತ್ವದ ಭಾರತೀಯ ಯೋಧರ ತಂಡದ ಮೇಲೆ ಗುಂಡಿನ ಮಳೆಗೈದಿದ್ದಾರೆ. ಸಂತೋಷ್ ತಂಡ ಮಾಡು ಇಲ್ಲವೆ ಮಡಿ ಎಂಬ ನಿರ್ಣಯ ತಳೆದು ತಮ್ಮಲ್ಲಿದ್ದ ರೈಫಲ್‌ಗಳಿಂದಲೆ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಕಟ್ಟಡದ ಮಹಡಿಯಲ್ಲಿ ಅವಿತು ಕುಳಿತು ಗುಂಡು ಹೊಡೆಯುತ್ತಿದ್ದ ಉಗ್ರರ ನಿಶಾನೆಗೆ ಸಂತೋಷ್ ಜತೆಗಿದ್ದ ಬಂಗಾಳದ ಯೋಧ ಬಿಸ್ವಾಸ್ ಅವರು ಮೊದಲ ಬಲಿದಾನ ನೀಡುತ್ತಾರೆ. ಮತ್ತೆ ಪ್ರತಿದಾಳಿ ನಡೆಸಲು ಸಂತೋಷ್ ಅವರ ಟೀಮ್ ಕಟ್ಟಡದ ಒಳ ನುಗ್ಗಿ ಮೊದಲ ಮಹಡಿ ತಲುಪುತ್ತಿದ್ದಂತೆ ಕಟ್ಟಡದ ಕೋಣೆಯಿಂದ ಬಂದ ಎರಡು ಗುಂಡುಗಳು ಸಂತೋಷ್‌ರ ಬಲ ತೊಡೆ ಒಳಗೆ ನುಸುಳುತ್ತದೆ. ವಿಪರೀತ ನೋವನ್ನು ಸಹಿಸಿಕೊಂಡೆ ಮತ್ತೆ ಅವರು ಕಟ್ಟಡದ ಅಂತಸ್ತುಗಳನ್ನು ಏರಿದ್ದಾರೆ. ಗುಂಡು ತಗಲಿದ್ದ ಕಾಲಿನಿಂದಲೇ ಮೊದಲ ಅಂತಸ್ತಿನ ಕೋಣೆಯೊಳಗೆ ಹೋಗಿ ಮತ್ತೊಂದು ಕೋಣೆಯಲ್ಲಿ ಫೈರಿಂಗ್ ನಡೆಸುತ್ತಿದ್ದ ಉಗ್ರನ ತಲೆಗೆ ಗುಂಡಿಕ್ಕಿ ಹೊಡೆದುರುಳಿಸುತ್ತಾರೆ. ಮತ್ತೆ ಕೋಣೆಯಿಂದ ಹೊರಬಂದು ಮೇಲಕ್ಕೆ ಹೋಗಲು ಮೆಟ್ಟಿಲೇರುವಾಗ ಉಗ್ರರು ಹಾರಿಸಿದ ಎರಡು ಗುಂಡುಗಳು ನೇರವಾಗಿ ಬಂದು ಸಂತೋಷ್ ಅವರ ಬಲ ಎದೆಭಾಗಕ್ಕೆ ನುಸುಳಿದ ಪರಿಣಾಮ ನೋವು ಸಹಿಸಲಾರದೆ ಪ್ರಜ್ನೆ ತಪ್ಪಿ ಕೆಳಕ್ಕುರುಳುತ್ತಾರೆ. ನಂತರ ಕಟ್ಟಡವನ್ನು ಪೂರ್ಣಪ್ರಮಾಣದಲ್ಲಿ ವಶಕ್ಕೆ ತೆಗೆದ ಭಾರತೀಯ ಶಸ್ತ್ರಸಜ್ಜಿತ ಸೈನಿಕರು ಒಕ್ಟೋಬರ್ 14ರ ತನಕ ಕಾರ್ಯಾಚರಣೆ ನಡೆಸಿ ಮೂರು ಉಗ್ರರನ್ನು ಹೊಡೆದುರುಳಿ, ಮೂವರು ಉಗ್ರರನ್ನು ಕೊಲ್ಲುತ್ತಾರೆ.
ಸಂತೋಷ್ ಜೊತೆಯಿದ್ದ ಉತ್ತರ ಪ್ರದೇಶದ ಗ್ಯಾನೇಂದ್ರ, ಮಹಾರಾಷ್ಟ್ರದ ಅರ್ಜುನ್‌ರಾಜ್,ಹಾಸನದ ಮಂಜುನಾಥ್ ನಾಯ್ಕ್ ಸೇರಿ ನಾಲ್ವರು ಯೋಧರು ವೀರ ಮರಣವನ್ನಪ್ಪಿದ್ದರೆ, ಅಹಮದಾಬಾದ್‌ನ ಯೋಧ ವಿಕೇಶ್ ಸೋಲಂಕಿ ಅವರ ತಲೆಯ ಭಾಗಕ್ಕೆ ಗುಂಡು ಹೊಕ್ಕಿದ್ದು ಅದು ನರದಲ್ಲೇ ಸಿಲುಕಿದ್ದು ಹೊರತೆಗೆಯಲು ಸಾಧ್ಯವಾಗದೆ ಇಂದಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾರು ಈ ಸಂತೋಷ್
ಕಕ್ಕೆಪದವಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಹಿರಿಯ ಏಕೈಕ ಪುತ್ರನಾಗಿರುವ ಸಂತೋಷ್ ಕುಮಾರ್ ೭ ವರುಷದ ಬಾಲ್ಯದಲ್ಲೇ ತಂದೆಯನ್ನು ಕಳಕೊಂಡಿದ್ದರು. ನಂತರದ ದಿವಸಗಳಲ್ಲಿ ತಾಯಿ ವಿಮಲಾ ಅವರೇ ಬೀಡಿ ಕಟ್ಟಿ ಸಂತೋಷ್ ಮತ್ತು ಕಿರಿಯ ಮಗಳು ಸೌಮ್ಯಲತಾಲನ್ನು ಸಾಕಿ ವಿದ್ಯಾಭ್ಯಾಸ ನೀಡಿದ್ದಾರೆ. ಮುಡಿಪುವಿನ ಅಜ್ಜಿ ಮನೆಯಲ್ಲೇ ಬೆಳೆದ ಸಂತೋಷ್ ಮುಡಿಪು ಸರಕಾರಿ ಕಾಲೇಜಿನಲ್ಲೇ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ. ಚಿಕ್ಕಮ್ಮನ ಮಗ(ಅಣ್ಣ) ಕಿಶೋರ್ ಅದಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದು ಸಂತೋಷ್ ಅವರೂ ಸೇನೆ ಸೇರಲು ಪ್ರೇರೇಪಣೆಯಾಯಿತು. 2003 ರಲ್ಲಿ ಸಂತೋಷ್ ಸೇನೆಗೆ ಭರ್ತಿಯಾದರು. 15 ವರುಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ದೇಶದ ವಿವಿದೆಡೆ ಉಗ್ರರ ವಿರುದ್ಧ ನಡೆದ ೧೦ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ತನ್ನನ್ನು ತೊಡಗಿಸಿದ್ದಾರೆ. ಸೇನೆಯಲ್ಲಿ ಮುಂಭಡ್ತಿ ಪಡೆದು ಮತ್ತಷ್ಟು ವರುಷಗಳ ಕಾಲ ಸೇವೆಗೈಯಲು ಬಿಹಾರದ ನಲಂದ ವಿ.ವಿಯಲ್ಲಿ ಪದವಿ ಶಿಕ್ಷಣವನ್ನೂ ಮುಗಿಸಿದ್ದರು. ಕಳೆದ ಮೂರು ವರುಷಗಳ ಹಿಂದಷ್ಟೇ ಶಿಕ್ಷಕಿ ಶ್ರೀಲತಾ ಅವರನ್ನು ವಿವಾಹವಾಗಿದ್ದರು. ಇದೀಗ ಅವರ ಬಲ ಕಾಲುಗಳು ಮತ್ತು ಎದೆಭಾಗಕ್ಕೆ ಗುಂಡುಗಳು ಹೊಕ್ಕಿರುವುದರಿಂದ ದೇಹ ಜರ್ಝರಿತವಾಗಿದೆ. ಮತ್ತೆ ಸೇನೆಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟ .
ಕುಪ್‌ಹಾರ್‌ಹಾದಲ್ಲಿ ನಡೆದ ಉಗ್ರರ ದಾಳಿಯಿಂದ ಗುಂಡು ತಗುಲಿ ಪ್ರಜ್ನಾಹೀನ ಸ್ಥಿತಿಯಲ್ಲಿ ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ್ ಅವರು ಯವುದೇ ಕಾರಣಕ್ಕೂ ತಾಯಿ ಮತ್ತು ತಂಗಿಗೆ ನಡೆದಿರುವ ವಿಚಾರವನ್ನು ತಿಳಿಸಿಯೇ ಇರಲಿಲ್ಲ. ಬದಲಾಗಿ ಮುಡಿಪುವಿನ ಆತ್ಮೀಯ ಸ್ನೇಹಿತ ವರದ್‌ರಾಜ್ ಅವರಿಗೆ ನಡೆದಿದ್ದ ವಿಚಾರವನ್ನು ತಿಳಿಸಿದ್ದು ಪ್ರಾಣಪಾಯ ಸಂಭವಿಸಿದರೆ ಮಾತ್ರ ಮನೆಮಂದಿಗೆ ವಿಚಾರ ತಿಳಿಸುವಂತೆ ಸೂಚಿಸಿದ್ದರಂತೆ. 5 ತಿಂಗಳ ದೀರ್ಘಾವಧಿ ಚಿಕಿತ್ಸೆ ನಂತರ ಕಳೆದ ಎ.3ರಂದು ಸೇನೆಯ ವಾಹನದಲ್ಲಿ ಸಂತೋಷ್ ಅವರನ್ನು ಮುಡಿಪುವಿನ ಮನೆಗೆ ತಲುಪಿಸಲಾಗಿದೆ.
ತೋಳಲ್ಲಿ ಶಕ್ತಿ ಇರೋವರೆಗೂ ಭಾರತ ಮಾತೆಯ ಸೇವೆಗೈಯುವ ನಿರ್ಧಾರ ತಳೆದಿದ್ದೆ. ಅದಕ್ಕಾಗಿ ಸೇನಾ ಕ್ಯಾಂಪಿನಲ್ಲೇ ಪದವಿ ಶಿಕ್ಷಣವನ್ನೂ ಮುಗಿಸಿದ್ದೆ. ಮುಂದೆ ಸೇನೆಯಲ್ಲಿ ಕರ್ತವ್ಯ ಮುಂದುವರಿಸಲು ವೈದ್ಯಕೀಯ ಪ್ರಮಾಣ ಪತ್ರವೇ ಪ್ರಮುಖವೆನಿಸುತ್ತದೆ ಎನ್ನುತ್ತಾರೆ ಸಂತೋಷ್.
ಇರುವ ಓರ್ವ ಮಗನನ್ನು ಕಷ್ಟಪಟ್ಟು ಬೀಡಿ ಕಟ್ಟಿ ಸಾಕಿದ್ದೇನೆ.ಉಗ್ರರ ಜೊತೆಗಿನ ಸೆಣಸಾಟದಲ್ಲಿ ದೇವರು ನನ್ನ ಮಗನನ್ನು ಬದುಕುಳಿಸಿದ್ದೇ ದೊಡ್ಡದು.ನನ್ನ ತಾಯ್ತನದ ಮನಸಿನ ವಿರೋಧದಲ್ಲೂ ಸೇನೆಗೆ ಸೇರಿ ದೇಶದ ವೈರಿಗಳನ್ನು ಕೊಂದ ಮಗನ ಪರಾಕ್ರಮದ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಎನ್ನುತ್ತಾರೆ ಸಂತೋಷ್ ತಾಯಿ ವಿಮಲಾ.
………
ನಮ್ಮದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿ ತಾವೇ ಕೈಯಾರೆ ಕೊಟ್ಟಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವವರು ದೇಶದ ಒಳಗಿರುವ ಈ ಕಾಲದಲ್ಲಿ ಎದೆಯೊಡ್ಡಿ ಉಗ್ರರ ವಿರುದ್ಧ ಕಾದಾಡಿ ದೇಶಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಸಂತೋಷ್ ಬೆಟ್ಟದಷ್ಟು ಎತ್ತರಕ್ಕೆ ನಿಲ್ಲುತ್ತಾರರೆ. ಅವರೊಂದಿಗೆ ಅವರ ಇಡೀ ಕುಟುಂಬಕ್ಕೂ ದೇಶ ಕೃತಜ್ಞ. ಈ ಜಿಲ್ಲೆಯ ಹೆಮ್ಮೆಯ ಯೋಧ ಸಂತೋಷ್ ಅವರು ಶೀಘ್ರ ಚೇತರಿಸಿಕೊಳ್ಳಲೆಂದು www.bantwalnews.com (ಬಂಟ್ವಾಳನ್ಯೂಸ್) ಬಳಗವೂ ಹಾರೈಸುತ್ತದೆ. ಹಾಗೂ ಅವರಿಗೆ ಬಿಗ್ ಸೆಲ್ಯೂಟ್.
Be the first to comment on "ದೇಹಕ್ಕೆ ಗುಂಡು ಹೊಕ್ಕರೂ ಉಗ್ರನ ತಲೆಯುರುಳಿಸಿದ ವೀರಯೋಧ"