ತುಳು ಸಂಸ್ಕೃತಿ, ಬದುಕನ್ನು ಪರಿಚಯಿಸುವ ರಾಣಿ ಅಬ್ಬಕ್ಕ ಸ್ಮಾರಕ ವಸ್ತುಸಂಗ್ರಹಾಲಯ ವಿಶ್ವಕ್ಕೆ ಮಾದರಿಯಾಗಿದ್ದು, ಹೊಸಪೀಳಿಗೆಗೆ ದಾರಿದೀಪವಾಗಬೇಕು ಎಂದು ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್.ಯು.ಪಣಿಯಾಡಿ ಸ್ಮಾರಕ ಗ್ರಂಥಾಲಯ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಸಾಂಸ್ಕೃತಿಕ ಇತಿಹಾಸವನ್ನು ಅರಿಯು ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಸಾಂಸ್ಕೃತಿಕ ಕೇಂದ್ರಗಳು ಜಾಸ್ತಿಯಾಗಬೇಕು:
ತುಳುನಾಡಿನಲ್ಲಿ ಇಂದು ಧಾರ್ಮಿಕ ಶ್ರದ್ಧೆಯ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತವೆ. ಆದರೆ ಶಾಶ್ವತವಾಗಿ ತುಳು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಇಂದು ನಡೆಯಬೇಕಾಗಿದ್ದು, ತುಕಾರಾಮ ಪೂಜಾರಿಯವರ ಶ್ರಮ ಶ್ಲಾಘನೀಯ ಎಂದರು.
ಜರ್‍ಮನಿಯವರು ತುಳು ಬದುಕಿನ ದಾಖಲಾತಿಯನ್ನು ಮಾಡಿರುವುದನ್ನು ಉಲ್ಲೇಖಿಸಿದ ಡಾ.ಹೆಗ್ಗಡೆ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಪೂರಕವಾಗಿ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ ಕೆಲಸ ಮಾಡುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ ಹಾಗೂ ಎಸ್.ಯು. ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಬಂಟ್ವಾಳದಲ್ಲಿರುವುದು ನಮ್ಮ ಹೆಮ್ಮೆ ಎಂದರು.
ಮುಖ್ಯ ಅತಿಥಿಯಾಗಿ ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ ಸಾಮಾಜಿಕ ಬಾಂಧವ್ಯ ಬೆಸೆಯುವ ಕಾರ್ಯ ಇಂದು ನಡೆಯಬೇಕು, ಇಂದು ವಿದ್ಯಾವಂತರಲ್ಲಿ ಡೈವೋಸ್ ಹೆಚ್ಚಾಗುತ್ತಿದೆ. ಆದರೆ ಸಾಮಾನ್ಯ ವ್ಯಕ್ತಿಗಳಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಉಳಿದಿದೆ. ಸಂಸ್ಕೃತಿಯ ಅರಿವು ನಮಗಾದರೆ ಇತಿಹಾಸದ ವಿಚಾರ ನಮಗೆ ದೊರಕುವುದು ಸಾಧ್ಯ ಎಂದರು.
ಯಾರೂ ಸ್ಪಾನ್ಸರ್ ಗಳು ಇಲ್ಲವೇ
ನಮ್ಮ ಸರಕಾರಿ ವಸ್ತು ಸಂಗ್ರಹಾಲಯಗಳೇ ಸುಸ್ಥಿತಿಯಲ್ಲಿಲ್ಲ. ಹಾಗಿದ್ದಾಗ ಯಾರಾದರೂ ವಸ್ತು ಸಂಗ್ರಹಾಲಯಕ್ಕೆ ನೆರವು ನೀಡಿ ಎಂದು ಕೇಳಿದರೆ ಸ್ಪಾನ್ಸರ್ ಗಳು ಇಲ್ಲವೇ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಸ್ತವ ವಿಚಾರವನ್ನು ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್ ಬಿಚ್ಚಿಟ್ಟರು.
ಎಸ್.ಯು.ಪಣಿಯಾಡಿ ಅವರ ಪುತ್ರಿ, ಹಿರಿಯ ಚಿತ್ರನಟಿ, ನಿರ್ಮಾಪಕಿ ಹರಿಣಿ ಎಸ್ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಜಗದೀಶ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಡಾ. ಆಶಾಲತಾ ಎಸ್. ಸುವರ್ಣ ವಂದಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ. ಆರ್. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಸ್ತುಸಂಗ್ರಹಾಲಯಗಳು ಹೊಸಪೀಳಿಗೆಗೆ ದಾರಿದೀಪ: ಡಾ. ಹೆಗ್ಗಡೆ"