ಅಕ್ರಮ ಮರಳುಗಾರಿಕೆ ವಿರುದ್ಧ ಬಂಟ್ವಾಳ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.
ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್. ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಪಿ.ಎಸ್.ಐ. ನಂದಕುಮಾರ್ ಮತ್ತು ಸಿಬ್ಬಂದಿ ತಾಲೂಕಿನ ಸಂಗಬೆಟ್ಟು ಬಳಿಯ ಓಡದ ಕರಿಯ ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಯಂತ್ರದ ಮೂಲಕ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಮರಳುಗಾರಿಕೆ ಅಡ್ಡೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಮರಳುಗಾರಿಕೆಗೆ ಬಳಸಿದ್ದ ಯಂತ್ರೋಪಕರಣಗಳು,ಸುಮಾರು 30 ಲೋಡಿನಷ್ಟು ಮರಳನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಫಲ್ಗುಣಿ ನದಿಯಲ್ಲಿ ದೋಣಿಗೆ ಯಂತ್ರವನ್ನು ಸಿಕ್ಕಿಸಿ ಅದರ ಸಹಾಯದಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪ್ರಶಾಂತ್,ನವನೀತ್,ಚೇತನ್ ಎಂಬವರನ್ನು ಬಂಧಿಸಲಾಗಿದ್ದು, ಇದರ ರೂವಾರಿ ರಜನೀಶ ಎಂಬಾತ ತಲೆ ಮರೆಸಿ ಕೊಂಡಿದ್ದಾನೆ ಎಂದು ಡಿವೈಎಸ್ಪಿ ರವೀಶ್ ತಿಳಿಸಿದ್ದಾರೆ. ಮರಳುಗಾರಿಕೆಗೆ ಬಳಸಿದ್ದ ಒಂದು ಡಿಗ್ಗಿಂಗ್ ಯಂತ್ರ ಅಳವಡಿಸಿದ ದೋಣಿ,ಒಂದು ಹಿಟಾಚಿ,ಎರಡು ಲಾರಿ,ಸುಮಾರು 30 ಲೋಡಿನಷ್ಟು ಮರಳು, ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 80 ಲ.ರೂ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಸಿಬಂದಿಗಳಾದ ಸೀತಾರಾಮ್, ಕೃಷ್ಣ, ಗೋಣಿ ಬಸಪ್ಪ, ಚಾಲಕ ಸತ್ಯಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಪೊಲೀಸರ ದಾಳಿ"